ಚಾಮರಾಜನಗರ:ಒಂದೆಡೆ ಸೋಮಣ್ಣ ನಾಮಪತ್ರ ಸಲ್ಲಿಸಲು ಅಬ್ಬರದಿಂದ ಪ್ರಚಾರ ಸಭೆ ನಡೆಸುತ್ತಿದ್ದರೇ ಮತ್ತೊಂದೆಡೆ ಅವರದೇ ಪಕ್ಷದ ಮುಖಂಡನ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿದೆ. ಬಿಜೆಪಿ ಮುಖಂಡ, ಚಾಮರಾಜನಗರ ಟಿಕೆಟ್ ಆಕಾಂಕ್ಷಿಯಾಗಿದ್ದ ವೃಷಬೇಂದ್ರಪ್ಪ ಅವರ ಮನೆ, ಕಚೇರಿ ಮೇಲೆ ಐಟಿ ದಾಳಿ ನಡೆದಿದ್ದು, ವ್ಯಾಪಕ ಶೋಧಕಾರ್ಯ ನಡೆಸುತ್ತಿದ್ದಾರೆ. ಇನ್ನೊಂದೆಡೆ ಸೋಮಣ್ಣ ಟೆಂಪಲ್ ರನ್ ನಡೆಸಿ, ಬಹಿರಂಗ ಸಭೆ ನಡೆಸುತ್ತಿದ್ದಾರೆ.
ಬೆಂಗಳೂರಲ್ಲಿ ಕೆಜಿಎಫ್ ಬಾಬು ನಿವಾಸದ ಮೇಲೆ ಐಟಿ ದಾಳಿ:ಚುನಾವಣೆಗೆ ಸ್ಪರ್ಧಿಸುವ ತಯಾರಿಯಲ್ಲಿದ್ದ ಉದ್ಯಮಿ ಕೆಜಿಎಫ್ ಬಾಬುಗೆ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ಶಾಕ್ ನೀಡಿದ್ದಾರೆ. ಇಂದು ಬೆಳ್ಳಂಬೆಳಗ್ಗೆ ಕೆಜಿಎಫ್ ಬಾಬು ಮನೆ ಮೇಲೆ ದಾಳಿ ನಡೆಸಿರುವ ಐಟಿ ಅಧಿಕಾರಿಗಳ ತಂಡ ಬಾಬು ಅವರ ವಸಂತನಗರದ ನಿವಾಸ ರುಕ್ಸಾನಾ ಪ್ಯಾಲೇಸ್ನಲ್ಲಿ ಪರಿಶೀಲನೆ ಆರಂಭಿಸಿದೆ.
ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದ ಕೆಜಿಎಫ್ ಬಾಬು ಅವರ ಪ್ರಾಥಮಿಕ ಸದಸ್ಯತ್ವ ರದ್ದಾಗಿತ್ತು. ಕಾಂಗ್ರೆಸ್ ಅವರಿಗೆ ಪಕ್ಷದಿಂದ ಟಿಕೆಟ್ ನಿರಾಕರಿಸಿದ ಬಳಿಕ ಬಾಬು ಪಕ್ಷೇತರವಾಗಿ ಕಣಕ್ಕಿಳಿಯುವ ಸಿದ್ಧತೆಯಲ್ಲಿದ್ದಾರೆ ಎನ್ನಲಾಗ್ತಿದೆ.
ಇನ್ನು, ಏ. 4 ರಂದು ಮನೆ ಮನೆಗೆ ಪೋಸ್ಟ್ ಮೂಲಕ ಡಿಡಿ ತಲುಪಿಸುತ್ತಿದ್ದ ಆರೋಪದಡಿ ಕೆಜಿಎಫ್ ಬಾಬು ವಿರುದ್ಧ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿತ್ತು. 1,105 ರೂ. ನಂತೆ ಮೂರು ಸಾವಿರ ಮಂದಿಗೆ ಡಿಡಿ ಕೊಡಲು ಮುಂದಾಗಿದ್ದರು. ಇದರ ಮಾಹಿತಿ ಪಡೆದ ಸಿದ್ದಾಪುರ ಠಾಣೆ ಪೊಲೀಸರು ಕಾರ್ಯಾಚರಣೆ ನಡೆಸಿ ಸುಮಾರು 30 ಲಕ್ಷ ರೂ. ಮೌಲ್ಯದ ಡಿಡಿಗಳನ್ನು ವಶಪಡಿಸಿಕೊಂಡಿದ್ದರು. ಸಿದ್ದಾಪುರದ ಕೆಎಂ ಕಾಲೋನಿಯಲ್ಲಿ ಡಿಡಿ ಹಂಚುತ್ತಿದ್ದ ವೇಳೆ ಕಾರ್ಯಾಚರಣೆ ನಡೆಸಿದ ಪೊಲೀಸರು ಡಿಡಿಗಳನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿಕೊಂಡಿದ್ದರು. ಈ ಪ್ರಕರಣದ ತನಿಖೆ ನಡೆಯುತ್ತಿದೆ.
ಇದನ್ನೂ ಓದಿ:ಮನೆ ಮನೆಗೆ ಡಿಡಿ ತಲುಪಿಸುತ್ತಿದ್ದ ಆರೋಪ: ಕೆಜಿಎಫ್ ಬಾಬು ವಿರುದ್ಧ ಎಫ್ಐಆರ್ ದಾಖಲು