ಕರ್ನಾಟಕ

karnataka

ETV Bharat / state

ಕನ್ನಡ ಮಾತನಾಡುವ ವಾತಾವರಣ, ಅನಿವಾರ್ಯತೆ ಸೃಷ್ಟಿಸುವುದು ಅಗತ್ಯ: ಸಿದ್ದರಾಮಯ್ಯ - ಈಟಿವಿ ಭಾರತ್ ಕನ್ನಡ ಸುದ್ದಿ

ಈ ನಾಡಿನಲ್ಲಿ ವಾಸಿಸುವ ಪ್ರತಿಯೊಬ್ಬರೂ ಕೂಡಾ ಕನ್ನಡ ಮಾತನಾಡುವುದನ್ನು ಕಲಿಯಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಕರ್ನಾಟಕ ಸಂಭ್ರಮ 50-ರ ಲಾಂಛನ ಬಿಡುಗಡೆ ಸಂಭ್ರಮದಲ್ಲಿ ಭಾಗಿಯಾದ ಸಿಎಂ ಸಿದ್ದರಾಮಯ್ಯ
ಕರ್ನಾಟಕ ಸಂಭ್ರಮ 50-ರ ಲಾಂಛನ ಬಿಡುಗಡೆ ಸಂಭ್ರಮದಲ್ಲಿ ಭಾಗಿಯಾದ ಸಿಎಂ ಸಿದ್ದರಾಮಯ್ಯ

By ETV Bharat Karnataka Team

Published : Oct 17, 2023, 5:51 PM IST

Updated : Oct 17, 2023, 7:00 PM IST

ಕರ್ನಾಟಕ ಸಂಭ್ರಮ 50-ರ ಲಾಂಛನ ಬಿಡುಗಡೆ ಸಮಾರಂಭ

ಬೆಂಗಳೂರು : ಕರ್ನಾಟಕದಲ್ಲಿ ಕನ್ನಡ ಮಾತನಾಡುವಂತಹ ವಾತಾವರಣ, ಕನ್ನಡದ ಅನಿವಾರ್ಯತೆಯನ್ನು ಸೃಷ್ಟಿಸುವ ಅಗತ್ಯವಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ. ವಿಧಾನಸೌಧದ ಬ್ಯಾಂಕ್ವೆಟ್ ಹಾಲ್​ನಲ್ಲಿ ಮಂಗಳವಾರ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಆಯೋಜಿಸಿದ್ದ ಕರ್ನಾಟಕ ಸಂಭ್ರಮ 50-ರ ಲಾಂಛನ ಬಿಡುಗಡೆ ಮಾಡಿ ಮಾತನಾಡಿದ ಅವರು, ನಾವೆಲ್ಲರೂ ಕನ್ನಡಿಗರು, ಕರ್ನಾಟಕದ ಏಕೀಕರಣವಾದಾಗಿನಿಂದ ವಿವಿಧ ಭಾಷೆಗಳನ್ನು ಮಾತನಾಡುವ ಜನರು ಕನ್ನಡ ನಾಡಿನಲ್ಲಿ ನೆಲೆಸಿದ್ದಾರೆ ಎಂದರು.

ಈ ನಾಡಿನಲ್ಲಿ ವಾಸಿಸುವ ಪ್ರತಿಯೊಬ್ಬರೂ ಕೂಡ ಕನ್ನಡ ಭಾಷೆ ಮಾತನಾಡುವುದನ್ನು ಕಲಿಯಬೇಕು. ತಮಿಳುನಾಡು, ಕೇರಳ, ತೆಲಂಗಾಣ, ಉತ್ತರಪ್ರದೇಶ ರಾಜ್ಯಗಳಲ್ಲಿ ಅಲ್ಲಿನ ಭಾಷೆ ಕಲಿಯದೇ ಕನ್ನಡ ಮಾತನಾಡಿಕೊಂಡು ಬದುಕಲು ಸಾಧ್ಯವಿಲ್ಲ. ಆದರೆ ಕರ್ನಾಟಕದಲ್ಲಿ ಕನ್ನಡ ಬಾರದೇ ಇದ್ದರೂ ಬದುಕಬಹುದು. ಇದೇ ನಮ್ಮ ರಾಜ್ಯಕ್ಕೂ ಹಾಗೂ ಪಕ್ಕದ ರಾಜ್ಯಗಳಿಗೂ ಇರುವ ವ್ಯತ್ಯಾಸ ಎಂದು ತಿಳಿಸಿದರು.

ಕನ್ನಡಿಗರಲ್ಲಿ ಔದಾರ್ಯ ಹೆಚ್ಚು: ಕರ್ನಾಟಕದ ಏಕೀಕರಣವಾಗಿ 68 ವರ್ಷಗಳು ಸಂದರೂ ರಾಜ್ಯದಲ್ಲಿ ಕನ್ನಡದ ವಾತಾವರಣವನ್ನು ನಿರ್ಮಿಸಲು ಸಾಧ್ಯವಾಗದಿರುವುದು ಸರಿಯಲ್ಲ. ಕನ್ನಡಿಗರು ನಮ್ಮ ಭಾಷೆಯನ್ನು ಬೇರೆಯವರಿಗೆ ಕಲಿಸುವ ಬದಲು, ಅವರ ಭಾಷೆಯನ್ನೇ ನಾವು ಮೊದಲು ಕಲಿಯುತ್ತಿದ್ದೇವೆ. ಕನ್ನಡಿಗರ ಈ ವರ್ತನೆ ಭಾಷಾ ಬೆಳವಣಿಗೆ ಹಾಗೂ ನಾಡು, ನುಡಿ, ಸಂಸ್ಕೃತಿ ಅಭಿವೃದ್ಧಿಯ ದೃಷ್ಟಿಯಿಂದ ಒಳ್ಳೆಯದಲ್ಲ. ರಾಜ್ಯದ ಕೆಲವು ಭಾಗಗಳಲ್ಲಿ ಪರಭಾಷಿಗರು ಕನ್ನಡವನ್ನು ಮಾತನಾಡುವುದೇ ಇಲ್ಲ. ಕನ್ನಡಿಗರು ಅಭಿಮಾನ ಶೂನ್ಯರಲ್ಲ. ಆದರೆ ಹೆಚ್ಚಿನ ಉದಾರತೆಯಿಂದಾಗಿ ಈ ರೀತಿ ಆಗಿದೆ. ಬೇರೆ ಭಾಷಿಗರನ್ನು, ಧರ್ಮದವರನ್ನೂ ಪ್ರೀತಿಸಬೇಕು. ಆದರೆ ನಮ್ಮ ಭಾಷೆಯನ್ನು ಮರೆಯಬಾರದು ಎಂದು ಕಿವಿಮಾತು ಹೇಳಿದರು.

ನಮ್ಮಲ್ಲಿ ಇಂಗ್ಲಿಷ್ ವ್ಯಾಮೋಹವೂ ಹೆಚ್ಚಾಗಿದೆ. ನನ್ನ ಮಂತ್ರಿಮಂಡಲದ ಹಲವರು ಹಾಗೂ ವಿಶೇಷವಾಗಿ ಅಧಿಕಾರಿಗಳು ಕಡತಗಳಲ್ಲಿ ಇಂಗ್ಲೀಷ್​ನಲ್ಲಿಯೇ ಟಿಪ್ಪಣಿಯನ್ನು ಬರೆಯುತ್ತಾರೆ. ಕೇಂದ್ರ ಸರ್ಕಾರಕ್ಕೆ ಹಾಗೂ ಇತರೆ ರಾಜ್ಯಗಳಿಗೆ ಬರೆಯುವ ಸಂದರ್ಭದಲ್ಲಿ ಇಂಗ್ಲಿಷ್ ಬಳಸಬಹುದೇ ಹೊರತು, ಇನ್ನುಳಿದಂತೆ ಕನ್ನಡದಲ್ಲಿಯೇ ವ್ಯವಹರಿಸಬೇಕು. ಬಹಳ ವರ್ಷಗಳಿಂದ ಕನ್ನಡವನ್ನು ಆಡಳಿತ ಭಾಷೆಯಾಗಿದ್ದರೂ ಕೂಡ, ಇದು ಪಾಲನೆಯಾಗದಿರುವುದಕ್ಕೆ ನಿರ್ಲಕ್ಷ್ಯವೂ ಕಾರಣವಿರಬಹುದು. ಈ ಪರಿಸ್ಥಿತಿ ಸುಧಾರಿಸಬೇಕು. 1983ರಲ್ಲಿ ಕನ್ನಡ ಭಾಷಾ ಕಾವಲು ಸಮಿತಿಯ ಅಧ್ಯಕ್ಷನಾಗಿ ಕೆಲಸ ಮಾಡಿದ್ದೇನೆ. 2023 ನವೆಂಬರ್ 1 ರಿಂದ ಒಂದು ವರ್ಷ ಕರ್ನಾಟಕ ಸಂಭ್ರಮವನ್ನು ಆಚರಿಸುವ ಮೂಲಕ ಜನರಲ್ಲಿ ಕನ್ನಡ ಭಾಷಾ ಜಾಗೃತಿಯನ್ನು ಮೂಡಿಸಲಿದೆ ಎಂದರು.

ಕರ್ನಾಟಕ ಏಕೀಕರಣವಾದದ್ದು 1956ರ ನವೆಂಬರ್ 1 ರಂದು. ಕರ್ನಾಟಕ ಏಕೀಕರಣಕ್ಕೂ ಮುನ್ನ ಅನೇಕ ರಾಜ್ಯಗಳಲ್ಲಿ ಕನ್ನಡ ನಾಡು ಹರಿದು ಹಂಚಿಹೋಗಿದ್ದವು. ಭಾಷಾವಾರು ಪ್ರಾಂತ್ಯ ವಿಂಗಡನೆ ಘೋಷಣೆಯಾದ ಮೇಲೆ ಕರ್ನಾಟಕ ಏಕೀಕರಣವಾಗಬೇಕೆಂದು ಆಲೂರು ವೆಂಕಟರಾಯರ ನೇತೃತ್ವದಲ್ಲಿ ಅನೇಕರು ಏಕೀಕರಣಕ್ಕಾಗಿ ಹೋರಾಟ ಮಾಡಿದರು. ಸಾಂಪ್ರದಾಯಿಕವಾಗಿ ರಾಜ್ಯೋತ್ಸವ ಆಚರಿಸಿಕೊಂಡು ಬರುತ್ತಿದ್ದರೂ ಮೈಸೂರು ರಾಜ್ಯವೆಂದೇ ಕರೆಯಲಾಗುತ್ತಿತ್ತು. ಮೈಸೂರು ರಾಜವಂಶಸ್ಥರು ಆಳಿದ್ದರಿಂದ ಆ ಹೆಸರಿತ್ತು. ವಿಶಾಲ ಕರ್ನಾಟಕವಾದ ನಂತರ ಮುಂಬೈ ಕರ್ನಾಟಕ, ಆಂಧ್ರ, ತಮಿಳುನಾಡು ರಾಜ್ಯಗಳಿಂದ ಹಲವು ಪ್ರದೇಶಗಳು ಒಗ್ಗೂಡಿ ಕರ್ನಾಟಕವಾಯಿತು. ದೇವರಾಜ ಅರಸು ಮುಖ್ಯಮಂತ್ರಿಯಾದ ಸಂದರ್ಭದಲ್ಲಿ 1973, ನವೆಂಬರ್ 01 ರಂದು ಕರ್ನಾಟಕ ಎಂದು ಮರುನಾಮಕರಣವಾಯಿತು. 'ಕರ್ನಾಟಕ ಗತವೈಭವ' ಎಂಬ ಆಲೂರು ವೆಂಕಟರಾಯರ ಪುಸಕ್ತದಿಂದ ಆಯ್ದು ಅಖಂಡ ಕರ್ನಾಟಕಕ್ಕೆ ಕರ್ನಾಟಕ ಎಂದು ಮರುನಾಮಕರಣ ಮಾಡಲಾಯಿತು ಎಂದು ವಿವರಿಸಿದರು.

ಹಿಂದಿನ ಸರ್ಕಾರವೇ ಆಚರಿಸಬೇಕಿತ್ತು: ನವೆಂಬರ್ 01, 2023ಕ್ಕೆ 50 ವರ್ಷಗಳು ತುಂಬುತ್ತದೆ. ವಾಸ್ತವವಾಗಿ ಕಳೆದ ವರ್ಷವೇ ಇದನ್ನು ಆಚರಿಸಬೇಕಿತ್ತು. ಆದರೆ ಹಿಂದಿನ ಸರ್ಕಾರದವರು ಮಾಡಿಲ್ಲ. ಈ ಬಾರಿಯ ಬಜೆಟ್ ಮಂಡಿಸುವ ಸಂದರ್ಭದಲ್ಲಿ ಇದೊಂದು ಮಹತ್ವದ ಘಟನೆ. ಇದನ್ನು ವಿಶೇಷವಾಗಿ ಆಚರಿಸದೇ ಹೋದರೆ ಲೋಪವಾಗುತ್ತದೆ ಎಂದು ತೀರ್ಮಾನಿಸಿ, ಬಜೆಟ್​ನಲ್ಲಿ ಘೋಷಣೆ ಮಾಡಿ 2023 ನವೆಂಬರ್ 1 ರಿಂದ 2024 ನವೆಂಬರ್ 1 ರವರೆಗೆ ವರ್ಷವಿಡೀ ಕರ್ನಾಟಕ ಸಂಭ್ರಮವನ್ನು ಆಚರಿಸಲಾಗುತ್ತಿದೆ.

ಲಾಂಛನ ವಿನ್ಯಾಸಕ್ಕೆ ಮೆಚ್ಚುಗೆ: ಕರ್ನಾಟಕ ಸಂಭ್ರಮ- 50 ಲಾಂಛನವನ್ನು ಬಿಡುಗಡೆ ಮಾಡಿದ್ದು, ವಿನ್ಯಾಸಗೊಳಿಸಿದ ರವಿರಾಜ್ ಜಿ.ಹುಲಗೂರು ಅವರನ್ನು ಅಭಿನಂದಿಸಿದರು. ಲಾಂಛನದ ವಿನ್ಯಾಸ ಉತ್ತಮವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮೆಚ್ಚುಗೆ ವ್ಯಕ್ತಪಡಿಸಿದರು.

ಇದನ್ನೂ ಓದಿ:ಇಡೀ ವರ್ಷ ಕರ್ನಾಟಕ 50ರ ಸಂಭ್ರಮಾಚರಣೆಗೆ ನಿರ್ಧಾರ : ಡಿಸಿಎಂ ಡಿ.ಕೆ.ಶಿವಕುಮಾರ್

Last Updated : Oct 17, 2023, 7:00 PM IST

ABOUT THE AUTHOR

...view details