ಬೆಂಗಳೂರು: ವಿಧಾನಸಭೆ ಚುನಾವಣೆಯಲ್ಲಿ ಸೋತಿರುವ ಬಿಜೆಪಿ ಹಾಗೂ ಜೆಡಿಎಸ್ ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಮೈತ್ರಿ ಮಾಡಿಕೊಳ್ಳುವ ಬಗ್ಗೆ ವೇದಿಕೆ ಸಿದ್ಧವಾಗುತ್ತಿದೆ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿಬರುತ್ತಿತ್ತು. ಆದರೆ, ನಿನ್ನೆ ತಡರಾತ್ರಿವರೆಗೂ ನಡೆದ ಸಭೆಯಲ್ಲಿ ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡ ಈ ಕುರಿತು ಶಾಸಕರೊಂದಿಗೆ ಸುದೀರ್ಘ ಸಮಾಲೋಚನೆ ನಡೆಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಹೆಚ್.ಡಿ.ದೇವೇಗೌಡ, ಯಾವ ಮೈತ್ರಿಕೂಟದ ಜೊತೆಯೂ ಸೇರುವ ಪ್ರಶ್ನೆಯೇ ಇಲ್ಲ. ನಮ್ಮದು ಪ್ರಾದೇಶಿಕ ಪಕ್ಷ. ಈ ಪ್ರಾದೇಶಿಕ ಪಕ್ಷ ಉಳಿಸುವ ನಿಟ್ಟಿನಲ್ಲಿ ಚರ್ಚೆ ಆಗಿದೆ. ನಾನು ಎಲ್ಲರನ್ನೂ ಭೇಟಿ ಮಾಡಿ ಮುಂದೆ ಯಾವ ಮಾರ್ಗದಲ್ಲಿ ಹೋಗಬೇಕೆನ್ನುವ ಸಲಹೆಯನ್ನು ಶಾಸಕರಿಗೆ ನೀಡಿದ್ದೇನೆ. ಒಂದು ಕಡೆ ಎನ್ಡಿಎ, ಇನ್ನೊಂದೆಡೆ ಇಂಡಿಯಾ ಹಾಗಾಗಿ, ನನಗಿರುವ ಅನುಭವವನ್ನು ಅವರ ಬಳಿ ಹಂಚಿಕೊಂಡಿದ್ದೇನೆ. ಹೆಚ್.ಡಿ.ಕುಮಾರಸ್ವಾಮಿ ಪಕ್ಷದ ನಾಯಕರಾಗಿದ್ದಾರೆ. ಅವರು ಪಕ್ಷದ ಹೊಣೆ ಹೊತ್ತು ಕೆಲಸ ಮಾಡುತ್ತಿದ್ದಾರೆ. ನನ್ನ ಅನುಭವವನ್ನು ಅವರಿಗೂ ಹೇಳಿದ್ದೇನೆ. ಇದರ ಜೊತೆಗೆ ಈಗಲೂ ಸಲಹೆ ನೀಡಲು ಸಿದ್ದನಿದ್ದೇನೆ ಎಂದರು.
ಕುಮಾರಸ್ವಾಮಿ ಅವರು ಮೊನ್ನೆ ಪ್ರತಿಪಕ್ಷಗಳ ಸಭೆಗೆ ಐಎಎಸ್ ಅಧಿಕಾರಿಗಳ ಬಳಕೆ ವಿರೋಧೀಸಿ ಟ್ವೀಟ್ ಮಾಡಿದ್ದರು. ಅದನ್ನು ಹಿಡಿದುಕೊಂಡು ಬಿಜೆಪಿ ನಾಯಕರು ಸದನದಲ್ಲಿ ಹೋರಾಟ ಮಾಡಿದರು. ಸದನದಲ್ಲಿ ಬಿಜೆಪಿಗೆ ಸಂಖ್ಯಾಬಲ ಹೆಚ್ಚಿದೆ. ಅದನ್ನು ಕಡೆಗಣಿಸಲು ಸಾಧ್ಯವಿಲ್ಲ. ಬಿಜೆಪಿಯವರು ಕಲಾಪ ಬಹಿಷ್ಕರಿಸಿದರು. ಆಗ ಕುಮಾರಸ್ವಾಮಿ ಅವರು ಸಹ ಬಿಜೆಪಿಯವರನ್ನು ಅನುಸರಿಸಿದರು. ಅದಕ್ಕಾಗಿ ಬಿಜೆಪಿ-ಜೆಡಿಎಸ್ ಒಟ್ಟಾಗಿದೆ ಎಂದು ಕಥೆ ಕಟ್ಟುವುದು ಹಾಗೂ ಸಂಬಂಧ ಕಲ್ಪಿಸುವುದು ಬೇಡ ಎಂದು ಹೆಚ್.ಡಿ.ದೇವೇಗೌಡ ಮೈತ್ರಿ ಕುರಿತ ಊಹಪೋಹಗಳಿಗೆ ತೆರೆ ಎಳೆದರು.