ಬೆಂಗಳೂರು: ಈಗಾಗಲೇ ಶುರುವಾಗಬೇಕಿದ್ದ ಶೈಕ್ಷಣಿಕ ತರಗತಿಗಳು ಲಾಕ್ಡೌನ್ ಹಿನ್ನೆಲೆ ಇನ್ನೂ ಆರಂಭವಾಗಿಲ್ಲ. ಈ ಕಾರಣದಿಂದ ಜುಲೈನಲ್ಲಿ ರಾಜ್ಯದ ಎಲ್ಲಾ ಶಾಲೆಗಳನ್ನು ಆರಂಭ ಮಾಡಲು ಚಿಂತನೆ ನಡೆಸಲಾಗಿದೆ.
ಕೊರೊನಾ ಹರಡುವಿಕೆ ಹೆಚ್ಚಾದ ಹಿನ್ನೆಲೆಯಲ್ಲಿ ಲಾಕ್ಡೌನ್ ವಿಧಿಸಲಾಗಿತ್ತು. ಇದರಿಂದಾಗಿ ಶಾಲಾ ಮಕ್ಕಳಿಗೆ ನಡೆಯಬೇಕಿದ್ದ ಎಸ್ಎಸ್ಎಲ್ಸಿ ಪರೀಕ್ಷೆ ಹೊರತುಪಡಿಸಿ, ಉಳಿದ ತರಗತಿಗಳ ಪರೀಕ್ಷೆಗಳೆಲ್ಲವೂ ರದ್ದು ಮಾಡಲಾಯಿತು. ಆ ಮಕ್ಕಳನ್ನೆಲ್ಲ ಹಳೇ ಅಂಕಗಳನ್ನು ಪರಿಗಣಿಸಿ ಮುಂದಿನ ತರಗತಿಗೆ ತೇರ್ಗಡೆ ಮಾಡಲಾಯಿತು. ಈ ನಡುವೆ ಈಗಾಗಲೇ ಶುರುವಾಗಬೇಕಿದ್ದ ಶೈಕ್ಷಣಿಕ ತರಗತಿಗಳೆಲ್ಲ ಇನ್ನು ಕಾರ್ಯಾರಂಭ ಮಾಡಿಲ್ಲ. ಈ ಹಿನ್ನೆಲೆ ಜುಲೈನಲ್ಲಿ ಎಲ್ಲಾ ಶಾಲೆಗಳನ್ನು ಆರಂಭ ಮಾಡಲು ಸರ್ಕಾರ ಮುಂದಾಗಿದೆ.
ಜೂನ್ನಲ್ಲಿ ಎಸ್ಎಸ್ಎಲ್ಸಿ ಪರೀಕ್ಷೆ, ದ್ವಿತೀಯ ಪಿಯು ಕೊನೆಯ ಪರೀಕ್ಷೆ ನಡೆಸಬೇಕಾಗಿರುವುದರಿಂದ ಸದ್ಯ ಜೂನ್ನಲ್ಲಿ ಶಾಲೆಗಳನ್ನ ಆರಂಭಿಸುವುದು ಕಷ್ಟ ಸಾಧ್ಯ. ಯಾಕೆಂದರೆ ಪರೀಕ್ಷೆ ವೇಳೆ ಸಾಮಾಜಿಕ ಅಂತರ ಕಾಪಾಡಿಕೊಳ್ಳ ಬೇಕಾಗಿರುವುದರಿಂದ ತರಗತಿಗಳ ಕೊರತೆ ಉಂಟಾಗಬಹುದು. ಹೀಗಾಗಿಯೇ ಜುಲೈ ಮೊದಲ ವಾರದಲ್ಲಿ ಶಾಲೆಗಳನ್ನ ಆರಂಭಿಸಲು ಯೋಜನೆ ರೂಪಿಸಲಾಗಿದೆ.
ಸ್ವಲ್ಪ ಸಮಯಾವಕಾಶ ಕೂಡ ಸಿಗುವುದರಿಂದ ದಾಖಲಾತಿ, ಸಮವಸ್ತ್ರ ಪೂರೈಕೆ, ಪುಸ್ತಕ ವಿತರಣೆಯಂತಹ ಸಿದ್ಧತೆ ಮಾಡಿಕೊಳ್ಳಬಹುದಾಗಿದೆ. ಇನ್ನು ಮುಂದಿನ ವಾರದೊಳಗೆ ಶಿಕ್ಷಣ ತಜ್ಞರೊಂದಿಗೆ ಆಯ್ದ ಖಾಸಗಿ ಶಾಲೆಗಳ ನಿರ್ದೇಶಕರೊಂದಿಗೆ ಸಭೆ ನಡೆಸಿ, ಜುಲೈನಲ್ಲೇ ಆರಂಭಿಸಬಹುದಾ? ಇಲ್ಲವೇ ಎಂಬುದರ ಬಗ್ಗೆ ಅಭಿಪ್ರಾಯ ಪಡೆಯಬೇಕಿದೆ. ಜೊತೆಗೆ ಕೇಂದ್ರ ಸರ್ಕಾರಕ್ಕೂ ಈ ಬಗ್ಗೆ ವರದಿ ಸಲ್ಲಿಸಿ ಅಂತಿಮ ನಿರ್ಧಾರವನ್ನು ಮೇ 31ರಂದು ಲಾಕ್ ಡೌನ್ ಮುಗಿದ ನಂತರ ಘೋಷಿಸಲಾಗುವುದು ಎಂದು ಇಲಾಖೆಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.