ಬೆಂಗಳೂರು: ಕಳೆದ ಒಂದು ವಾರದಿಂದ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರು ನಡೆಸಿದ ಸರ್ಜಿಕಲ್ ಸ್ಟ್ರೈಕ್ಗೆ ಕೈ ಪಡೆ ಸುಸ್ತಾಗಿದೆ. ಹೆಚ್ಡಿಕೆ ಅವರ ಭಾನುವಾರದ ಮಾಧ್ಯಮಗೋಷ್ಟಿ ಒಂದರಿಂದಲೇ ಕಾಂಗ್ರೆಸ್ ಕಕ್ಕಾಬಿಕ್ಕಿಯಾಗಿದೆ. ಹಾಗಾಗಿ ಸದ್ಯ ಜನರ ಗಮನ ಬೇರೆಡೆಗೆ ಸೆಳೆಯಲು ಕಾಂಗ್ರೆಸ್ನವರು ಕರೆಂಟ್ ವೈರ್ ಮೊರೆ ಹೋಗಿದ್ದಾರೆ ಎಂದು ಜೆಡಿಎಸ್ ಪಕ್ಷ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದೆ.
ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಸರಣಿ ಪೋಸ್ಟ್ ಮಾಡಿರುವ ಜೆಡಿಎಸ್, ''ಗ್ಯಾರಂಟಿಗಳ ವೈಫಲ್ಯಕ್ಕೆ ದಿನ ಬೆಳಗಾದರೆ ಜನರಿಗೆ ಮುಖ ತೋರಿಸಿಕೊಳ್ಳಲು, ಬೇರೆ ದಿಕ್ಕಿಲ್ಲದೆ ಕರೆಂಟ್ ವೈರ್ ಹಿಡಿದು ಬಿಟ್ಟಿದೆ. ಈಗ ಕಾಂಗ್ರೆಸ್ಗೆ ಬೇರೆ ದಾರಿ ಕಾಣದಾಗಿದೆ. ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ಮೂರಂಕಿಗೆ ಕುಸಿದಿತ್ತು. ತೆಲಂಗಾಣ ಸೇರಿ ಐದು ರಾಜ್ಯಗಳಲ್ಲಿ ಕಾಂಗ್ರೆಸ್ ಏದುಸಿರು ಬಿಡುತ್ತಿದೆ. ಈಗ ಕಾಂಗ್ರೆಸ್ ಕತ್ತಲಾದ ಮೇಲೆ ಗೋಡೆ ಮೇಲೆ ಪೋಸ್ಟರ್ ಅಂಟಿಸುವ ಪರಿಸ್ಥಿತಿಗೆ ಬಂದಿದೆ'' ಎಂದು ಜೆಡಿಎಸ್ ಕಿಡಿಕಾರಿದೆ.
''ಕಂಬದಿಂದ ಕರೆಂಟ್ ಪಡೆದಿರುವ ಆರೋಪದ ಬಗ್ಗೆ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರು ಸ್ಪಷ್ಟನೆ ಕೊಟ್ಟ ಮೇಲೂ ಕಾಂಗ್ರೆಸ್ ವಿಕೃತಿ ಮಿತಿಮೀರಿದೆ. ಬೆಸ್ಕಾಂನವರು ವಿದ್ಯುತ್ ವೇಗದಲ್ಲಿ ಎಫ್ಐಆರ್ ದಾಖಲಿಸಿದ್ದಾರೆ. ಕುಮಾರಸ್ವಾಮಿ ಅವರು ತಿಹಾರ್ ಜೈಲಿಗೆ ಹೋಗುವ ತಪ್ಪೇನು ಮಾಡಿಲ್ಲ. ಇಡಿ, ಸಿಬಿಐ, ಐಟಿಯವರು ಏನೂ ಹೆಚ್ಡಿಕೆ ಬೆನ್ನು ಹತ್ತಿಲ್ಲ. ಯಾರ್ಯಾರಿಗೋ ಹೆಚ್ ಡಿ ಕುಮಾರಸ್ವಾಮಿ ಹೆದರುವ ಪ್ರಶ್ನೆಯೇ ಇಲ್ಲ'' ಎಂದು ಹೇಳಿದೆ.
''ಕಾಂಗ್ರೆಸ್ ಪಕ್ಷ ಗ್ಯಾರಂಟಿಗಳ ಹೆಸರಿನಲ್ಲಿ ರಾಜ್ಯವನ್ನೇ ಗುಡಿಸಿ ಗುಂಡಾಂತರಿಸಿದೆ. #YstTax, #SstTax, ಕಾಸಿಗಾಗಿ ಪೋಸ್ಟಿಂಗ್, ಸಿಎಂ ಕಚೇರಿಲಿ ಸುಲಿಗೆ, ಗುತ್ತಿಗೆದಾರರಿಂದ ಪರ್ಸಂಟೇಜ್, ಹ್ಯುಬ್ಲೆಟ್ ವಾಚ್.. ಒಂದಾ ಎರಡಾ? ಈ ಎಲ್ಲ ಆರೋಪಗಳನ್ನು ಮುಚ್ಚಿಹಾಕಲು, ಕಾಂಗ್ರೆಸ್ ಇದೀಗ ಯಾವುದೂ ಸಿಗದೆ ಕರೆಂಟ್ ವೈರ್ ಹಿಡಿದು ಕೆಟ್ಟಿದೆ! ಇನ್ನೊಬ್ಬರು ಹೇಳಿದ್ದನ್ನು ತಿರುಚಿ ವಕ್ರೀಕರಿಸುವ ವಿಕೃತಿ ಹೊಂದಿರುವ ಕಾಂಗ್ರೆಸ್ಸಿಗೆ, ಮಾಜಿ ಸಿಎಂ ಸ್ಪಷ್ಟನೆಗಿಂತ ಕೆಟ್ಟ ರಾಜಕಾರಣದಲ್ಲೇ ಹೆಚ್ಚು ನಂಬಿಕೆ. ಅದೇ ಅದರ ಧರ್ಮ. ಕಂಡ ಕಂಡವರ ಭೂಮಿಗೆ ಬೇಲಿ ಹಾಕುವರ ಪರ ಬ್ಯಾಟಿಂಗ್ ಬೀಸಿದ್ದು ಬಿಟ್ಟರೆ ಕಾಂಗ್ರೆಸ್ ಕನ್ನಡಿಗರಿಗಾಗಿ ಏನೂ ಮಾಡಿಲ್ಲ'' ಎಂದು ವಾಗ್ದಾಳಿ ನಡೆಸಿದೆ.
''ಹಳ್ಳ ಹಿಡಿದ ಗ್ಯಾರಂಟಿಗಳು ಕಾಂಗ್ರೆಸ್ಸಿನಲ್ಲಿ ಹಾಲಾಹಲವನ್ನೇ ಸೃಷ್ಟಿಸಿವೆ ಎನ್ನುವುದಕ್ಕೆ ಕುಮಾರಸ್ವಾಮಿ ಅವರ ಮನೆಯ ಕರೆಂಟ್ ವೈರ್ ಕೊಟ್ಟ ಶಾಕೇ ಸಾಕ್ಷಿ. ರಾಜಕೀಯವಾಗಿ ಅವರನ್ನು ಎದುರಿಸಲಾಗದ ಕಾಂಗ್ರೆಸ್ ಪಕ್ಷ, ಕರೆಂಟ್ ವೈರ್ ಹಿಡಿದು ಯುದ್ಧ ಆರಂಭಿಸಿದೆ. ಯುದ್ಧಕ್ಕೆ ನಾವೂ ಸಿದ್ಧರಿದ್ದೇವೆ'' ಎಂದು ಜೆಡಿಎಸ್ ಸವಾಲು ಹಾಕಿದೆ.
''ಕಂಬದ ಕರೆಂಟಿನ ಬಗ್ಗೆ ಕಾಂಗ್ರೆಸ್ ಈ ಪರಿ ಕೈಕೈ ಹಿಚುಕಿಕೊಳ್ಳುತ್ತಿರುವುದನ್ನು ನೋಡಿದರೆ ವೈರ್ನಲ್ಲಿಯೂ ನರಿ ರಾಜಕೀಯ ದಿಟವೆನಿಸುತ್ತದೆ. ಕುಮಾರಸ್ವಾಮಿ ಅವರ ಒಂದೇ ಒಂದು ಕ್ಷಿಪಣಿ ಸಾಕು, ಕಾಂಗ್ರೆಸ್ 'ರಕ್ಕಸ ರಿಪಬ್ಲಿಕ್' ಉಡೀಸ್ ಆಗಲು. ಕಾಂಗ್ರೆಸ್ ಅಂತ್ಯಕಾಲ ಆರಂಭವಾಗಿದೆ'' ಎಂದು ಟೀಕಿಸಿದೆ.
ಇದನ್ನೂ ಓದಿ:ವಿದ್ಯುತ್ ಕಳ್ಳತನದ ಬಗ್ಗೆ ಕುಮಾರಸ್ವಾಮಿ ಒಪ್ಪಿಕೊಂಡಿದ್ದಕ್ಕೆ ಅಭಿನಂದನೆ : ಡಿಸಿಎಂ ಡಿ ಕೆ ಶಿವಕುಮಾರ್