ಬೆಂಗಳೂರು :ಬಾಹ್ಯಾಕಾಶ ಕಸ ನಿರ್ವಹಣೆ ಸೇರಿದಂತೆ ವಿವಿಧ ಪ್ರಾಜೆಕ್ಟ್‌ಗಳನ್ನು ನಿರ್ವಹಿಸಲು ದೇಶದ 60 ಸ್ಟಾರ್ಟಪ್‌ಗಳು ಇಸ್ರೋದೊಂದಿಗೆ ಕೈಜೋಡಿಸಿದೆ. ಹೀಗಾಗಿ ಬಾಹ್ಯಾಕಾಶ ಕ್ಷೇತ್ರದಲ್ಲಿ ವಿಪುಲ ಅವಕಾಶಗಳು ತೆರೆದುಕೊಳ್ಳಲಿದೆ ಎಂದು ಇಸ್ರೊ ಹೇಳಿದೆ.
ನ್ಯಾನೊ ಸ್ಯಾಟ್‌ಲೈಟ್ ನಿರ್ಮಾಣ, ರಾಕೆಟ್ ನಿರ್ಮಾಣ, ಗ್ರೌಂಡ್ ಸಿಸ್ಟಮ್, ರಿಸರ್ಚ್ ಸೇರಿದಂತೆ ಅಂತರಿಕ್ಷ ಕ್ಷೇತ್ರದ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಲು ಈ ಸ್ಟಾರ್ಟಪ್‌ಗಳು ಜೊತೆಯಾಗಿದೆ. ಇತ್ತೀಚೆಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಬಾಹ್ಯಾಕಾಶ ಕ್ಷೇತ್ರದಲ್ಲಿ ಖಾಸಗಿ ವಲಯಕ್ಕೆ ಹೆಚ್ಚಿನ ಅವಕಾಶ ನೀಡಿದ ಬಳಿಕ ಸುಮಾರು 60 ಸ್ಟಾರ್ಟಪ್‌ಗಳು ಇದಕ್ಕೆ ಕೈಜೋಡಿಸಿವೆ. ಇಸ್ರೋ ನ್ಯೂ ಸ್ಪೇಸ್ ಲಿಮಿಟೆಡ್ ಮೂಲಕ ಮುಂದಿನ ಕೆಲಸಗಳು ಕಾರ್ಯರೂಪಕ್ಕೆ ಬರಲಿದೆ ಎಂದು ಮಾಹಿತಿ ನೀಡಿದೆ.
ಸರ್ಕಾರದ ಬಾಹ್ಯಾಕಾಶ ಸಂಸ್ಥೆ ಮತ್ತು ಖಾಸಗಿ ವಲಯದ ಜತೆ ಸೇರಿದಾಗ ನಮಗೆ ಆಕಾಶದಲ್ಲಿ ಹೆಚ್ಚಿನ ಅವಕಾಶಗಳು ದೊರಕುತ್ತದೆ. ವಿವಿಧ ಕಂಪನಿಗಳು ನಾನೋ ಉಪಗ್ರಹಗಳು, ಉಡಾವಣೆಯ ವಾಹಕಗಳು ಸಂಶೋಧನಾ ವಲಯಗಳಲ್ಲಿ ನವೋದ್ಯಮಗಳು ತೊಡಗಿಸಿಕೊಂಡಿವೆ ಎಂದು ಹೇಳಿದೆ.
ಅಂತರಿಕ್ಷದಲ್ಲಿ ಅಪರಿಮಿತ ಅವಕಾಶ: ಕಕ್ಷೆಯಲ್ಲಿ ಉಪಗ್ರಹಗಳು ಡಿಕ್ಕಿ ಹೊಡೆಯುವುದನ್ನು ತಪ್ಪಿಸುವುದು, ಕ್ಷುದ್ರಗ್ರಹಗಳ ದಾಳಿಯ ಮಾಹಿತಿ, ಪರಿಪಕ್ವವಾದ ಹವಾಮಾನ ಮಾಹಿತಿ ಸೇರಿದಂತೆ ಅಂತರಿಕ್ಷದಲ್ಲಿ ಅಪರಿಮಿತ ಅವಕಾಶಗಳಿವೆ ಎಂದು ಇದೇ ವೇಳೆ ಹೇಳಿದೆ.
ಬಾಹ್ಯಾಕಾಶದಲ್ಲಿನ ಸ್ಪೇಸ್ ಜಂಕ್: ಬಾಹ್ಯಾಕಾಶದಲ್ಲಿ ತ್ಯಾಜ್ಯ (ಸ್ಪೇಸ್ ಜಂಕ್) ತುಂಬಿದೆ. ಮನುಷ್ಯರು ಹೋದಲೆಲ್ಲ ಕಸ ತುಂಬುವುದು ಸಾಮಾನ್ಯ. ಭೂಮಿಯಲ್ಲಿ ಮಾತ್ರವಲ್ಲ ಬಾಹ್ಯಾಕಾಶದಲ್ಲಿ ಕೂಡ ಕಸ/ತ್ಯಾಜ್ಯಗಳು ತುಂಬಿಕೊಂಡಿವೆ. ಮಾನವರು ಬಾಹ್ಯಾಕಾಶಕ್ಕೆ ಉಡಾವಣೆ ಮಾಡಿದ ಉಪಗ್ರಹಗಳು, ನೌಕೆ, ರಾಕೆಟ್ ಹಾಗೂ ಇತರ ಸಂಶೋಧನಾ ಸಾಧನಗಳಲ್ಲಿ ಕೆಲವು ವಿಫಲವಾಗಿ ನಿಷ್ಕ್ರಿಯಗೊಂಡಿರುತ್ತವೆ.