ಬೆಂಗಳೂರು:ಕಾಲವೂ ಕೂಡಿ ಬರುತ್ತದೆ. ರಾಜ್ಯದಲ್ಲಿ ಜೆಡಿಎಸ್ ಸರ್ಕಾರವೂ ಬರುತ್ತದೆ. ಪಕ್ಷದಲ್ಲಿ ನಿಷ್ಠರಾಗಿರುವ, ಉಳಿಯುವ ಎಲ್ಲರಿಗೂ ಅಧಿಕಾರ, ಜನರ ಸೇವೆ ಮಾಡುವ ಅವಕಾಶ ಸಿಗುತ್ತದೆ ಎಂದು ಮಾಜಿ ಪ್ರಧಾನಮಂತ್ರಿ ಹೆಚ್ ಡಿ ದೇವೇಗೌಡರು ಹೇಳಿದ್ದಾರೆ.
ವಿಧಾನಮಂಡಲ ಅಧಿವೇಶನ, ಪಕ್ಷದ ಬಲವರ್ಧನೆ, ತಾಲೂಕು, ಜಿಲ್ಲಾ ಹಾಗೂ ರಾಜ್ಯ ಘಟಕಗಳ ಪುನಾರಚನೆ, ನೂತನ ಕೋರ್ ಕಮಿಟಿ ರಚನೆ, ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಅನುಸರಿಸಬೇಕಾದ ಕಾರ್ಯತಂತ್ರದ ಬಗ್ಗೆ ಪಕ್ಷದ ರಾಜ್ಯ ಕಚೇರಿ ಜೆಪಿ ಭವನದಲ್ಲಿ ಭಾನುವಾರ ಹಮ್ಮಿಕೊಳ್ಳಲಾಗಿದ್ದ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಯಾರೂ ಎದೆಗುಂದಬೇಕಿಲ್ಲ. ಪಕ್ಷ ಕಟ್ಟಿ. ಸೋಲಿನಿಂದ ಹತಾಶರಾಗುವುದು ಬೇಡ. ಛಲವಿದ್ದರೆ ಗೆಲುವು ಖಚಿತ. ಅಧೈರ್ಯವೇ ಅವಸಾನಕ್ಕೆ ನಾಂದಿ ಆಗುತ್ತದೆ. ಎಚ್ಚರ ಇರಲಿ ಎಂದು ತಿಳಿಸಿದರು.
ರಾಜಕಾರಣ ಗೊಂದಲಮಯವಾಗಿದೆ: ಈ ಪಕ್ಷವನ್ನು ಉಳಿಸಲೇಬೇಕು, ಉಳಿಸುವ ಕೆಲಸವನ್ನು ನಾವೆಲ್ಲರೂ ಸೇರಿ ಮಾಡೋಣ. ಇವತ್ತಿನ ರಾಜ್ಯ ಮತ್ತು ದೇಶದ ರಾಜಕಾರಣ ಗೊಂದಲಮಯವಾಗಿದೆ. ನಾವು ಜನನಿಷ್ಠರಾಗಿ ಅವರ ಜತೆ ನಿಲ್ಲೋಣ ಎಂದು ದೇವೇಗೌಡರು ಕರೆ ನೀಡಿದರು.
ರಾಷ್ಟ್ರೀಯ ಪಕ್ಷಗಳ ದೊಡ್ಡ ದೊಡ್ಡ ನಾಯಕರಲ್ಲಿ ಈಗ ಅಳುಕಿದೆ. ಚುನಾವಣೆಯ ಬಗ್ಗೆ ಭಯವಿದೆ. ನಮಗೆ ಅಂತಹ ಆತಂಕ, ಭಯ ಇಲ್ಲ. ಯಾವುದೇ ತಪ್ಪು ನಮ್ಮಿಂದ ಆಗಿಲ್ಲ. ಅವಕಾಶ ಸಿಕ್ಕಿದಾಗಲೆಲ್ಲ ಜನರ ಪರವಾಗಿಯೇ ಹೋರಾಟ ಮಾಡಿದ್ದೇವೆ ಎಂದು ಅವರು ಹೇಳಿದರು.
ತಮ್ಮ ಭಾಷಣದಲ್ಲಿ ಕೆಲ ಮಾಧ್ಯಮಗಳಲ್ಲಿ ಬಂದ ವರದಿಗಳನ್ನು ಉಲ್ಲೇಖ ಮಾಡಿದ ಮಾಜಿ ಪ್ರಧಾನಿಗಳು, ಜನರು ಅನುಭವಿಸುತ್ತಿರುವ ಸಂಕಷ್ಟಗಳ ಬಗ್ಗೆ ಮಾಧ್ಯಮಗಳು ನಿರಂತರವಾಗಿ ವರದಿ ಮಾಡುತ್ತಿವೆ. ಪತ್ರಿಕೆಗಳನ್ನು ಗಂಭೀರವಾಗಿ ಓದಿ, ಸುದ್ದಿ ಮಾಧ್ಯಮಗಳನ್ನು ಗಮನಿಸಿ. ಜನರ ಸಮಸ್ಯೆಗಳನ್ನು ಸರ್ಕಾರದ ಮುಖಕ್ಕೆ ಹಿಡಿಯಿರಿ. ಹೋರಾಟದಲ್ಲಿ ಅಂಜಿಕೆ ಏಕೆ? ಜನರ ಪರವಾಗಿ ನಿಲ್ಲುವುದಕ್ಕೆ ಅಳುಕು ಏಕೆ? ಎಂದು ನೂತನ ಶಾಸಕರನ್ನು ಮಾಜಿ ಪ್ರಧಾನಿಗಳು ಹುರಿದುಂಬಿಸಿದರು.