ಕರ್ನಾಟಕ

karnataka

ETV Bharat / state

ರಾಜ್ಯದಲ್ಲಿ ಉಪಚುನಾವಣೆ.. ಜೆಡಿಎಸ್​ ಸೋಲು-ಗೆಲುವಿನ ಇತಿಹಾಸ

ಕಳೆದ ಎರಡು ವರ್ಷಗಳಲ್ಲಿ ಹಲವಾರು ಉಪ ಚುನಾವಣೆಗಳು ರಾಜ್ಯದಲ್ಲಿ ನಡೆದರೂ, ಇದರಲ್ಲಿ ಒಂದೂ ಚುನಾವಣೆಯಲ್ಲಿಯೂ ಸಹ ಜೆಡಿಎಸ್ ಗೆಲುವು ಸಾಧಿಸಲಿಲ್ಲ. ಆದ್ರೆ ಸದ್ಯ ನಡೆಯಲಿರುವ ಸಿಂದಗಿ ಮತ್ತು ಹಾನಗಲ್​ ಉಪ ಚುನಾವಣೆಯಲ್ಲಿ ಜೆಡಿಎಸ್​ ಪ್ರಭಾವ ಮತಗಳ ಬೀರಲಿದೆ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿಬರುತ್ತಿವೆ.

By

Published : Oct 12, 2021, 6:11 PM IST

ಬೆಂಗಳೂರು : ಉಪಚುನಾವಣೆಗಳಲ್ಲಿ ಜೆಡಿಎಸ್ ಗೆಲುವು ಸಾಧಿಸಿದ್ದಕ್ಕಿಂತ ಸೋಲು ಕಂಡಿದ್ದೇ ಹೆಚ್ಚು. ಅದರಲ್ಲೂ ಮತ ವಿಭಜನೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಹರಿದಾಡುತ್ತಿವೆ.

ಈ ಮಾತುಗಳಿಗೆ ನಿದರ್ಶನ ಎಂಬಂತೆ ಕಳೆದ ಎರಡು ವರ್ಷಗಳಲ್ಲಿ ಕೆಲವು ಉಪ ಚುನಾವಣೆಗಳು ರಾಜ್ಯದಲ್ಲಿ ನಡೆದರೂ, ಇದರಲ್ಲಿ ಒಂದೂ ಚುನಾವಣೆಯಲ್ಲಿಯೂ ಸಹ ಜೆಡಿಎಸ್ ಗೆಲುವು ಸಾಧಿಸಲಿಲ್ಲ. ಬದಲಿಗೆ ಮತಗಳ ವಿಭಜನೆಗೆ ಕಾರಣವಾಗಿತ್ತು. ಸದ್ಯ ನಡೆಯಲಿರುವ ಸಿಂದಗಿ ಮತ್ತು ಹಾನಗಲ್​ ಉಪ ಚುನಾವಣೆಯಲ್ಲಿಯೂ ಜೆಡಿಎಸ್​ ಪ್ರಭಾವ ಮತಗಳ ಬೀರಲಿದೆ ಎಂದು ಹೇಳಲಾಗುತ್ತಿದೆ.

ಮೈತ್ರಿ ಸರ್ಕಾರ ಪತನದ ನಂತರ ಉಪ ಚುನಾವಣೆ ಎದುರಿಸಿದ ಜೆಡಿಎಸ್​ ತನ್ನ ಭದ್ರಕೋಟೆ ಕೆ.ಆರ್. ಪೇಟೆಯನ್ನು ಕಳೆದುಕೊಂಡಿತು. ಅದೇ ರೀತಿ ಮಹಾಲಕ್ಷ್ಮಿ ಲೇಔಟ್ ಕ್ಷೇತ್ರವೂ ಸಹ ಜೆಡಿಎಸ್ ತೆಕ್ಕೆಯಿಂದ ಜಾರಿತು. ಗೆದ್ದೇ ಗೆಲ್ಲುತ್ತೇವೆ ಎಂಬ ಆತ್ಮವಿಶ್ವಾಸದಲ್ಲಿದ್ದ ಜೆಡಿಎಸ್‌ ಸೋಲಿನ ಆಘಾತ ಎದುರಿಸಿತು. ಜೆಡಿಎಸ್ 2 ಎರಡನೇ ಸ್ಥಾನಕ್ಕೆ ತೃಪ್ತಿ ಪಟ್ಟುಕೊಳ್ಳುವಂತಾಯಿತು. ಕ್ಷೇತ್ರದಲ್ಲಿ ನಾಯಕ, ಈಡಿಗ, ಮಡಿವಾಳ, ಗಾಣಿಗ, ಕುಂಬಾರ, ದೇವಾಂಗ ಮತ್ತಿತರ ತಳ ಸಮುದಾಯದ ಮತಗಳನ್ನು ಕ್ರೋಢೀಕರಿಸಿದ್ದು, ಮಾತ್ರವಲ್ಲದೇ ಕುರುಬ, ದಲಿತ ಮತ್ತು ಒಕ್ಕಲಿಗರ ಮತಗಳನ್ನು ಯಶಸ್ವಿಯಾಗಿ ವಿಭಜಿಸಿದರ ಪರಿಣಾಮ ಬಿಜೆಪಿಯಿಂದ ಸ್ಫರ್ಧಿಸಿದ್ದ ಕೆ.ಸಿ. ನಾರಾಯಣಗೌಡ ಗೆಲುವು ಸಾಧಿಸಲು ಸಾಧ್ಯವಾಯಿತು ಎಂದೇ ಹೇಳಲಾಗಿತ್ತು. ಜೆಡಿಎಸ್‌ ಭದ್ರಕೋಟೆಯಾಗಿದ್ದ ಕೆ.ಆರ್‌. ಪೇಟೆ ಉಪಚುನಾವಣೆಯಲ್ಲಿ ಪಕ್ಷದ ಸ್ಥಳೀಯ ನಾಯಕರು ನೀಡಿದ ಒಳ ಏಟು ಪಕ್ಷದ ಅಭ್ಯರ್ಥಿ ಬಿ.ಎಲ್. ದೇವರಾಜು ಸೋಲಿಗೆ ಪ್ರಮುಖ ಕಾರಣವಾಯ್ತು ಎನ್ನುವ ಅಂಶವನ್ನು ಜೆಡಿಎಸ್‌ ಕಾರ್ಯಕರ್ತರು ಬಹಿರಂಗವಾಗಿ ಆಕ್ರೋಶ ವ್ಯಕ್ತಪಡಿಸಿದ್ದರು.

ಕಾಂಗ್ರೆಸ್​-ಜೆಡಿಎಸ್​​ ಸರ್ಕಾರದ ಪತನದ ನಂತರ ನಡೆದ ಉಪ ಚುನಾವಣೆಯಲ್ಲಿ 12ರಲ್ಲಿ ಬಿಜೆಪಿ, ಕಾಂಗ್ರೆಸ್‌ 2 ಕಡೆ ಮತ್ತು ಪಕ್ಷೇತರ ಅಭ್ಯರ್ಥಿ ಒಂದು ಕ್ಷೇತ್ರದಲ್ಲಿ ಗೆಲುವು ಸಾಧಿಸಿದ್ದರು. ಜೆಡಿಎಸ್‌ಗೆ ಒಂದು ಸ್ಥಾನವೂ ಸಿಗಲಿಲ್ಲ. ಜೆಡಿಎಸ್ ಶಾಸಕ ಸತ್ಯನಾರಾಯಣ ಅವರ ನಿಧನದಿಂದ ಶಿರಾ ಕ್ಷೇತ್ರದಲ್ಲಿ ಉಪಚುನಾವಣೆ ಎದುರಾಯಿತು. ಇದು ಸಹ ಜೆಡಿಎಸ್ ಭದ್ರಕೋಟೆಯಾಗಿತ್ತು. ಆದರೆ, ಶಿರಾ ಉಪಚುನಾವಣೆಯಲ್ಲಿ ಜೆಡಿಎಸ್ ತೀವ್ರವಾಗಿ ನೆಲ ಕಚ್ಚಿತು. ಆರಂಭದಿಂದಲೂ ಆ ಪಕ್ಷ ಗಮನಾರ್ಹವಾಗಿ ಮತಗಳನ್ನು ಪಡೆಯಲೇ ಇಲ್ಲ. ಜೆಡಿಎಸ್‌ನ ಪ್ರಮುಖ ನೆಲೆಯಾಗಿದ್ದ ಶಿರಾದಲ್ಲಿ ಜೆಡಿಎಸ್ ವರಿಷ್ಠ ಹೆಚ್.ಡಿ. ದೇವೇಗೌಡರು, ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ, ನಿಖಿಲ್ ಕುಮಾರಸ್ವಾಮಿ, ಪ್ರಜ್ವಲ್ ರೇವಣ್ಣ ಹೀಗೆ ಅವರ ಇಡೀ ಕುಟುಂಬವೇ ಕ್ಷೇತ್ರದಲ್ಲಿ ಬೀಡು ಬಿಟ್ಟಿತ್ತು. ಇಷ್ಟೆಲ್ಲ ಕಸರತ್ತು ಮಾಡಿದರೂ ಜೆಡಿಎಸ್‌ಗೆ ತೀವ್ರ ಹಿನ್ನಡೆ ಉಂಟಾಯಿತು.

ಈ ಹಿಂದಿನ‌ ಚುನಾವಣೆಗಳಲ್ಲಿ ಲೀಡ್ ಪಡೆದಿದ್ದ ಮತಗಟ್ಟೆಗಳಲ್ಲೇ ಉಪಚುನಾವಣೆಯಲ್ಲಿ ಜೆಡಿಎಸ್ ಮತವನ್ನು ಪಡೆಯಲು ಆಗಲಿಲ್ಲ. ಕಾರಣ, ಸ್ಥಳೀಯ ನಾಯಕರಲ್ಲಿ ಹೊಂದಾಣಿಕೆ ಕೊರತೆ ಎಂಬ ಚರ್ಚೆಗಳು ನಡೆದವು. ರಾಯಚೂರಿನ ಮಸ್ಕಿ ಮತ್ತು ಬೀದರ್​ನ ಬಸವಕಲ್ಯಾಣ ವಿಧಾನಸಭಾ ಕ್ಷೇತ್ರಗಳಲ್ಲಿ ನಡೆದ ಉಪ ಚುನಾವಣೆಗೆ ಜೆಡಿಎಸ್ ಬಸವಕಲ್ಯಾಣ ಕ್ಷೇತ್ರಕ್ಕೆ ಮಾತ್ರ ಅಭ್ಯರ್ಥಿಯನ್ನು ಹಾಕಿತ್ತು. ಬಸವಕಲ್ಯಾಣ ಕ್ಷೇತ್ರದಲ್ಲಿ ಶೇಕಡಾ 59ರಷ್ಟು ಮತದಾನವಾಗಿತ್ತು. ಇಲ್ಲೂ ಸಹ ಜೆಡಿಎಸ್ ಗೆಲ್ಲಲು ಸಾಧ್ಯವಾಗಲಿಲ್ಲ. ಜೆಡಿಎಸ್ ಅಭ್ಯರ್ಥಿ ಕಣಕ್ಕೆ ಇಳಿದಿದ್ದರಿಂದ ಕಾಂಗ್ರೆಸ್ ಗೆ ಕ್ಷೇತ್ರ ಕೈತಪ್ಪಿತು ಎಂಬ ಮಾತುಗಳು ಕೇಳಿಬಂದವು.

ಮಸ್ಕಿಯಲ್ಲಿ ಬಿಜೆಪಿಯಿಂದ ಪ್ರತಾಪ್ ಗೌಡ ಪಾಟೀಲ್, ಕಾಂಗ್ರೆಸ್ ನಿಂದ ಬಸನಗೌಡ ತುರುವಿಹಾಳ ಸ್ಪರ್ಧಿಸಿದ್ದರು. ಇಲ್ಲಿ ಜೆಡಿಎಸ್ ಅಭ್ಯರ್ಥಿ ಹಾಕದ ಪರಿಣಾಮ ಕಾಂಗ್ರೆಸ್ ನ ಅಭ್ಯರ್ಥಿ ಬಸನಗೌಡ ತುರುವಿಹಾಳ ಗೆಲುವು ಸಾಧಿಸಿದರು. ಉಪ ಚುನಾವಣೆ ಸಂದರ್ಭದಲ್ಲೇ ಕಾಂಗ್ರೆಸ್ ನಾಯಕರು, ಜೆಡಿಎಸ್​ನ್ನು ಬಿಜೆಪಿ ಬಿ ಟೀಮ್ ಎಂದು ವಾಗ್ದಾಳಿ ನಡೆಸಿದ್ದರು. ಇದು ಈಗಲೂ ಮುಂದುವರೆದಿದೆ. ಈ ಎರಡು ಉಪಚುನಾವಣೆಗಳಲ್ಲಿ ಜೆಡಿಎಸ್​ಗೆ ಜನರು ಯಾವ ಮನ್ನಣೆ ನೀಡುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

ABOUT THE AUTHOR

...view details