ಬೆಂಗಳೂರು:ರಾಜ್ಯಸಭೆಯಲ್ಲಿ ಅಡ್ಡ ಮತದಾನ ಮಾಡಿದ ಹಿನ್ನೆಲೆಯಲ್ಲಿ ಗುಬ್ಬಿ ಕ್ಷೇತ್ರದ ಶಾಸಕ ಶ್ರೀನಿವಾಸ್ ಹಾಗೂ ಕೋಲಾರ ಕ್ಷೇತ್ರದ ಶಾಸಕ ಶ್ರೀನಿವಾಸ್ ಗೌಡ ಅವರ ಸದಸ್ಯತ್ವ ರದ್ದುಗೊಳಿಸುವಂತೆ ವಿಧಾನಸಭೆ ಸ್ಪೀಕರ್ ಅವರಿಗೆ ನಾಳೆ ಜೆಡಿಎಸ್ ದೂರು ನೀಡಲು ನಿರ್ಧರಿಸಿದೆ. ಈ ಕುರಿತು ಮಾಹಿತಿ ನೀಡಿದ ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ, ಗುಬ್ಬಿ ಶ್ರೀನಿವಾಸ್ ಮತ್ತು ಶ್ರೀನಿವಾಸ್ ಗೌಡ ಅವರನ್ನು ಪಕ್ಷದಿಂದ ಉಚ್ಛಾಟನೆ ಮಾಡಲು ತೀರ್ಮಾನ ಮಾಡಲಾಗಿದೆ ಎಂದರು.
ಮಾಜಿ ಸಿಎಂ, ಶಾಸಕಾಂಗ ಪಕ್ಷದ ನಾಯಕ ಹೆಚ್.ಡಿ. ಕುಮಾರಸ್ವಾಮಿ ವಿಶ್ರಾಂತಿ ಮುಗಿಸಿ ನಾಳೆ ಬರುತ್ತಿದ್ದಾರೆ. ಕಾನೂನು ಹೋರಾಟ ಸಂಬಂಧ ಅವರ ಜೊತೆ ಚರ್ಚಿಸುತ್ತೇವೆ. ನಾಳೆ ಅವರ ಬಳಿ ಸಹಿ ಪಡೆದು ಅಧಿಕೃತ ಆದೇಶ ಹೊರಡಿಸುತ್ತೇವೆ. ಶಾಸಕ ಗುಬ್ಬಿ ಶ್ರೀನಿವಾಸ್ ತಪ್ಪು ಮಾಡಿಲ್ಲ ಅಂದರೆ ಅವತ್ತೇ ಹೇಳಬೇಕಿತ್ತು. ಮತ ಪತ್ರ ಮುಚ್ಚಿಕೊಂಡು ಯಾಕೆ ಮತ ಹಾಕಿದ್ರು?. ಅಮೇಲೆ ಯಾಕೆ ಕುಮಾರಸ್ವಾಮಿ ಬಗ್ಗೆ ಮಾತಾಡಿದ್ರು. ಈಗ ಯಾಕೆ ಆಣೆ ಪ್ರಮಾಣ ಮಾಡ್ತಾರೆ ಎಂದು ವಾಗ್ದಾಳಿ ನಡೆಸಿದರು.