ಬೆಂಗಳೂರು: ಸ್ವಯಂಘೋಷಿತ ಸೇವಾ ಸಂಸ್ಥೆ ಆರ್ಎಸ್ಎಸ್ ಬಗ್ಗೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ಎತ್ತಿದ ಪ್ರಶ್ನೆಗಳಿಗೆ ಉತ್ತರ ಹೇಳುವ ಬದಲು ಸತ್ಯವನ್ನು ದಾಟಿಸುವ ಹುನ್ನಾರದೊಂದಿಗೆ ಬಿಜೆಪಿಯು ದಾಸರ ಪದಗಳನ್ನು ಹೇಳುತ್ತಾ ಜನರ ದಿಕ್ಕು ತಪ್ಪಿಸುತ್ತಿದೆ ಎಂದು ಜೆಡಿಎಸ್ ತಿರುಗೇಟು ನೀಡಿದೆ.
ಸಮಾಜದ ಉದ್ದಾರಕ್ಕಾಗಿ ದಾಸಶ್ರೇಷ್ಠರು ಬರೆದ ಕೃತಿಗಳನ್ನು ರಾಜಕೀಯಕ್ಕೆ ಬಳಸಿಕೊಳ್ಳುವ ಹೀನ ಕೆಲಸವನ್ನು ಬಿಜೆಪಿ ಮಾಡುತ್ತಿದೆ. ‘ಆಚಾರವಿಲ್ಲದ ನಾಲಿಗೆ, ನಿನ್ನ ನೀಚ ಬುದ್ಧಿಯ ಬಿಡು ನಾಲಿಗೆ’ ಎನ್ನುವುದು ಬಿಜೆಪಿಯ ಎಲುಬಿಲ್ಲದ ನಾಲಿಗೆಯ ಸಂಸ್ಕಾರವನ್ನು ಸಾರುತ್ತಿದೆ ಎಂದು ಟ್ವೀಟ್ ಮೂಲಕ ಟೀಕಿಸಿದೆ.
ಹೇಳುವುದು ಆಚಾರ, ಮಾಡುವುದು ಅನಾಚಾರ. ಜನರಿಗೆ ಗೊತ್ತಿದೆ ನಿಮ್ಮ ಸದಾನಂದ ಪರಿವಾರ. ರಾಜ್ಯದಲ್ಲಿ ಭ್ರಷ್ಟಾಚಾರ ಎಸಗಿ ಜೈಲಿಗೆ ಹೋಗಿ ಇತಿಹಾಸ ಸೃಷ್ಠಿಸಿದ ಮುಖ್ಯಮಂತ್ರಿ ಯಾವ ಪಕ್ಷದವರು? ಅವರ ಹಿಂದೆಯೇ ಹಿಂಡು ಹಿಂಡಾಗಿ ಜೈಲು ಕಂಬಿ ಎಣಿಸಿದ ಸಚಿವ ಶಿಖಾಮಣಿಗಳು ಯಾವ ಪಕ್ಷದವರು?
ಸಂಘ ಸಂಸ್ಕಾರ ಪಡೆದು ಸದನದಲ್ಲಿ ಅಶ್ಲೀಲ ದೃಶ್ಯಗಳನ್ನು ನೋಡಿದವರು ಯಾವ ಪಕ್ಷದವರು?, ಸಿಡಿ ಸುಳಿಯಲ್ಲಿ ಸಿಕ್ಕಿ ರಾಜೀನಾಮೆ ಕೊಟ್ಟ ಶೀಲವಂತರು ಯಾವ ಪಕ್ಷದವರು?, ನಿಮ್ಮ ನಾಯಕರ ಲೀಲೆಗಳು ಜನರಿಗೆ ಗೊತ್ತಿಲ್ಲ ಎನ್ನುವ ದರ್ಪವೇ? ಅನಾಚಾರವೆಂಬುದು ಬಿಜೆಪಿ ಕಾಯಕ, ಅಭ್ಯಾಸ, ನಿತ್ಯದ ದಿನಚರಿ ಮತ್ತು ಚಾಳಿ.