ಬೆಂಗಳೂರು :ತೆರಿಗೆ ಪಾವತಿಸದ ಆರೋಪ ಹಿನ್ನೆಲೆ ಎರಡು ದಿನಗಳ ಹಿಂದೆ ಖೋಡೇಸ್ ಗ್ರೂಪ್ ಮೇಲೆ ಆದಾಯ ತೆರಿಗೆ ಇಲಾಖೆ ನಡೆಸಿದ್ದ ದಾಳಿ ವೇಳೆ ಕೋಟ್ಯಂತರ ರೂ.ಮೌಲ್ಯದ ಆಸ್ತಿಗಳು ಪತ್ತೆಯಾಗಿವೆ.
ಮನೆ ಹಾಗೂ ಕಚೇರಿಗಳು ಸೇರಿ ಖೋಡೇಸ್ ಗ್ರೂಪ್‌ಗೆ ಸೇರಿದ 26ಕ್ಕೂ ಹೆಚ್ಚು ಕಡೆ ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿತ್ತು. ಆನಂದ ರಾವ್ ಸರ್ಕಲ್ನ ಶೇಷಾದ್ರಿ ರಸ್ತೆಯಲ್ಲಿರುವ ಖೋಡೇಸ್ ಗ್ರೂಪ್ ಮಾಲೀಕರ ಎರಡು ಮನೆ, ಖೋಡೇಸ್ ಬಿವರೇಜಸ್, ಖೋಡೆ ಆರ್ಸಿಎ, ಖೋಡೆ ಇಂಡಿಯಾ ಫ್ಯಾಕ್ಟರಿಗಳು ಮತ್ತು ಕಚೇರಿ ಸೇರಿದಂತೆ ವಿವಿಧೆಡೆ ಸುಮಾರು ಇಪತ್ತಕ್ಕೂ ಹೆಚ್ಚು ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದರು. ದಾಳಿ ವೇಳೆ ₹878.82 ಕೋಟಿ ಅಕ್ರಮ ಆಸ್ತಿ ಪತ್ತೆಯಾಗಿದೆ.
ಅಪಾರ ಪ್ರಮಾಣದ ರೆಸಿಡೆನ್ಸಿಯಲ್ ಜಾಗವನ್ನ ಕಮರ್ಷಿಯಲ್ ಪ್ರಾಪರ್ಟಿ ಮಾಡಲಾಗಿದೆ. ಬೆಂಗಳೂರು ಮೂಲದ ಡೆವಲಪರ್ ಜೊತೆ ಸೇರಿ ಜಾಯಿಂಟ್ ಒಪ್ಪಂದದ ಮುಖಾಂತರ ಲ್ಯಾಂಡ್ ಬದಲಾವಣೆ ಮಾಡಲಾಗಿದೆ. ಈ ಮೂಲಕ 692.82 ಕೋಟಿ ಆದಾಯ ಗಳಿಸಿದೆ.
ಕೇರಳದ ಲಿಕ್ಕರ್ ಫ್ಯಾಕ್ಟರಿಯಲ್ಲಿ ಲೆಕ್ಕವಿಲ್ಲದ ₹74 ಕೋಟಿ ಹಣ ಸೀಜ್ ಮಾಡಲಾಗಿದೆ. ₹7 ಕೋಟಿ ಹಣವನ್ನ ದೈನಂದಿನ ವ್ಯವಹಾರದಲ್ಲಿ ಸುಳ್ಳು ಖರ್ಚು ತೋರಿಸಲಾಗಿದೆ. ₹9 ಕೋಟಿ ಹಣವನ್ನು ಡೈರೆಕ್ಟರ್ಗಳ ವಿವರಿಸಲಾಗದ ವೆಚ್ಚಕ್ಕೆ ತೋರಿಸಲಾಗಿದೆ ಎನ್ನಲಾಗಿದೆ.
35 ಬೇನಾಮಿಗಳ ಹೆಸರಲ್ಲಿ ಆಸ್ತಿ ಮಾಡಿರೋ ಖೋಡೇಸ್?:ಕಂಪನಿಯ ನೌಕರರು ಮತ್ತು ಆಪ್ತರ ಹೆಸರಲ್ಲಿ ಹಲವಾರು ವರ್ಷಗಳಿಂದ ಬೇನಾಮಿ ಆಸ್ತಿ 150 ಕೋಟಿಯಷ್ಟು ಬೇನಾಮಿಗಳ ಹೆಸರಲ್ಲಿ ಆಸ್ತಿ ಪತ್ತೆಯಾಗಿದೆ. ಕಂಪನಿ ನಿರ್ದೇಶಕರ ಹೆಸರಲ್ಲಿ ವಿದೇಶಿ ಆಸ್ತಿಯನ್ನ ಸಹ ಐಟಿ ಅಧಿಕಾರಿಗಳು ಪತ್ತೆ ಮಾಡಿದ್ದಾರೆ.
ಜಾರಿ ನಿರ್ದೇಶನಾಲಯಕ್ಕೆ ಮಾಹಿತಿ :ಕೋಟ್ಯಂತರ ರೂಪಾಯಿ ಮೌಲ್ಯದ ಬೇನಾಮಿ ಆಸ್ತಿ ಪತ್ತೆ ಹಿನ್ನೆಲೆ ಜಾರಿ ನಿರ್ದೇಶನಾಲಯಕ್ಕೆ ಐಟಿಯಿಂದ ಮಾಹಿತಿ ರವಾನಿಸಿದೆ. ಮಾಹಿತಿ ಖಚಿತವಾಗುತ್ತಿದ್ದಂತೆ ಶೀಘ್ರದಲ್ಲೇ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಿದೆ.