ಕರ್ನಾಟಕ

karnataka

ETV Bharat / state

ಜಗದೀಶ್ ಶೆಟ್ಟರ್ ಹೋರಾಟದ ರಾಜಕಾರಣಿಯಲ್ಲ, ಊಟದ ಸಮಯಕ್ಕೆ ಬಂದು ಊಟ ಮಾಡಿ ಹೋಗುವ ರಾಜಕಾರಣಿ: ಅಶೋಕ್ ವ್ಯಂಗ್ಯ - ಮಾಜಿ ಡಿಸಿಎಂ ಆರ್ ಅಶೋಕ್

ಪಕ್ಷ ತೊರೆದು ಹೋಗಿ ಪಕ್ಷದ ವಿರುದ್ಧ ಮಾತನಾಡಿರುವ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರಿಗೆ ಮಾಜಿ ಡಿಸಿಎಂ ಆರ್​ ಅಶೋಕ್​ ತಿರುಗೇಟು ನೀಡಿದ್ದಾರೆ.

R Ashok
ಆರ್​ ಅಶೋಕ್​

By

Published : Aug 14, 2023, 1:47 PM IST

Updated : Aug 14, 2023, 3:16 PM IST

ಆರ್​ ಅಶೋಕ್​ ಸುದ್ದಿಗೋಷ್ಠಿ

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಹೋರಾಟದ ರಾಜಕಾರಣಿಯಲ್ಲ, ಊಟದ ಸಮಯಕ್ಕೆ ಸರಿಯಾಗಿ ಬಂದು ಎಲೆ ಹಾಕಿದ ಪಂಕ್ತಿಯಲ್ಲಿ ಕುಳಿತು ಊಟ ಮಾಡಿಕೊಂಡು ಹೋಗುವ ರಾಜಕಾರಣಿ, ಈಗ ಬಿಜೆಪಿಯಲ್ಲಿ ಅಡುಗೆ ಖಾಲಿಯಾಗಿದೆ. ಹಾಗಾಗಿ ಕಾಂಗ್ರೆಸ್​ಗೆ ಹೋಗಿದ್ದಾರೆ ಎಂದು ಮಾಜಿ ಸಚಿವ ಆರ್ ಅಶೋಕ್ ಟಾಂಗ್ ನೀಡಿದ್ದಾರೆ. ಬಿಜೆಪಿಯಲ್ಲಿ ನಾಯಕರಿಲ್ಲ ಎನ್ನುವ ಶೆಟ್ಟರ್ ಹೇಳಿಕೆಗೆ ಮಾಜಿ ಡಿಸಿಎಂ ಈ ತಿರುಗೇಟು ನೀಡಿದ್ದಾರೆ.

ಮಲ್ಲೇಶ್ವರದಲ್ಲಿರುವ ರಾಜ್ಯ ಬಿಜೆಪಿ ಕಚೇರಿ ಜಗನ್ನಾಥ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನಾನು ಹುಬ್ಬಳ್ಳಿಯಲ್ಲಿ ರಾಷ್ಟ್ರಧ್ವಜ ಹಾರಾಟದ ಹೋರಾಟಕ್ಕೆ ಹೋಗಿದ್ದೆ, ಯಡಿಯೂರಪ್ಪ ಅವರ ಜೊತೆಗೆ ನಾನು ನನ್ನ ಸಹೋದರ ಹೋಗಿ ಯಾವುದೋ ತೋಟದಲ್ಲಿ ವಾಸ್ತವ್ಯ ಹೂಡಿ, ನಂತರ ಹೋಗಿ ಹೋರಾಟ ಮಾಡಿದ್ದೆವು. ಆ ಹೋರಾಟದಲ್ಲಿ ಜಗದೀಶ್ ಶೆಟ್ಟರ್ ಕಾಣಿಸಿರಲಿಲ್ಲ. ಯಾವಾಗ ಅಧಿಕಾರ ಬರಲಿದೆಯೋ ಆಗ ಸರಿಯಾಗಿ ಅವರು ಬರುತ್ತಾರೆ.

ಪ್ರತಿಪಕ್ಷ ನಾಯಕರ ಸ್ಥಾನಕ್ಕೆ ಬಿ ಬಿ ಶಿವಪ್ಪ ಅವರ ಆಯ್ಕೆ ಮಾಡುವ ಸಂದರ್ಭದಲ್ಲಿ ಜಗದೀಶ್ ಶೆಟ್ಟರ್ ಹೆಸರು ಇರಲಿಲ್ಲ. ಆದರೆ ಆಯ್ಕೆ ಮಾಡುವ ಸಮಯಕ್ಕೆ ಸರಿಯಾಗಿ ಬಂದರು. ಪ್ರತಿಪಕ್ಷದ ನಾಯಕರಾದರು, ಆಯ್ಕೆ ಮಾಡುವ ಸಮಯಕ್ಕೆ ಸರಿಯಾಗಿ ಬಂದು ಪಕ್ಷದ ಅಧ್ಯಕ್ಷರಾದರು, ಮುಖ್ಯಮಂತ್ರಿಯಾದರು. ಊಟದ ಸಮಯಕ್ಕೆ ಸರಿಯಾಗಿ ಬಂದು ಊಟ ಮಾಡಿಕೊಂಡು ಹೋಗುತ್ತಾರೆ. ಅವರ ಬಗ್ಗೆ ನಾನೇನು ಪ್ರತಿಕ್ರಿಯೆ ನೀಡುವುದಿಲ್ಲ ಎಂದರು.

ಎರಡೇ ತಿಂಗಳಲ್ಲಿ ಭ್ರಷ್ಟಾಚಾರದ ಆರೋಪ:ಬೇರೆ ಪಕ್ಷಗಳ ಸರ್ಕಾರ ಬಂದಾಗ ಆರು ತಿಂಗಳ ನಂತರ ಭ್ರಷ್ಟಾಚಾರದ ಆರೋಪ ಬರುತ್ತಿತ್ತು. ಆದರೆ ಈಗ ಎರಡೇ ತಿಂಗಳಲ್ಲಿ ಭ್ರಷ್ಟಾಚಾರದ ಆರೋಪ ಬಂದಿದೆ. ಹನಿಮೂನ್ ಪೀರಿಯಡ್​ನಲ್ಲಿಯೇ ಭ್ರಷ್ಟಾಚಾರದ ಆರೋಪಕ್ಕೆ ಸಿಲುಕಿದ್ದಾರೆ. ಈ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ಸಚಿವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದೊಂದು ಭ್ರಷ್ಟ ಸರ್ಕಾರ ಬಹಳ ದಿನ ಉಳಿಯುವುದಿಲ್ಲ. ರಾಜ್ಯದ ಜನ ಬುದ್ಧಿ ಕಲಿಸುವ ಕೆಲಸ ಮಾಡುತ್ತಿದ್ದಾರೆ ಎಂದರು.

ಡಿಕೆಶಿ ವಿರುದ್ಧ ಅಶೋಕ್​ ವ್ಯಂಗ್ಯ:ತಮ್ಮ ವಿರುದ್ಧ ಪ್ರಶ್ನೆ ಕೇಳಿದ ಮಾಧ್ಯಮಗಳ ವಿರುದ್ಧ ಡಿ ಕೆ ಶಿವಕುಮಾರ್ ಗರಂ ಆಗಿದ್ದಾರೆ. ಪ್ರಶ್ನೆ ಕೇಳಿದ್ದಕ್ಕೆ, ಅವರು ಪ್ರತಿಯಾಗಿ ನೀವು ಬಿಜೆಪಿ ಏಜೆಂಟ್​ಗಳಾ ಎಂದಿದ್ದಾರೆ. ಅವರು ಕರ್ನಾಟಕದ ಎಲ್ಲರೂ ತಮ್ಮ ವಿರೋಧಿಗಳು ಎನ್ನುವ ನಿಲುವಿಗೆ ಬಂದಿದ್ದಾರೆ. ಕರ್ನಾಟಕದ ಮಾಧ್ಯಮಗಳು ವಿರೋಧಿಗಳು, ಬಿಜೆಪಿಯವರು ವಿರೋಧಿಗಳು, ರಾಜ್ಯದ ಜನ ನಮ್ಮ ವಿರೋಧಿಗಳು ಎನ್ನುವ ಒಬ್ಬಂಟಿತನ ಅವರನ್ನು ಕಾಡುತ್ತಿದೆ. ಹಾಗಾಗಿ ಅವರಿಗೆ ಬಹಳ ಇರುಸು ಮುರುಸಾಗಿದ್ದು, ಏನೇನೋ ಹೇಳಿಕೆ ಕೊಡುತ್ತಿದ್ದಾರೆ. ಕೇವಲ ಅಧಿಕಾರಕ್ಕೆ ಬಂದು ಎರಡೇ ತಿಂಗಳಲ್ಲಿ ಈ ರೀತಿ ಭ್ರಷ್ಟಾಚಾರದ ಆರೋಪಗಳು ಬರುತ್ತವೆ ಎಂದು ಅವರು ಅಂದುಕೊಂಡಿರಲಿಲ್ಲ. ಹಾಗಾಗಿ ಅದರಿಂದ ವಿಚಲಿತರಾಗಿ ಈ ರೀತಿ ಹೇಳುತ್ತಿದ್ದಾರೆ ಎಂದು ಶಾಸಕರ ಪತ್ರ ವಿವಾದ ಕುರಿತು ಮಾಧ್ಯಮ ಪ್ರತಿನಿಧಿಗಳ ತನಿಖೆ ಕುರಿತು ಅಶೋಕ್ ಪ್ರತಿಕ್ರಿಯೆ ನೀಡಿದರು.

ಅವರದ್ದೇ ಪಕ್ಷದ ಶಾಸಕರು ಆರೋಪ ಮಾಡಿದ್ದಾರಲ್ಲ, ಅವರನ್ನ ಅಮಾನತು ಮಾಡ್ತಾರಾ - ಅಶೋಕ್​:ನಾನು ವಿರೋಧ ಪಕ್ಷದಲ್ಲಿದ್ದೇನೆ, ಆರೋಪ ಮಾಡಿದ್ದೇನೆ. ಆದರೆ, ಅವರದ್ದೇ ಪಕ್ಷದ ಶಾಸಕರು ಆರೋಪ ಮಾಡಿದ್ದಾರೆ. ಅವರನ್ನು ಅಮಾನತು ಮಾಡುತ್ತಾರಾ? ಮೊದಲು ಅವರ ಪಕ್ಷದವರ ವಿರುದ್ಧ ಕ್ರಮ ಕೈಗೊಳ್ಳಲಿ ನಮಗೆ ವಿಧಾನಸಭೆ ಇದೆ. ಅಲ್ಲಿ ನಾವು ಏನು ಮಾತನಾಡಬೇಕೋ ಮಾತನಾಡುತ್ತೇವೆ. ಮೊದಲು ಬಸವರಾಜ ರಾಯ ರೆಡ್ಡಿ ಮೇಲೆ ಕ್ರಮ ಕೈಗೊಳ್ಳಲಿ. ನಂತರ ನಮ್ಮ ಬಳಿಗೆ ಬರಲಿ ಎಂದು ಭ್ರಷ್ಟಾಚಾರದ ಆರೋಪ ಕುರಿತು ಅಶೋಕ್ ರಾಜೀನಾಮೆ ಕೊಡುತ್ತಾರಾ ಎನ್ನುವ ಡಿ ಕೆ ಶಿವಕುಮಾರ್ ಹೇಳಿಕೆಗೆ ಟಾಂಗ್ ನೀಡಿದರು.

ನಾವೆಲ್ಲರೂ ವಿರೋಧ ಪಕ್ಷದ ನಾಯಕರೇ- ಆರ್ ಅಶೋಕ್​:ನಾವು 66 ಜನ ಶಾಸಕರಿದ್ದೇವೆ. ಎಲ್ಲರೂ ಕೂಡ ವಿರೋಧ ಪಕ್ಷದ ನಾಯಕರೇ, ಇತಿಹಾಸ ತೆಗೆದು ನೋಡಿ, ಮೊದಲ ಅಧಿವೇಶನದಲ್ಲಿ 10 ಮಂದಿ ಅಮಾನತು ಆಗಿದ್ದೇವೆ. ಭ್ರಷ್ಟಾಚಾರ ಸೇರಿದಂತೆ ಇತರ ವಿಚಾರದಲ್ಲಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದೇವೆ, ಹೋರಾಟ ಮಾಡಿದ್ದೇವೆ. ಅದಕ್ಕಾಗಿ ಹತ್ತು ಜನ ಅಮಾನತು ಆಗಿದ್ದೇವೆ. ಈ ಸರ್ಕಾರವನ್ನು ಸಮರ್ಥವಾಗಿ ನಾವು ಎದುರಿಸಿದ್ದೇವೆ. ಆಗಸ್ಟ್ 15 ನಂತರ ಪ್ರತಿಪಕ್ಷ ನಾಯಕರ ಹೆಸರು ಪ್ರಕಟಿಸುವುದಾಗಿ ಬಸವರಾಜ್ ಬೊಮ್ಮಾಯಿ ಬಳಿ ವರಿಷ್ಠರು ತಿಳಿಸಿದ್ದಾರೆ. ನಮ್ಮದು ರಾಷ್ಟ್ರೀಯ ಪಕ್ಷ ಅದರ ಪ್ರಕಾರ ಆಯ್ಕೆ ಪ್ರಕ್ರಿಯೆ ನಡೆಯಲಿದೆ. ನಮ್ಮದು ಕಾಂಗ್ರೆಸ್ ಪಕ್ಷವಲ್ಲ, ಎಲ್ಲರ ಅಭಿಪ್ರಾಯ ಇತ್ಯಾದಿ ಆಧರಿಸಿ ಮಾತುಕತೆ ನಡೆಯುತ್ತಿದೆ. ಆದಷ್ಟು ಬೇಗ ಪ್ರತಿಪಕ್ಷ ನಾಯಕರ ನೇಮಕಾತಿ ಆಗಲಿದೆ. ಹಾಗಂತ ಈಗ ನಾವು ಯಾವುದೇ ಹೋರಾಟವನ್ನು ನಿಲ್ಲಿಸುವುದಿಲ್ಲ. ಪಕ್ಷದ ರಾಜ್ಯಾಧ್ಯಕ್ಷರ ನೇತೃತ್ವದಲ್ಲಿ ನಾವು ಹೋರಾಟ ಮಾಡುತ್ತೇವೆ ಎಂದರು.

ಇದನ್ನೂ ಓದಿ:ನನ್ನ ಮೇಲಿನ ಭಯದಿಂದ ಇಲ್ಲಸಲ್ಲದ ಆರೋಪ ಮಾಡಲಾಗುತ್ತಿದೆ: ಚಲುವರಾಯಸ್ವಾಮಿಗೆ ಹೆಚ್​ಡಿಕೆ ಟಾಂಗ್

Last Updated : Aug 14, 2023, 3:16 PM IST

ABOUT THE AUTHOR

...view details