ಬೆಂಗಳೂರು :ಕಾಂಗ್ರೆಸ್ ಬಿಟ್ಟು ಜೆಡಿಎಸ್‌ನತ್ತ ತೆರಳಲು ಮನಸ್ಸು ಮಾಡಿದ್ದ ಮಾಜಿ ಸಚಿವ ಜಮೀರ್ ಅಹಮದ್ ಖಾನ್‌ರನ್ನ ಪಕ್ಷದಲ್ಲಿಯೇ ಉಳಿಸಿಕೊಳ್ಳುವಲ್ಲಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಯಶಸ್ವಿಯಾಗಿದ್ದಾರೆ ಎಂಬ ಮಾಹಿತಿ ಇದೆ. ಕೇಂದ್ರದ ಮಾಜಿ ಸಚಿವ ಸಿಎಂ ಇಬ್ರಾಹಿಂ ತಮ್ಮ ಕಾಂಗ್ರೆಸ್ ವಿಧಾನಪರಿಷತ್ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಿ, ಜೆಡಿಎಸ್ಗೆ ಸೇರ್ಪಡೆ ಆಗಿದ್ದಾರೆ. ಪಕ್ಷದ ರಾಜ್ಯ ಅಧ್ಯಕ್ಷರಾಗಿ ಸಹ ಅಧಿಕಾರ ವಹಿಸಿಕೊಂಡಿದ್ದಾರೆ.
ಕಾಂಗ್ರೆಸ್ ಪಕ್ಷದ ಅಲ್ಪಸಂಖ್ಯಾತ ಮುಸಲ್ಮಾನ್ ಸಮುದಾಯದ ಒಂದಿಷ್ಟು ಮತಬ್ಯಾಂಕ್ನನ್ನು ಸೆಳೆಯುವಲ್ಲಿ ಈ ಮೂಲಕ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಯಶಸ್ವಿಯಾಗಿದ್ದಾರೆ. ಪಕ್ಷಕ್ಕೆ ಸಿಎಂ ಇಬ್ರಾಹಿಂ ಜೊತೆ ಮತ್ತೋರ್ವ ಹಿರಿಯ ನಾಯಕ ಹಾಗೂ ಮಾಜಿ ಸಚಿವ ರೋಷನ್ ಬೇಗ್ರನ್ನು ಸಹ ಸೆಳೆಯುತ್ತಿದ್ದಾರೆ. ಈ ಮಧ್ಯೆ ಹೆಚ್ ಡಿ ಕುಮಾರಸ್ವಾಮಿ ಪೂರ್ಣ ಸಮ್ಮತಿ ಇಲ್ಲದೆ ಮಾಜಿ ಸಚಿವ ಜಮೀರ್ ಅಹಮದ್ ಖಾಖ್ರನ್ನು ಸಹ ಜೆಡಿಎಸ್ ಮತ ಸೆಳೆಯುವ ಪ್ರಯತ್ನವನ್ನು ಇಬ್ರಾಹಿಂ ಮಾಡಿದ್ದರು.
ಬೆಂಗಳೂರಿನ ಅರಮನೆ ಮೈದಾನದಲ್ಲಿ ಇಫ್ತಿಯಾರ್ ಕೂಟ ಆಯೋಜನೆ ಒಂದೆಡೆ ಕಾಂಗ್ರೆಸ್ ಪಕ್ಷದ ರಾಜ್ಯ ನಾಯಕರ ನಿರ್ಲಕ್ಷ ಹಾಗೂ ಪಕ್ಷದಲ್ಲಿ ಅಲ್ಪಸಂಖ್ಯಾತ ಸಮುದಾಯದ ನಾಯಕರಾಗಿ ಗುರುತಿಸಿಕೊಳ್ಳುವ ಅವಕಾಶದಿಂದ ಒಂದು ಹಂತಕ್ಕೆ ವಂಚಿತರಾಗಿದ್ದ ಜಮೀರ್ ಅಹಮದ್ ಸಹ ಜೆಡಿಎಸ್‌ನತ್ತ ಮುಖ ಮಾಡುವ ಚಿಂತನೆ ನಡೆಸಿದ್ದರು. ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಹಾಗೂ ಜೆಡಿಎಸ್ ವರಿಷ್ಠ ಹೆಚ್ ಡಿ ದೇವೇಗೌಡರ ವಿರೋಧ ಎದುರಾಗುವ ಸಾಧ್ಯತೆ ಇದ್ದರೂ, ರಾಜಕೀಯದಲ್ಲಿ ಹೊಂದಾಣಿಕೆ ಅನ್ನೋದು ಸರ್ವೇಸಾಮಾನ್ಯವಾಗಿರುವ ಹಿನ್ನೆಲೆ ತಾವು ಸಹ ಜೆಡಿಎಸ್ಗೆ ಮರಳುವ ಯೋಚನೆ ಮಾಡಿದ್ದರು.
ಮಧ್ಯಪ್ರವೇಶಿಸಿದ ಸಿದ್ದರಾಮಯ್ಯ : ಜೆಡಿಎಸ್ನಿಂದ ಕಾಂಗ್ರೆಸ್ ಪಕ್ಷಕ್ಕೆ ಕರೆತಂದು ಸಚಿವ ಸ್ಥಾನ ನೀಡುವ ಮೂಲಕ ಜಮೀರ್ ಅಹ್ಮದ್ಗೆ ರಾಜಕೀಯ ಸ್ಥಾನಮಾನ ಕಲ್ಪಿಸಿದ್ದ ಮಾಜಿ ಸಿಎಂ ಸಿದ್ದರಾಮಯ್ಯ, ಕೆಲದಿನಗಳ ನಿರ್ಲಕ್ಷದ ನಂತರ ಮತ್ತೊಮ್ಮೆ ಜಮೀರ್‌ರತ್ತ ಒಲವಿನ ಹಸ್ತ ಚಾಚಿದ್ದಾರೆ. ಬೆಂಗಳೂರಿನ ಅರಮನೆ ಮೈದಾನದಲ್ಲಿ ಇಫ್ತಿಯಾರ್ ಕೂಟ ಆಯೋಜಿಸುವ ಮೂಲಕ ಅಲ್ಲಿಗೆ ಹಲವು ಅಲ್ಪಸಂಖ್ಯಾತ ಮುಸಲ್ಮಾನ ಸಮುದಾಯದ ಮುಖಂಡರು ಮತ್ತು ಧರ್ಮಗುರುಗಳನ್ನು ಆಹ್ವಾನಿಸಿ ಅವರ ಮೂಲಕವೇ ಜಮೀರ್‌ಗೆ ಪಾಠ ಹೇಳಿಸುವ ಕಾರ್ಯ ಮಾಡಿದ್ದಾರೆ ಎನ್ನಲಾಗ್ತಿದೆ.
ಈ ಮೂಲಕ ಕಾಂಗ್ರೆಸ್ ಬಿಡುವ ನಿರ್ಧಾರದಿಂದ ಜಮೀರ್ ಹಿಂದೆ ಸರಿಯುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಎಲ್ಲಕ್ಕಿಂತ ಮುಖ್ಯವಾಗಿ ಜೆಡಿಎಸ್ ಸೇರ್ಪಡೆಯಾದರು ಜಮೀರ್‌ಗೆ ಯಾವುದೇ ರಾಜಕೀಯ ಲಾಭ ಸಿಗುವುದಿಲ್ಲ ಎಂಬುದನ್ನು ಸ್ಪಷ್ಟವಾಗಿ ಮನವರಿಕೆ ಮಾಡಿಕೊಡುವ ಪ್ರಯತ್ನ ನಡೆಸಿದ್ದಾರೆ.
ಸಚಿವ ಸ್ಥಾನ ಸಿಗಲು ಸಾಧ್ಯವಿಲ್ಲ :ರಾಜ್ಯದಲ್ಲಿ 2023ರಲ್ಲಿ ಯಾವುದೇ ಪಕ್ಷಕ್ಕೂ ಬಹುಮತ ಬರದೇ ಒಂದೊಮ್ಮೆ ಅತಂತ್ರ ಸ್ಥಿತಿ ನಿರ್ಮಾಣವಾದಲ್ಲಿ ಬಿಜೆಪಿ ಜೊತೆ ಜೆಡಿಎಸ್ ಕೈಜೋಡಿಸಲಿದೆ. ಆ ರೀತಿಯಲ್ಲಿ ತಮಗೆ ಸಚಿವ ಸ್ಥಾನ ಸಿಗಲಿದೆ ಎಂಬ ನಿರೀಕ್ಷೆ ಜಮೀರ್ ಅಹಮದ್‌ರದ್ದಾಗಿತ್ತು. ಆದರೆ, ಪರಿಸ್ಥಿತಿ ಮನವರಿಕೆ ಮಾಡಿಕೊಟ್ಟಿರುವ ಸಿದ್ದರಾಮಯ್ಯ, ಒಂದೊಮ್ಮೆ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ಸರ್ಕಾರ ಅಧಿಕಾರಕ್ಕೆ ಬಂದರೂ, ಅಲ್ಪಸಂಖ್ಯಾತ ಮುಸಲ್ಮಾನ ಸಮುದಾಯದ ಒಬ್ಬ ಪ್ರತಿನಿಧಿಗೆ ಮಾತ್ರ ಸಚಿವ ಸ್ಥಾನ ಸಿಗಲು ಸಾಧ್ಯ.
ಅದು ಸಹ ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಪಾಲಾಗಲಿದೆ. ಇದರಿಂದ ಜೆಡಿಎಸ್ ಸೇರಿದರೂ ಲಾಭವಿಲ್ಲ. ಅದರ ಬದಲು ಕಾಂಗ್ರೆಸ್‌ನಲ್ಲಿಯೇ ಉಳಿದುಕೊಂಡು ಚಾಮರಾಜಪೇಟೆಯಿಂದ ಶಾಸಕರಾಗಿ ಆಯ್ಕೆಯಾಗಿ. ಜನ ಬಿಜೆಪಿ ದುರಾಡಳಿತದಿಂದ ಬೇಸತ್ತಿದ್ದಾರೆ. ಕಾಂಗ್ರೆಸ್ಗೆ ಇನ್ನೊಂದು ಅವಕಾಶ ನೀಡುವ ನಿಟ್ಟಿನಲ್ಲಿ ಚಿಂತನೆ ನಡೆಸಿದ್ದಾರೆ. ಕಾಂಗ್ರೆಸ್ ಪೂರ್ಣಪ್ರಮಾಣದಲ್ಲಿ ಅಧಿಕಾರ ಹಿಡಿಯಲಿದೆ. ಮೊದಲಿನಿಂದಲೂ ಅಲ್ಪಸಂಖ್ಯಾತ ಸಮುದಾಯಕ್ಕೆ ಬೆಂಬಲವಾಗಿ ನಿಂತಿರುವ ನಿಜವಾದ ಜಾತ್ಯತೀತ ಪಕ್ಷ ಕಾಂಗ್ರೆಸ್ ಆಗಿದೆ.
ಇಲ್ಲಿ ತಾವು ಆರಾಮವಾಗಿ ಸಚಿವರಾಗಬಹುದು. ಒಂದೊಮ್ಮೆ ಅತಂತ್ರ ಸ್ಥಿತಿ ನಿರ್ಮಾಣವಾಗಿ ಬಿಜೆಪಿ-ಜೆಡಿಎಸ್ ಮೈತ್ರಿ ಸರ್ಕಾರ ರಚನೆಯಾದರೂ ಅದು ಬಹಳ ದಿನ ಉಳಿಯುವುದಿಲ್ಲ. ಅಲ್ಲದೆ ಕಾಂಗ್ರೆಸ್ ಪಕ್ಷದಲ್ಲಿ ಉಳಿದರೆ ತಮಗೆ ಇಲ್ಲಿ ಮಹತ್ವದ ಅವಕಾಶಗಳು ಲಭಿಸಲಿವೆ. ಸರ್ಕಾರ ರಚಿಸುವ ಅವಕಾಶ ಸಿಕ್ಕಾಗ ಪಕ್ಷ ತಮಗೆ ಮಹತ್ವದ ಜವಾಬ್ದಾರಿ ನೀಡಲಿದೆ. ಇದರಿಂದ ಯಾವುದೇ ಕಾರಣಕ್ಕೂ ತಾವು ಕಾಂಗ್ರೆಸ್ ಬಿಡುವ ನಿರ್ಧಾರ ಕೈಗೊಳ್ಳಬೇಡಿ ಎಂದು ಮನವೊಲಿಸಿದ್ದಾರೆ.
ಇದನ್ನೂ ಓದಿ:ಬಾಯಿ ಹರಿತ, ತಪ್ಪುವ ನಾಲಿಗೆ ಹಿಡಿತ.. ಮಂತ್ರಿಗಿರಿ ಕಳ್ಕೊಂಡ ಈಶ್ವರಪ್ಪಗೂ ವಿವಾದಗಳಿಗೂ ನಿಕಟ ನಂಟು!
ಪಕ್ಷ ಬಿಡುವ ನಿರ್ಧಾರ ಇರಲಿಲ್ಲ:ಮಾಜಿ ಸಚಿವ ಹಾಗೂ ಚಾಮರಾಜಪೇಟೆ ಶಾಸಕ ಜಮೀರ್ ಅಹಮದ್ ತಾವು ಪಕ್ಷ ಬಿಡುವ ವಿಚಾರವಾಗಿ ಪ್ರತಿಕ್ರಿಯೆ ನೀಡಿದ್ದು, ನಾನು ಜೆಡಿಎಸ್ನಿಂದ ಕಾಂಗ್ರೆಸ್ಗೆ ಬಂದವನು. ಜೆಡಿಎಸ್ ನನಗೆ ರಾಜಕೀಯ ಸ್ಥಾನಮಾನ ನೀಡಿತ್ತು. ಆದರೆ, ಕಾಂಗ್ರೆಸ್ ಪಕ್ಷ ನನಗೆ ಅಧಿಕಾರವನ್ನು ನೀಡಿದೆ. ಸಾಕಷ್ಟು ಅವಕಾಶಗಳನ್ನು ಕಾಂಗ್ರೆಸ್ ನನಗೆ ನೀಡಿದೆ.
ಕಾಂಗ್ರೆಸ್ ಬಿಡುವ ಪ್ರಶ್ನೆಯೇ ಇಲ್ಲ. ನಾನು ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡುತ್ತೇನೆ ಎಂಬ ಮಾತು ಹರಿದಾಡಿದ್ದು ನಿಜ. ತಕ್ಷಣಕ್ಕೆ ಈ ವಿಚಾರವಾಗಿ ನಾನು ಪ್ರತಿಕ್ರಿಯೆ ನೀಡದಿರುವುದು ಹಲವು ಗೊಂದಲಗಳಿಗೆ ಕಾರಣವಾಗಿತ್ತು. ನಾನು ಕಾಂಗ್ರೆಸ್ ಪಕ್ಷಕ್ಕೆ ಪ್ರಾಮಾಣಿಕವಾಗಿ ದುಡಿಯುತ್ತೇನೆ. ಯಾವುದೇ ಪಕ್ಷಕ್ಕೆ ಸೇರ್ಪಡೆಯಾಗುವ ಯೋಚನೆ ನನ್ನ ಮನಸ್ಸಿನಲ್ಲಿ ಇಲ್ಲ. ಕಾಂಗ್ರೆಸ್ ಪಕ್ಷ ಕಟ್ಟುವ ಕಾರ್ಯದಲ್ಲಿ ತೊಡಗಿದ್ದೇನೆ. ಮುಂದೆಯೂ ತೊಡಗಿಕೊಳ್ಳಲಿದ್ದೇನೆ ಎಂದಿದ್ದಾರೆ.