ಕರ್ನಾಟಕ

karnataka

ETV Bharat / state

2023ರ ವಿಧಾನಸಭಾ ಚುನಾವಣೆ ಅಖಾಡಕ್ಕೆ ರೆಡಿಯಾಗುತ್ತಿರುವ ಜೆಡಿಎಸ್‍! - ಜನತಾ ಜಲಧಾರೆ

ಮುಂಬರುವ ವಿಧಾನಸಭೆ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ ನಡೆಸಿರುವ ಜೆಡಿಎಸ್, ಇದೀಗಾಗಲೇ​ 100 ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿಯನ್ನು ಅಂತಿಮಗೊಳಿಸಿದೆ.

KN_BNG_01_
ಜೆಡಿಎಸ್​​ ಸಭೆ

By

Published : Sep 27, 2022, 2:32 PM IST

ಬೆಂಗಳೂರು: 2023ರ ವಿಧಾನಸಭೆ ಚುನಾವಣೆಗೆ ಜೆಡಿಎಸ್‍ ಸಿದ್ದತೆ ಮಾಡಿಕೊಳ್ಳುತ್ತಿದೆ. ಜನತಾ ಜಲಧಾರೆ, ಜನತಾಮಿತ್ರ ಯಾತ್ರೆಗಳ ನಂತರ ಅಭ್ಯರ್ಥಿಗಳ ಆಯ್ಕೆ ಆರಂಭಿಸಲಾಗಿದೆ.

ಜೆಡಿಎಸ್‍ ಪಕ್ಷ ಪ್ರಬಲವಾಗಿರುವ ಬೆಂಗಳೂರು ಗ್ರಾಮಾಂತರ, ರಾಮನಗರ, ಚನ್ನಪಟ್ಟಣ, ಮಂಡ್ಯ, ಮೈಸೂರು, ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳ ಅಭ್ಯರ್ಥಿ ಆಯ್ಕೆಯಿಂದ ಹಿಡಿದು ಚುನಾವಣಿಯ ಎಲ್ಲ ಪ್ರಕ್ರಿಯೆ ಹೊಣೆಗಾರಿಕೆ ಖುದ್ದು ಕುಮಾರಸ್ವಾಮಿ ಅವರೇ ನೋಡಿಕೊಳ್ಳುತ್ತಿದ್ದಾರೆ.

ಇತ್ತೀಚಿನ ದಿನಗಳಲ್ಲಿ ರಾಷ್ಟ್ರಮಟ್ಟದ ನಾಯಕರನ್ನು ಭೇಟಿ ಮಾಡುತ್ತಿರುವವುದರ ಜೊತೆಗೆ ಪ್ರಾದೇಶಿಕ ಪಕ್ಷದ ಅಸ್ತಿತ್ವ ಉಳಿಸಿಕೊಳ್ಳಬೇಕಾದ ಜವಾಬ್ದಾರಿಯೂ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಮೇಲಿದೆ. ಹಾಗಾಗಿ ಹಿಂದೆಂದಿಗಿಂತಲೂ ಹೆಚ್ಚು ಪಕ್ಷದ ಚಟುವಟಿಕೆಗಳಲ್ಲಿ ಕುಮಾರಸ್ವಾಮಿ ಸಕ್ರಿಯರಾಗಿದ್ದಾರೆ.

ಅಭ್ಯರ್ಥಿ ಆಯ್ಕೆಗೆ ಹಲವು ರೀತಿಯ ಸರ್ಕಸ್ ಮಾಡುತ್ತಿರುವ ಜೆಡಿಎಸ್‌ ವರಿಷ್ಠರು, ಜನತಾ ಪರ್ವದ ಸಂದರ್ಭದಲ್ಲಿ ಶಾಸಕರು ಹಾಗೂ ಟಿಕೆಟ್ ಆಕಾಂಕ್ಷಿಗಳಿಗೆ ಕೆಲವು ಮಹತ್ವದ ಜವಾಬ್ದಾರಿ ನೀಡಿದ್ದರು. ಜೊತೆಗೆ ಪ್ರಶ್ನಾವಳಿ ಮೂಲಕ ಟಾಸ್ಕ್‌ ಕೊಡಲಾಗಿತ್ತು. ಈ ಟಾಸ್ಕ್‌ನಲ್ಲಿ ಶೇ.75 ಸಾಧನೆ ಮಾಡಿದ 100 ಅಭ್ಯರ್ಥಿಗಳ ಕರಡು ಪಟ್ಟಿ ತಯಾರಿಸಿಕೊಂಡಿದ್ದರು. ಟಿಕೆಟ್ ಆಕಾಂಕ್ಷಿಗಳು ಹೆಚ್ಚಿರುವ ಕಡೆಗಳಲ್ಲಿ ಮುಖಾಮುಖಿ ಭೇಟಿ ಮಾಡಿ ಭಿನ್ನಾಭಿಪ್ರಾಯ ಬಗೆಹರಿಸುವ ಕೆಲಸವನ್ನು ಕುಮಾರಸ್ವಾಮಿ ಅವರು ನಿರಂತರವಾಗಿ ಮಾಡುತ್ತಿದ್ದಾರೆ.

ರಾಜ್ಯದಲ್ಲಿ ವಿವಿಧ ಸಮುದಾಯಗಳ ಸಮಾವೇಶ ಮಾಡಿ ಚುನಾವಣಾ ರಣಕಹಳೆ ಊದುವ ಕೆಲಸಕ್ಕೆ ಕೈ ಹಾಕಲಿದ್ದಾರೆ. ಬಿಜೆಪಿ, ಕಾಂಗ್ರೆಸ್ ಬಲವಾಗಿರುವ ಕಡೆಗಳಲ್ಲಿ ಮಾಡಬೇಕಾದ ತಂತ್ರಗಾರಿಕೆ ಈಗಿನಿಂದಲೇ ಶುರು ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.

ದಸರಾ ಬಳಿಕ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ: ರಾಜ್ಯದಲ್ಲಿ ಯಾವುದೇ ಪಕ್ಷದ ನೆರವು ಪಡೆಯದೇ ಸ್ವತಂತ್ರ ಸರ್ಕಾರ ರಚನೆ ಮಾಡಬೇಕು ಎಂಬ ಗುರಿ ಹೊಂದಿರುವ ಜೆಡಿಎಸ್, ದಸರಾ ಹಬ್ಬ ಮುಗಿದ ನಂತರ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡುವ ಸಾಧ್ಯತೆ ಇದೆ. ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ 123 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಬೇಕೆಂಬ ಗುರಿ ಇಟ್ಟುಕೊಂಡಿರುವ ಜೆಡಿಎಸ್, ಈ ಗುರಿ ತಲುಪಲು ಪಂಚರತ್ನ ಕಾರ್ಯಕ್ರಮಗಳನ್ನು ಜನರ ಮುಂದಿಟ್ಟು ಚುನಾವಣಾ ಪ್ರಚಾರ ಕೈಗೊಳ್ಳಲಿದೆ.

ನಿನ್ನೆ ನಡೆದ ಜೆಡಿಎಸ್‍ ಕಾರ್ಯಕಾರಣಿ ಸಭೆಯಲ್ಲಿ ನವೆಂಬರ್ 1 ರಿಂದ ಪಂಚರತ್ನ ರಥ ಯಾತ್ರೆ ಪ್ರಾರಂಭಿಸಲು ನಾಯಕರು ತೀರ್ಮಾನಿಸಿದ್ದಾರೆ. ಈಗಾಗಲೇ 100 ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿಯನ್ನು ಅಂತಿಮಗೊಳಿಸಲಾಗಿದೆ. ಹಾಲಿ ಶಾಸಕರಲ್ಲಿ ಕೆಲವರನ್ನು ಕೈಬಿಟ್ಟು ಹೊಸಬರಿಗೆ ಮಣೆ ಹಾಕುವ ಸಾಧ್ಯತೆಯೂ ಇದೆ ಎಂದು ಪಕ್ಷದ ಮೂಲಗಳು ಹೇಳಿವೆ.


ಪಂಚರತ್ನ ಯಾತ್ರೆ ಕಾರ್ಯಕ್ರಮದ ನೇತೃತ್ವವನ್ನು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ, ಪಕ್ಷದ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಮತ್ತಿತರ ನಾಯಕರು ವಹಿಸಲಿದ್ದಾರೆ. ಸುಮಾರು 150 ಕ್ಷೇತ್ರಗಳಲ್ಲಿ ಪಂಚರತ್ನ ರಥಯಾತ್ರೆ ಸಾಗಲಿದೆ. ಆಯಾ ಕ್ಷೇತ್ರಗಳಲ್ಲಿ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿರುವ ಅಭ್ಯರ್ಥಿಗಳಿಗೆ ಈ ಕಾರ್ಯಕ್ರಮದ ಹೊಣೆಗಾರಿಕೆ ನೀಡಲಾಗುತ್ತದೆ. ಹಳೇ ಮೈಸೂರು, ಮಧ್ಯ ಕರ್ನಾಟಕ, ಕಲ್ಯಾಣ ಕರ್ನಾಟಕ ಭಾಗದಲ್ಲಿ ಪಂಚರತ್ನ ಕಾರ್ಯಕ್ರಮಕ್ಕೆ ಹೆಚ್ಚಿನ ಒತ್ತು ನೀಡಲಾಗುತ್ತದೆ ಎಂದು ತಿಳಿದುಬಂದಿದೆ.

ಶಿಕ್ಷಣ, ಆರೋಗ್ಯ, ಮಹಿಳಾ ಸಬಲೀಕರಣ, ವಸತಿ, ನೀರಾವರಿ, ರೈತರ ಬದುಕು ಹಸನುಗೊಳಿಸುವ ಭರವಸೆ ಪಂಚರತ್ನ ಕಾರ್ಯಕ್ರಮದ ಮೂಲಕ ನೀಡಿ ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್‌ಗೆ ಸ್ವಂತ ಶಕ್ತಿಯ ಮೇಲೆ ಅಧಿಕಾರ ಹಿಡಿಯುವ ಅವಕಾಶ ಕಲ್ಪಿಸಬೇಕು ಎಂದು ಕೋರಲು ತೀರ್ಮಾನಿಸಲಾಗಿದೆ.

ವಿಭಾಗ ಮಟ್ಟದಲ್ಲಿ ಸಮಾವೇಶ:ಚುನಾವಣೆಗೆ ಪೂರ್ವತಯಾರಿ ಮಾಡಿಕೊಳ್ಳುವ ನಿಟ್ಟಿನಲ್ಲಿ ಜೆಡಿಎಸ್ ನಾಯಕರು ವಿಭಾಗ ಮಟ್ಟದಲ್ಲಿ ಕಾರ್ಯಕರ್ತರ ಸಮಾವೇಶ ನಡೆಸಲು ತೀರ್ಮಾನಿಸಿದ್ದಾರೆ. ಹೆಚ್.ಡಿ.ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ಈಗಾಗಲೇ ಸಭೆ ನಡೆಸಿದ್ದು, ಶಾಸಕರು ಮತ್ತು ಮುಖಂಡರು ಒಪ್ಪಿಗೆ ನೀಡಿದ್ದಾರೆ. ಪಕ್ಷದ ಅಧ್ಯಕ್ಷ ಸಿ.ಎಂ.ಇಬ್ರಾಹಿಂ ಸಮ್ಮುಖದಲ್ಲಿಯೂ ಚರ್ಚೆಗಳು ನಡೆದಿವೆ.

ಚುನಾವಣೆಗೆ ಪಕ್ಷವನ್ನು ಸಜ್ಜುಗೊಳಿಸುವುದಷ್ಟೇ ಈಗ ಎಲ್ಲರ ಎದುರು ಇರುವ ಸವಾಲು ಆಗಿರುವುದರಿಂದ ಶಾಸಕರು ಮತ್ತು ಮಾಜಿ ಶಾಸಕರು ತಮ್ಮ ಕ್ಷೇತ್ರವಲ್ಲದೆ ಮತ್ತೊಂದು ಕ್ಷೇತ್ರದ ಜವಾಬ್ದಾರಿ ಹೊತ್ತುಕೊಳ್ಳುವಂತೆ ಮುಖಂಡರು ಸಲಹೆ ನೀಡಿದ್ದಾರೆ. ಈಗಾಗಲೇ ಒಂದು ಹಂತದ ಚರ್ಚೆ ನಡೆದಿದೆ.

ಅಂತಿಮ ರೂಪ ನೀಡಲು ದೇವೇಗೌಡ ನೇತೃತ್ವದ ಸಭೆ ನಡೆಯಲಿದೆ. ಆದರೆ, ಮೊಣಕಾಲು ನೋವಿನಿಂದ ಬಳಲುತ್ತಿರುವ ದೇವೇಗೌಡರು ವಿಶ್ರಾಂತಿ ಪಡೆಯುತ್ತಿದ್ದಾರೆ. ಅವರು ಗುಣಮುಖರಾದ ಬಳಿಕ ಸಭೆ ನಡೆಸಿ ವಿಭಾಗವಾರು ಸಮಾವೇಶದ ತೀರ್ಮಾನ ತೆಗೆದುಕೊಳ್ಳಲಿದ್ದಾರೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ:ಜೆಡಿಎಸ್ ಪಕ್ಷ ಎಲ್ಲಿದೆ ಅಂತಾ 2023ರಲ್ಲಿ ತೋರಿಸುತ್ತೇವೆ : ಮಾಜಿ ಸಚಿವ ಹೆಚ್‌ ಡಿ ರೇವಣ್ಣ

ABOUT THE AUTHOR

...view details