ಬೆಂಗಳೂರು: ಅವರದ್ದು ಖಡಕ್ ಸರ್ಕಾರ, ಇವರದ್ದು ಬೈಠಕ್ ಸರ್ಕಾರ ಎಂದು ರಾಷ್ಟ್ರೀಯ ಪಕ್ಷಗಳ ವಿರುದ್ಧ ಸಿಎಂ ಇಬ್ರಾಹಿಂ ಟೀಕೆ ಮಾಡಿದ್ದಾರೆ.
ವಿಧಾನಸೌಧದಲ್ಲಿ ಮಾತನಾಡಿದ ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ, ಹಿಂದಿ ದಿವಸ್ ಆಚರಣೆ ವಿಚಾರವಾಗಿ ಪ್ರತಿಕ್ರಿಯಿಸಿ, ದಿಲ್ಲಿ, ಹಿಂದಿ ಭಾಷೆ, ಹೈಕಮಾಂಡ್ ಗುಲಾಮಗಿರಿ ಇಲ್ಲಿ ನಡೆಯಲ್ಲ. ನಮ್ಮ ಭಾಷೆ ನಮ್ಮ ಗೌರವ. ಬಸವರಾಜ್ ಬೊಮ್ಮಾಯಿ ಹಣ ತೆಗೆದುಕೊಂಡು ಹಿಂದಿ ಆಚರಣೆ ಮಾಡಲು ಹೊರಟಿದ್ದಾರೆ. ಹಿಂದಿ ಭಾಷೆ ಆಚರಣೆ ಮಾಡೋದರ ವಿರುದ್ಧ ಎಲ್ಲ ಜಿಲ್ಲೆಯಲ್ಲಿ ಸತ್ಯಾಗ್ರಹ ಆರಂಭಿಸಿದ್ದೇವೆ ಎಂದು ತಿಳಿಸಿದರು.
ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಯು.ಟಿ ಖಾದರ್ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿ, ಹಿಂದಿ ಕಲಿಯಲಿ, ಬೇಡ ಅಂದವರು ಯಾರು. ಕನ್ನಡ ಮಾತನಾಡಿದರೆ ಫೈನ್ ಹಾಕುವ ಕಾಲ ಬಂದಿದೆ. ಕರ್ನಾಟಕದ ಹಣವನ್ನು ಹಿಂದಿಗೆ ಹಾಕುವ ಕೆಲಸ ಏಕೆ ಮಾಡ್ತಿದ್ದಾರೆ. ಬಿಜೆಪಿ ಮತ್ತು ಕಾಂಗ್ರೆಸ್ ಗುಲಾಮಗಿರಿ ಪಕ್ಷ. ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಗಪ್ ಚುಪ್, ಖಲಾಸ್. ಬಿಜೆಪಿ ಬೈಠಕ್ ಸರ್ಕಾರ. ಹಿಂದಿಯವರು ಇಲ್ಲಿಗೆ ಬಂದು ಪಾನಿ - ಪೂರಿ, ಸ್ವೆಟರ್ ಮಾರುತ್ತಾರೆ. ನಮ್ಮ ಕನ್ನಡಿಗರು ವಿದ್ಯೆ ಕಲಿತು ಕೆಲಸಕ್ಕೆ ಹೋಗ್ತಾರೆ ಎಂದು ಕಿಡಿಕಾರಿದರು.
ಇದನ್ನೂ ಓದಿ:ಕರ್ನಾಟಕದಲ್ಲಿ ಕನ್ನಡ ಕಡ್ಡಾಯ : ಶೀಘ್ರದಲ್ಲೇ ಕಾನೂನು ಜಾರಿ ಎಂದ ಸಿಎಂ ಬೊಮ್ಮಾಯಿ
ಸಿ.ಟಿ ರವಿಗೆ ಟಾಂಗ್ ನೀಡಿದ ಅವರು, ನಿಮ್ಮವ್ವನ ಭಾಷೆಗೆ ದುಡ್ಡು ಖರ್ಚು ಮಾಡಿ. ಅದನ್ನು ಬಿಟ್ಟು ಬೇರೆಯವರ ಅವ್ವನಿಗೆ ಏಕೆ ಖರ್ಚು ಮಾಡ್ತೀರಾ? ಕನ್ನಡ ಇನ್ನೂ ಸಂಪೂರ್ಣ ನಿಘಂಟು ತುಂಬಿಲ್ಲ. ಮೊದಲು ಆ ಕೆಲಸ ಆಗಲಿ. ನಮ್ಮ ಸರ್ಕಾರ ಬಂದ್ರೆ ಆ ಕೆಲಸ ಮಾಡಲಿದ್ದೇವೆ ಎಂದರು.