ಬೆಂಗಳೂರು: ಅಕ್ರಮ ಆಸ್ತಿ ಸಂಪಾದನೆ ಹಾಗೂ ತೆರಿಗೆ ವಂಚನೆ ಆರೋಪದ ಹಿನ್ನೆಲೆಯಲ್ಲಿ ಬೆಂಗಳೂರು ಸೇರಿದಂತೆ ರಾಜ್ಯದ 50 ಕಡೆಗಳಲ್ಲಿ ಏಕಕಾಲಕ್ಕೆ 300ಕ್ಕೂ ಹೆಚ್ಚು ಆದಾಯ ತೆರಿಗೆ (ಐಟಿ) ಅಧಿಕಾರಿಗಳಿಂದ ದಾಳಿ ನಡೆದಿದೆ. ಬೆಂಗಳೂರು, ಬಾಗಲಕೋಟೆ ಸೇರಿದಂತೆ ಹಲವೆಡೆ ದಾಳಿ ನಡೆಸಿರುವ ಅಧಿಕಾರಿಗಳು ಮನೆ, ಕಚೇರಿ ಹಾಗೂ ಸಂಬಂಧಿಕರ ನಿವಾಸಗಳ ಮೇಲೆ ದಾಳಿ ನಡೆಸಿ ಮಹತ್ವದ ದಾಖಲಾತಿಗಳ ಬಗ್ಗೆ ಶೋಧ ನಡೆಸುತ್ತಿದ್ದಾರೆ.
ರಾಮಕೃಷ್ಣ ಹೆಗಡೆ ನಗರ ಸೇರಿ ಬೆಂಗಳೂರಿನ 50ಕ್ಕೂ ಹೆಚ್ಚು ಕಡೆ ಗುತ್ತಿಗೆದಾರರು ಹಾಗೂ ಚಾರ್ಟೆಡ್ ಅಕೌಂಟೆಂಟ್ಸ್ ಮನೆಗಳಲ್ಲಿ ಕಾರ್ಯಾಚರಣೆ ನಡೆಸಿದ್ದು, ಬೆಳಗ್ಗೆ 5 ಗಂಟೆಯಿಂದಲೇ ದಾಖಲಾತಿಗಳ ಪರಿಶೋಧನೆ ಕೆಲಸ ನಡೆಯುತ್ತಿದೆ. ನೀರಾವರಿ ಇಲಾಖೆಯಡಿ ಬರುವ ಕಾವೇರಿ, ಕೃಷ್ಣ ಭಾಗ್ಯ ಜಲ ನಿಗಮಗಳ ಟೆಂಡರ್ನಲ್ಲಿ ಕೋಟ್ಯಂತರ ರೂಪಾಯಿ ಗೋಲ್‌ಮಾಲ್ ಆಗಿದೆ ಎನ್ನಲಾಗುತ್ತಿದೆ.
ಗೋಲ್‌ಮಾಲ್ ಮೂಲಕ ಕೋಟಿಗಟ್ಟಲೆ ಹಣ ಸಂಪಾದನೆ ಮಾಡಿ ತೆರಿಗೆ ವಂಚನೆ ನಡೆಸಿರುವ ಬಗ್ಗೆ ಅಧಿಕಾರಿಗಳು ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ. ರಾಮಕೃಷ್ಣ ಹೆಗಡೆ ನಗರದ ನಿವಾಸಿ ನೀರಾವರಿ ಇಲಾಖೆಯ ಚಾರ್ಟೆಡ್ ಅಕೌಂಟೆಂಟ್ ಎನ್ನಲಾಗುತ್ತಿರುವ ಅಮಲಾ ಎಂಬುವರ ಮನೆ ಸೇರಿದಂತೆ ವಿವಿಧ ಕಡೆಗಳಲ್ಲಿ ದಾಖಲೆಗಳ ಪರಿಶೀಲನೆ ನಡೆಯುತ್ತಿದೆ.
ರಾಹುಲ್ ಎಂಟರ್ ಪ್ರೈಸಸ್ ಮೇಲೆ ರೇಡ್:
ಸಹಕಾರ ನಗರದಲ್ಲಿರುವ ರಾಹುಲ್ ಎಂಟರ್‌ಪ್ರೈಸಸ್ ಮೇಲೆ ಐಟಿ ದಾಳಿ ನಡೆಸಿ ಓರ್ವನನ್ನು ಐಟಿ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ. ರಾಹುಲ್ ಎಂಟರ್‌ಪ್ರೈಸಸ್ ನೀರಾವರಿ ಇಲಾಖೆಯ ಟೆಂಡರ್ಗಳಿಗೆ ಕಬ್ಬಿಣ ಹಾಗೂ ಸಿಮೆಂಟ್ ಸರಬರಾಜು ಮಾಡುತ್ತಿತ್ತು ಎನ್ನಲಾಗಿದೆ. ಮೇಲ್ನೋಟಕ್ಕೆ ಅಕ್ರಮ ಕಂಡು ಬಂದ ಹಿನ್ನೆಲೆಯಲ್ಲಿ ಈ ದಾಳಿ ನಡೆಸಲಾಗಿದೆ. ಪರಿಶೀಲನೆ ವೇಳೆ ಮೂಟೆಗಟ್ಟಲೆ ದಾಖಲೆಗಳು ಪತ್ತೆಯಾಗಿವೆ.
ನೀರಾವರಿ ಇಲಾಖೆಗೆ ಸಂಬಂಧಿಸಿದ 30 ಕಾಂಟ್ರಾಕ್ಟರ್ಗಳ ಮನೆಗಳ ಮೇಲೂ ದಾಳಿ ನಡೆದಿದೆ. ಕಾಂಟ್ರಾಕ್ಟರ್ಗಳಿಗೆ ಕಬ್ಬಿಣ ಹಾಗು ಇತರ ಸರಕುಗಳನ್ನು ಗುತ್ತಿಗೆದಾರರು ಸರಬರಾಜು ಮಾಡುತ್ತಿದ್ದರು. ಗುತ್ತಿಗೆದಾರರಿಗೆ ಇದ್ದ ಚಾರ್ಟೆಡ್ ಅಕೌಂಟೆಂಟ್ಗಳು ಮತ್ತು ಅಂಡಿಗಳಿಗೆ ಇದ್ದ ಚಾರ್ಟೆಡ್ ಅಕೌಂಟೆಂಟ್ಗಳ ಮನೆ ಮೇಲೆ ದಾಳಿ ನಡೆದಿದೆ.