ಬೆಂಗಳೂರು: ಹೆಚ್.ಡಿ ದೇವೇಗೌಡರು ಪ್ರಧಾನಿಯಾಗಿ ಜನರ ಮನ ಗೆಲ್ಲಲಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹೇಳಿದ್ದಾರೆ. ಇಡೀ ದೇಶದಲ್ಲಿ ದಶಕಗಳ ಕಾಲ ಅಧಿಕಾರ ನಡೆಸಿದ ಕಾಂಗ್ರೆಸ್ ಪಕ್ಷ ಇಂದು ಶೋಚನಿಯ ಸ್ಥಿತಿಗೆ ಏಕೆ ಇಳಿದಿದೆ?, ಜನರ ಮನಸ್ಸು ಗೆಲ್ಲಲಿಲ್ಲವೊ? ಅಥವಾ ಜನರು ತಮ್ಮ ಮನಸ್ಸನ್ನು ನಿಮ್ಮಂತಹ ದ್ರೋಹಿಗಳಿಗೆ ಸ್ಥಾನವನ್ನೇ ಕೊಡಲಿಲ್ಲವೊ? ಎಂದು ಜೆಡಿಎಸ್ ಪ್ರಶ್ನಿಸಿದೆ.
ಈ ಬಗ್ಗೆ ಸರಣಿ ಟ್ವೀಟ್ ಮಾಡಿದ ಜೆಡಿಎಸ್, "ಶಿವಕುಮಾರ್ ಅವರೇ, ಅಧಿಕಾರದ ಮದದಿಂದಾಗಿ ಬಾಯಿಗೆ ಬಂದಂತೆ ಮಾತನಾಡುವ ಕೆಟ್ಟ ಚಾಳಿ ಬಂದಿರಬೇಕು ನಿಮಗೆ. ದೇವೇಗೌಡರು 11 ತಿಂಗಳ ಕಾಲ ಪ್ರಧಾನಿಯಾಗಿ ಏನೆಲ್ಲ ಕೆಲಸ ಮಾಡಿದರು, ಕರ್ನಾಟಕದ ಏಳಿಗೆಗೆ ಯಾವೆಲ್ಲ ಕೊಡುಗೆ ನೀಡಿದರು ಎಂಬ ಸತ್ಯ ಕನ್ನಡಿಗರಿಗೆ ಗೊತ್ತಿದೆ. ನಿಮ್ಮ ಹಳಹಳಿಕೆಗೆ ಜನ ಮರುಳಾಗುವುದಿಲ್ಲ" ಎಂದು ವಾಗ್ದಾಳಿ ನಡೆಸಿದೆ.
"ಈ ರೀತಿಯ ಉಡಾಫೆ ಹೇಳಿಕೆ ನೀಡಿದವರಲ್ಲಿ ನೀವು ಮೊದಲೂ ಅಲ್ಲ, ಕೊನೆಯವರೂ ಆಗುವುದಿಲ್ಲ. ಚುನಾವಣೆಯಲ್ಲಿ ಮತ ಪಡೆಯಲು ಇಂತಹ ಕೀಳು ಮಟ್ಟದ ತಂತ್ರಗಳನ್ನು ಬಳಸಿದರೆ ಕನ್ನಡಿಗರು ನಂಬುವುದಿಲ್ಲ. ದೇವೇಗೌಡರು, ಹಲವು ನೋವುಗಳನ್ನುಂಡು ವಿಷಕಂಠನಾಗಿ, ಈಗಲೂ ನಾಡು-ನುಡಿಗೆ ಕಟಿಬದ್ಧವಾಗಿ ಕೆಲಸ ಮಾಡುತ್ತಿದ್ದಾರೆ" ಎಂದು ಹೇಳಿದೆ.
’ನಡೆ-ನುಡಿ ಬದಲಿಸಿಕೊಳ್ಳಿ’: "ಪ್ರಧಾನಿ ಸ್ಥಾನದಿಂದ ಅವರನ್ನು ಹೇಗೆ ಇಳಿಸಲಾಯಿತು ಎಂಬುದು ಜಗಜ್ಜಾಹಿರಾಗಿರುವ ಸತ್ಯ. ಆ ಬಗ್ಗೆ ಮತ್ತೆ ಈಗ ಭ್ರಮಾತ್ಮಕ ಸುಳ್ಳುಗಳನ್ನು ಹೇಳಿದರೆ ಅದು ನಿಮಗೇ ತಿರುಗುಬಾಣವಾಗಲಿದೆ. ಜನರು ನಿಮ್ಮನ್ನು ಉದಾಸೀನವಾಗಿ ಪರಿಗಣಿಸುವ ಮುನ್ನ, ನಡೆ-ನುಡಿ ಬದಲಿಸಿಕೊಳ್ಳಿ. ಇಲ್ಲವಾದರೆ ಜನರು ನಿಮ್ಮನ್ನು ತಿರಸ್ಕರಿಸುತ್ತಾರಷ್ಟೆ" ಎಂದು ತಿರುಗೇಟು ನೀಡಿದೆ.
ಶಾಲೆಗಳ ಬಗ್ಗೆ ಈ ಪರಿ ತಾತ್ಸಾರವೇ?:ರಾಜ್ಯ ಸರ್ಕಾರಿ ಶಾಲೆಗಳಲ್ಲಿ ಕಲಿಕೆಗೆ ಅಗತ್ಯವಾಗಿ ಬೇಕಿರುವ ಸೀಮೆಸುಣ್ಣ (ಚಾಕ್ ಪೀಸ್) ಖರೀದಿಸಲು ಅನುದಾನವಿಲ್ಲದ ಸ್ಥಿತಿ ಬಿಜೆಪಿ ಸರ್ಕಾರದಲ್ಲಿ ಎದುರಾಗಿದೆ ಎಂದು ಜೆಡಿಎಸ್ ಟೀಕಿಸಿದೆ. ಈ ಕುರಿತು ಸರಣಿ ಟ್ವೀಟ್ ಮಾಡಿರುವ ಜೆಡಿಎಸ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಅವರೇ, ಇದಕ್ಕಿಂತ ನಾಚಿಕೆಗೇಡಿನ ಸಂಗತಿ ಏನಿದೆ?. ಬಡವರ ಮನೆಯ ಮಕ್ಕಳು ಕಲಿಯುವ ಶಾಲೆಗಳ ಬಗ್ಗೆ ಈ ಪರಿ ತಾತ್ಸಾರವೆ? ಎಂದು ಪ್ರಶ್ನಿಸಿದೆ.
ಬಿಜೆಪಿಗೆ ಎಷ್ಟು ಉಗಿದರೂ ಕಡಿಮೆ ಎಂದು ಜೆಡಿಎಸ್ ಆಕ್ರೋಶ:ಶಾಲೆಗಳ ನಿರ್ವಹಣೆಗೆ ಅಗತ್ಯ ಬೇಕಾದ ಅನುದಾನಕ್ಕೂ ಕೊಕ್ಕೆ ಹಾಕಿ, ಶಾಲಾ ಆಡಳಿತ ಸಿಬ್ಬಂದಿ ಬೇಡುವ ಪರಿಸ್ಥಿತಿಗೆ ನೂಕಿರುವ ರಾಜ್ಯ ಬಿಜೆಪಿಗೆ ಎಷ್ಟು ಉಗಿದರೂ ಕಡಿಮೆ. 2022ರ ಮೇ ತಿಂಗಳಿನಿಂದ ಸಮರ್ಪಕ ಅನುದಾನ ಕೊಡದೆ, ಸರ್ಕಾರಿ ಶಾಲೆಗಳ ಕತ್ತು ಹಿಸುಕುತ್ತಿರುವ ಸರ್ಕಾರದ ಕ್ರೂರ ನಡೆ ನಿಜಕ್ಕೂ ಆಕ್ರೋಶ ತರಿಸುವಂತದ್ದು ಎಂದು ವಾಗ್ದಾಳಿ ನಡೆಸಿದೆ.
ಸರ್ಕಾರಿ ಶಾಲೆ ಮುಚ್ಚುವ ಹುನ್ನಾರವೇ?: ಸರ್ಕಾರದ ನಿರ್ಲಕ್ಷ್ಯದಿಂದ ಕನಿಷ್ಠ ಸೌಕರ್ಯಗಳಿಲ್ಲದೆ ಸೊರಗಿರುವ ಶಾಲೆಗಳು ಅವನತಿಯ ಅಂಚಿಗೆ ಬಂದಿರುವುದು ಶೋಚನಿಯ. ಸರ್ಕಾರಿ ಶಾಲೆಗಳು ಮುಚ್ಚಿ, ಖಾಸಗಿಯವರಿಗೆ ಅನುಕೂಲ ಮಾಡಿಕೊಡಲು ಸರ್ಕಾರವೇ ಈ ಹುನ್ನಾರ ಹೆಣಿದಿದೆಯೆ?. ಒಟ್ಟಿನಲ್ಲಿ ಬಡವರ ಮನೆಯ ಮಕ್ಕಳಿಗೆ ಶಿಕ್ಷಣದಿಂದ ವಂಚಿಸುವ ವಿಕೃತ ನಡೆ ಇದಾಗಿದೆ. ಕಾಸಿಗೆ ತಕ್ಕ ಹಾಗೆ ಕಜ್ಜಾಯ ಎಂಬಂತಾಗಿದೆ ಶಿಕ್ಷಣ ವ್ಯವಸ್ಥೆ. ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಬಡವರು ಗುಣಮಟ್ಟದ ಶಿಕ್ಷಣ ಪಡೆಯಲು ಸಾಧ್ಯವಾಗದೆ, ಒಳ್ಳೆಯ ಉದ್ಯೋಗ ಪಡೆಯಲು ಸೋಲುತ್ತಿದ್ದಾರೆ. ಜನರನ್ನು ಪರಾವಲಂಬಿಗಳನ್ನಾಗಿ ಮಾಡುವ ದುರಾಲೋಚನೆ ಸರ್ಕಾರಕ್ಕೆ ಇದೆಯೇ ಎಂಬ ದಟ್ಟ ಅನುಮಾನ ಮೂಡುತ್ತಿದೆ ಎಂದು ಟೀಕಿಸಿದೆ.
ಉನ್ನತ ಶಿಕ್ಷಣ ಪಕ್ಷದ ಆಶಯ:ಪಂಚರತ್ನ ಯೋಜನೆಯಡಿ ಅತ್ಯುನ್ನತ ಮಟ್ಟದ ಶಿಕ್ಷಣವನ್ನು ಉಚಿತವಾಗಿ ನೀಡುವುದು ನಮ್ಮ ಪಕ್ಷದ ಆಶಯ. ಉಳ್ಳವರಿಗೆ ನೆರವು ನೀಡುವ ಹಲವು ಖಾಸಗಿ ಸಂಸ್ಥೆಗಳಿವೆ. ಆದರೆ, ಗ್ರಾಮೀಣ, ಅರೆ ಗ್ರಾಮೀಣ ಭಾಗದ ಮತ್ತು ಬಡವರ ಮಕ್ಕಳನ್ನು ಎಲ್ಲ ರೀತಿಯಲ್ಲೂ ಸದೃಢವಾಗಿಸುವ ಉದ್ದೇಶ ನಮ್ಮದು. ಅದಕ್ಕೆ ಬೇಕಾದ ಬದ್ಧತೆ, ಇಚ್ಛಾಶಕ್ತಿ ನಮ್ಮಲ್ಲಿ ಇದೆ ಎಂದು ಜೆಡಿಎಸ್ ಸಮರ್ಥನೆ ಮಾಡಿಕೊಂಡಿದೆ.
ಇದನ್ನೂ ಓದಿ:ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಎಲ್ಲಾ ವರ್ಗದ ಜನ ಅಧಿಕಾರಕ್ಕೆ ಬಂದಂತೆ: ಡಿ.ಕೆ.ಶಿವಕುಮಾರ್