ಬೆಂಗಳೂರು: ಕೊರೊನಾ ನಿಯಂತ್ರಣದ ಭಾಗವಾಗಿ ಪಾಸಿಟಿವ್ ಕೇಸ್ಗಳ ಟ್ರೇಸ್, ಟೆಸ್ಟ್, ಟ್ರಿಟ್ಮೆಂಟ್ ಅನ್ನು ಕರ್ನಾಟಕದಲ್ಲಿ ಸಮರ್ಪಕವಾಗಿ ಮಾಡಲಾಗಿದೆ ಈ ವಿಚಾರದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಬಹಳ ಮುಂದಿದ್ದಾರೆ, ಯಡಿಯೂರಪ್ಪ ಟೀಂ ಅತ್ಯುತ್ತಮವಾಗಿ ಕೆಲಸ ಮಾಡಿದೆ ಎಂದು ರಾಜ್ಯ ಸರ್ಕಾರವನ್ನು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ, ಹಾಡಿ ಹೊಗಳಿದ್ದಾರೆ.
ಜನಸೇವೆ ಮಾಡಲು ಡಿಜಿಟಲ್ ಟೂಲ್ ಸಹಕಾರಿಯಾಗಿದೆ. ಕಳೆದ 7 ರಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ವರ್ಚುವಲ್ ರ‍್ಯಾಲಿಗೆ ಚಾಲನೆ ಕೊಟ್ಟಿದ್ದರು. ಇದು 19ನೇ ಜನಸಂವಾದ ವರ್ಚುವಲ್ ರ‍್ಯಾಲಿ ಎನ್ನುತ್ತಾ ಭಾಷಣ ಆರಂಭಿಸಿದ ಜೆಪಿ ನಡ್ಡಾ, ಕೊರೊನಾ ಎಲ್ಲರನ್ನೂ ಹೈರಾಣ ಮಾಡಿದೆ, ಕೊರೊನಾದಿಂದ ಮೃತರಾದವರ ಆತ್ಮಕ್ಕೆ ಶಾಂತಿ ಕೋರುತ್ತೇನೆ. ಮೃತರ ಕುಟುಂಬಗಳಿಗೆ ದುಃಖ ಭರಿಸುವ ಶಕ್ತಿಯನ್ನು ದೇವರು ಕೊಡಲಿ ಎಂದರು.
ಕೊರೊನಾ ವಾರಿಯರ್ಸ್ಗಳ ಕಾರ್ಯ ನಿಜಕ್ಕೂ ಶ್ಲಾಘನೀಯ ನಮ್ಮ ವೈದ್ಯರು, ಆರೋಗ್ಯ ಸಿಬ್ಬಂದಿ, ಪೌರಕಾರ್ಮಿಕರು, ಪೊಲೀಸರು ಎಲ್ಲರೂ ಕೊರೊನಾ ವಿರುದ್ಧ ಜನರ ರಕ್ಷಣೆ ಮಾಡುತ್ತಿದ್ದಾರೆ ಅವರ ಕಾರ್ಯಕ್ಕೆ ಎಲ್ಲರೂ ಋಣಿಯಾಗಿರಬೇಕು ಎಂದರು.
ಕೊರೊನಾ ಬಂದಾಗ ಲಾಕ್ಡೌನ್ ಹೇರಬೇಕಾಯಿತು ಸರ್ಕಾರಕ್ಕೂ ಸಾಕಷ್ಟು ಒತ್ತಡ, ಸವಾಲುಗಳು ಎದುರಾದವು ಈ ಸಂದರ್ಭದಲ್ಲಿ ನಮ್ಮ ಸರ್ಕಾರದ ಎರಡನೇ ಅವಧಿಯ ಮೊದಲ ವರ್ಷ ಪೂರ್ಣವಾಗಿದೆ. ನಮಗೆ ವರ್ಚುವಲ್ ಸಂವಾದ ಕಾರ್ಯಕರ್ತರನ್ನು, ಜನರನ್ನು ತಲುಪಲು ಪರ್ಯಾಯ ಮಾರ್ಗವಾಯಿತು ಎಂದರು.
ಬೇರಡೆ ಹೋಲಿಸಿದರೆ ಬೆಂಗಳೂರಿನಲ್ಲಿ ಕೊರೊನಾ ಕೇಸ್ ಕಡಿಮೆ ಇದೆ. ಯಡಿಯೂರಪ್ಪ ಟೀಂ ಅತ್ಯುತ್ತಮವಾಗಿ ಕೆಲಸ ಮಾಡಿದೆ. ಯಡಿಯೂರಪ್ಪನವರು ಸಹ ಪ್ಯಾಕೇಜ್ ಘೋಷಣೆ ಮಾಡಿದ್ದಾರೆ, ಕೃಷಿಕರು, ಸವಿತಾ ಸಮಾಜ, ಆಟೊ ರಿಕ್ಷಾ ಹೀಗೆ ಹಲವು ಜನರಿಗೆ ಪ್ಯಾಕೇಜ್ ಘೋಷಣೆ ಮಾಡಿದ್ದಾರೆ ಎಂದು ಸಿಎಂ ಬಿ.ಎಸ್. ಯಡಿಯೂರಪ್ಪರ ಕಾರ್ಯಕವನ್ನು ಮುಕ್ತ ಕಂಠದಿಂದ ಶ್ಲಾಘಿಸಿದ ನಡ್ಡಾ, ಯಡಿಯೂರಪ್ಪ ಕೊರೊನಾ ನಿರ್ವಹಣೆ ಮಾಡಿದ್ದು ಮಾದರಿಯಾಗಿದೆ ಎಂದುರು. ವಲಸೆ ಕಾರ್ಮಿಕರ ಬಗ್ಗೆ ಯಡಿಯೂರಪ್ಪ ಕಾಳಜಿ ಮೆಚ್ಚುವಂಥದ್ದು, ದೇಶಕ್ಕೆ ಮೋದಿಯವರು 20 ಲಕ್ಷ ಕೋಟಿ ಪ್ಯಾಕೇಜ್ ಘೋಷಿಸಿದರೂ ಅದಕ್ಕೂ ಮುನ್ನ ರಾಜ್ಯಕ್ಕೆ ಯಡಿಯೂರಪ್ಪ 2,100 ಕೋಟಿ ಪ್ಯಾಕೇಜ್ ಘೋಷಿಸಿದ್ದರು ಎಂದು ರಾಜ್ಯ ಸರ್ಕಾರ ಮತ್ತು ಯಡಿಯೂರಪ್ಪಗೆ ಅಭಿನಂದನೆ ಸಲ್ಲಿಸಿದರು.