ಕರ್ನಾಟಕ

karnataka

By

Published : Dec 23, 2020, 5:49 PM IST

ETV Bharat / state

ದೊಡ್ಡ ಪಿಡುಗಾದ ಶಬ್ದಮಾಲಿನ್ಯ: ಪ್ರಾಣಿ - ಪಕ್ಷಿಗಳ ಮೇಲೆ ಬೀರುತ್ತಿದೆ ತೀವ್ರ ಪರಿಣಾಮ

ರಾಜಧಾನಿ ಬೆಂಗಳೂರಿನ ಶಬ್ಧ ಮಾಲಿನ್ಯ ವರ್ಷದಿಂದ ವರ್ಷಕ್ಕೆ ಏರುತ್ತಿದ್ದು, ಜನರಿಗಷ್ಟೇ ಅಲ್ಲದೆ ನಗರದ ಪ್ರಾಣಿ - ಪಕ್ಷಿಗಳಿಗೆ ವಾಸಕ್ಕೆ ಯೋಗ್ಯವಲ್ಲದ ನಗರವಾಗಿ ಮಾರ್ಪಟ್ಟಿದೆ. ವಸತಿ ಹಾಗೂ ವಾಣಿಜ್ಯ ಪ್ರದೇಶಗಳಲ್ಲೆಲ್ಲಾ ನಿಗದಿತ ಮಟ್ಟ ಮೀರಿ ಅತ್ಯಂತ ಹೆಚ್ಚು ಶಬ್ದ ಮಾಲಿನ್ಯ ಇದೆ ಎಂಬುದು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ವರದಿಗಳಿಂದ ಬಹಿರಂಗವಾಗಿದೆ.

noise-pollution
ಶಬ್ದಮಾಲಿನ್ಯ

ಬೆಂಗಳೂರು:ದೇಶದಲ್ಲಿ ಅತಿ ಹೆಚ್ಚು ಶಬ್ದಮಾಲಿನ್ಯವಿರುವ ನಗರಗಳ ಪೈಕಿ ಒಂದಾದ ಬೆಂಗಳೂರಿನಲ್ಲಿ ಕಳೆದ ವರ್ಷದ ನಿಗದಿತ ಮಟ್ಟ ಮೀರಿ ಅಧಿಕ ಪ್ರಮಾಣದಲ್ಲಿ ಶಬ್ದಮಾಲಿನ್ಯ ದಾಖಲಾಗಿದೆ. ನಗರದಲ್ಲಿ ಶಬ್ಧಮಾಲಿನ್ಯ ತಡೆಗಟ್ಟಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಮಾಲಿನ್ಯ ನಿಯಂತ್ರಣ ಮಂಡಳಿ ಹೇಳುತ್ತಿದೆಯಾದರೂ ಯಾವುದೇ ಪರಿಣಾಮ ಬೀರಿಲ್ಲ.

ಅಚ್ಚರಿ ಸಂಗತಿ ಎಂದರೆ, ವಾಣಿಜ್ಯ, ವಸತಿ ಹಾಗೂ ಸೂಕ್ಷ್ಮ ಪ್ರದೇಶಗಳಿಗಿಂತ ಕೈಗಾರಿಕಾ ಪ್ರದೇಶದಲ್ಲೇ ಕಡಿಮೆ ಪ್ರಮಾಣದಲ್ಲೇ ಶಬ್ದದ ಪ್ರಮಾಣದ ದಾಖಲಾಗಿದೆ. ಪರಿವೇಷ್ಟಕ ವಾಯುವಿನ ಗುಣಮಟ್ಟ ಮಾಪನದಿಂದ ಈ ವಿಷಯ ಬೆಳಕಿಗೆ ಬಂದಿದೆ.ಮಾಪನ ಕೇಂದ್ರದ ಅಂಕಿ - ಅಂಶಗಳ ಪ್ರಕಾರ ವಸತಿ ಪ್ರದೇಶಗಳಲ್ಲಿ ಹಗಲಿನಲ್ಲಿ 55 ಡೆಸಿಬಲ್, ರಾತ್ರಿ 45 ಡೆಸಿಬಲ್​​ನಷ್ಟು ಶಬ್ದ ಇರಬೇಕು. ಆದರೆ, ಹೆಚ್ಚುತ್ತಿರುವ ವಾಹನ ದಟ್ಟಣೆ, ಕಾಮಗಾರಿ ನಿರ್ಮಾಣದಿಂದಾಗಿ ಈ ಬ್ಯಾಕ್​​​​ಗೌಂಡ್​ ಶಬ್ದಮಾಲಿನ್ಯ ನಿಗದಿತ ಪ್ರಮಾಣಕ್ಕಿಂತ ಹೆಚ್ಚಳ ಕಾಣಲು ಸಾಧ್ಯವಾಗಿದೆ.

ಬೆಂಗಳೂರಿನಲ್ಲಿ ಶಬ್ದ ಮಾಲಿನ್ಯ ಏರಿಕೆ ಪ್ರಮಾಣ

ಪ್ರದೇಶಗಳು ಹಗಲು ರಾತ್ರಿ
ವಾಣಿಜ್ಯ ಪ್ರದೇಶ ಶೇ.0.9 - ಶೇ.8.6 ಶೇ.11.6 - ಶೇ.18.4
ವಸತಿ ಪ್ರದೇಶ ಶೇ.0.9- ಶೇ.18.2 ಶೇ.28.4 - ಶೇ.44
ಸೂಕ್ಷ್ಮ ಪ್ರದೇಶ ಶೇ.17.8 - ಶೇ.32.8 ಶೇ.35.0 - ಶೇ.73.2

ನಗರದಲ್ಲಿ ಶಬ್ಧದ ಗರಿಷ್ಠ ಪ್ರಮಾಣ ಎಲ್ಲೆಲ್ಲಿ? ಎಷ್ಟು?

ಮೈಸೂರು ರಸ್ತೆಯ ಆರ್​ವಿಸಿಇ ಕಾಲೇಜು ಸಮೀಪ ಹಗಲಿನ ಮಿತಿಗಿಂತ ಶೇ.17.8 ರಾತ್ರಿ ವೇಳೆಯೇ ಶೇ.35 ಹೆಚ್ಚು ಶಬ್ದವಿದೆ. ಅದೇ ರೀತಿ ಪ್ರಮುಖ 8 ಸ್ಥಳಗಳಲ್ಲಿ ರಾತ್ರಿ ಸಮಯದಲ್ಲೇ ಹೆಚ್ಚು ಶಬ್ದದ ಪ್ರಮಾಣ ಹೆಚ್ಚಾಗಿದೆ.

ಪ್ರಮುಖ 8 ಪ್ರದೇಶಗಳು ಹಗಲು ರಾತ್ರಿ
ಮೈಸೂರು ರಸ್ತೆಯ ಆರ್​ವಿಸಿಇ ಕಾಲೇಜು ಶೇ.17.8 ಶೇ.35
ನಿಮ್ಹಾನ್ಸ್ ಶೇ.32.8 ಶೇ.73.2
ಬಿಟಿಎಮ್ ಲೇಔಟ್ ಶೇ.18.2 ಶೇ.44
ದೊಮ್ಮಲೂರು ಶೇ.12 ಶೇ.28.7
ಎಸ್.ಜಿ.ಹಳ್ಳಿ ಶೇ.7.3 ಶೇ.28.4
ಮಾರತಹಳ್ಳಿ ಶೇ.3.8 ಶೇ.19.6
ಯಶವಂತಪುರ ಶೇ.8.6 ಶೇ.18.4
ಚರ್ಚ್ ಸ್ಟ್ರೀಟ್ ಶೇ.0.9 ಶೇ.11.6

ಟ್ರಾಫಿಕ್​​ನಿಂದಲೇ ಶೇ.40ರಷ್ಟು ಮಾಲಿನ್ಯ

ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಸದಸ್ಯ ಕಾರ್ಯದರ್ಶಿ ಶ್ರೀನಿವಾಸುಲು ಮಾತನಾಡಿ, ಶಬ್ದಮಾಲಿನ್ಯ ಕುರಿತು ನಿರಂತರ ಮಾಪನ ಮಾಡಲಾಗುತ್ತಿದೆ. ಶಬ್ದ ನಿಯಮ-2000 ಪ್ರಕಾರ ಇದನ್ನು ನಿಯಂತ್ರಿಸಲಾಗುತ್ತಿದೆ. ನಗರದಲ್ಲಿ 88 ಲಕ್ಷಕ್ಕೂ ಅಧಿಕ ವಾಹನಗಳಿವೆ. ಹೀಗಾಗಿ, ಶಬ್ಧಮಾಲಿನ್ಯದಲ್ಲಿ ಏರಿಕೆ ಕಂಡಿದೆ. ಶೇ.40ರಷ್ಟು ವಾಯುಮಾಲಿನ್ಯಕ್ಕೆ ಕೊಡುಗೆ ಸಂಚಾರ ದಟ್ಟಣೆ ಕಾರಣ ಎಂದರು.

ಶಬ್ಧದ ಗುಣಮಟ್ಟ ಅಳೆಯಲು ಪೊಲೀಸ್ ಇಲಾಖೆಗೆ 108 ನಾಯ್ಸ್ ಮೀಟರ್ ಕೊಡಲಾಗಿದೆ. 44 ನಾಯ್ಸ್ ಮೀಟರ್​ಗಳನ್ನು ಕೆಎಸ್​ಪಿಸಿಬಿ ಅಧಿಕಾರಿಗಳಿಗೆ ಕೊಡಲಾಗಿದೆ. ತರಬೇತಿಯನ್ನೂ ಕೊಡಲಾಗಿದೆ. ಶಬ್ಧದ ಗರಿಷ್ಠಮಟ್ಟ ಮೀರಿರುವ ವಾಹನಗಳ ವಿರುದ್ಧ ಮಾಲಿನ್ಯ ನಿಯಂತ್ರಣ ಮಂಡಳಿ, ಆರ್​ಟಿಒ, ಪೊಲೀಸ್ ಇಲಾಖೆಯು ಕ್ರಮ ಕೈಗೊಳ್ಳಲಿದೆ ಎಂದರು.

ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಸದಸ್ಯ ಕಾರ್ಯದರ್ಶಿ ಶ್ರೀನಿವಾಸುಲು

ಪರಿಸರ ತಜ್ಞರಾದ ಯಲ್ಲಪ್ಪ ರೆಡ್ಡಿ ಹಾಗೂ ಸುರೇಶ್ ಹೆಬ್ಳೀಕರ್ ಅವರ ಪ್ರಕಾರ ನಗರದಲ್ಲಿ ಉಂಟಾಗುವ ಶಬ್ದ ಮಾಲಿನ್ಯವು ಪ್ರಾಣಿ- ಪಕ್ಷಿ, ಸರೀಸೃಪಗಳ ಮೇಲೆ ತೀವ್ರ ಪರಿಣಾಮ ಬೀರಿದೆ. ವಾಹನ ಸದ್ದಿಗೆ ಮರಗಳ ಮೇಲೆ ಕೂತ ಪಕ್ಷಿಗಳು ಹಾರಿ ಹೋಗುತ್ತವೆ. ಹೀಗಾಗಿ ಪಕ್ಷಿಗಳು ಗೂಡು ಕಟ್ಟಲು, ವಾಸಕ್ಕೆ ಶಬ್ದ ಇರುವ ಕಡೆ ಬರುವುದಿಲ್ಲ.

ಪ್ರಾಣಿ-ಪಕ್ಷಿಗಳ ಗರ್ಭಪಾತಕ್ಕೂ ಕಾರಣ

ಕಟ್ಟಡ ಸೇರಿದಂತೆ ವಿವಿಧ ಕಾಮಗಾರಿಗಳ ನಿರ್ಮಾಣದ ಸಂದರ್ಭದಲ್ಲಿ ಡೈನಾಮಿಕ್ ಸ್ಫೋಟಿಸಲಾಗುತ್ತದೆ. ಇದರಿಂದ ಅನೇಕ ಪ್ರಾಣಿ-ಪಕ್ಷಿಗಳು ಕಂಗಾಲಾಗಿ ಅಲ್ಲಿನ ಪ್ರದೇಶವನ್ನು ತೊರೆಯುತ್ತವೆ. ಪಕ್ಷಿ- ಪ್ರಾಣಿಗಳ ವಂಶಾಭಿವೃದ್ಧಿ ಸಂದರ್ಭದಲ್ಲಿ ಹೆಚ್ಚು ಶಬ್ದ ಉಂಟಾದರೆ ಗರ್ಭಪಾತ ಆಗುವ ಸಾಧ್ಯತೆ ಇದೆ ಎನ್ನುತ್ತಾರೆ ಎಂದು ಯಲ್ಲಪ್ಪರೆಡ್ಡಿ ತಿಳಿಸಿದರು.

ಸುರೇಶ್ ಹೆಬ್ಳೀಕರ್ ಮಾತನಾಡಿ, ನಗರಗಳಲ್ಲಿ ಗುಬ್ಬಚ್ಚಿಗಳು ಈಗಾಗಲೇ ಕಣ್ಮರೆಯಾಗಿವೆ. ಗೂಡು ಕಟ್ಟಲು ಜಾಗವೇ ಇಲ್ಲ. ಹಿಂದಿನ ಕಾಲದಲ್ಲಿ ಹೆಂಚಿನ ಮನೆಗಳಿದ್ದವು. ಟಿವಿ, ಟವರ್​​​​​​​​ಗಳ ತರಂಗಗಳ ಪರಿಣಾಮದಿಂದಲೂ ಅವು ಮಾಯವಾಗಿವೆ. ಶಬ್ಧ ಮಾಲಿನ್ಯದಿಂದ ಜನರಿಗೂ ಮಿದುಳು ಕ್ಯಾನ್ಸರ್ ಬರಲಿದೆ. ಶ್ರವಣದೋಷ, ನರ ಸಂಬಂಧಿ ಸೇರಿದಂತೆ ವಿವಿಧ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಲಿದೆ ಎಂದರು. ಹಾವು, ಚೇಳು, ಕಪ್ಪೆ, ಇಲಿ, ಹೆಗ್ಗಣ, ಜಿರಳೆ, ಸೊಳ್ಳೆ, ಕೆರೆಗಳಲ್ಲಿ ಮೀನು, ನಾಯಿ, ಕಾಗೆ, ಕೋಗಿಲೆ, ಪಾರಿವಾಳ, ಅಳಿಲು ಸೇರಿದಂತೆ ಎಲ್ಲ ಪ್ರಾಣಿ, ಪಕ್ಷಿಗಳಿಗೆ ನಗರೀಕರಣ ಹೀನವಾದ ಪರಿಣಾಮ ಬೀಳುತ್ತದೆ ಎಂದರು.

ABOUT THE AUTHOR

...view details