ಬೆಂಗಳೂರು: ಅಮೂಲ್ ಅಂದರೆ ಬಿಜೆಪಿ, ನಂದಿನಿ ಅಂದ್ರೆ ಕಾಂಗ್ರೆಸಾ ಎಂದು ಸಚಿವ ಡಾ ಕೆ ಸುಧಾಕರ್ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಮಲ್ಲೇಶ್ವರ ಬಿಜೆಪಿ ಮಾಧ್ಯಮ ಕೇಂದ್ರದಲ್ಲಿ ಸುದ್ದಿಗೋಷ್ಠಿ ವೇಳೆ ನಂದಿನಿ ವರ್ಸಸ್ ಅಮೂಲ್ ಸಂಘರ್ಷ ವಿಚಾರವಾಗಿ ಮಾತನಾಡಿದರು.
ಹಾಲು ಉತ್ಪಾದಕರಿಗೆ ಈಗಾಗಲೇ ನಮ್ಮ ಸರ್ಕಾರ ಪ್ರೋತ್ಸಾಹ ಧನ ಕೊಡುತ್ತಿದೆ. ಪ್ರತಿ ಲೀಟರ್ ಹಾಲಿಗೆ ಎರಡು ರೂಪಾಯಿ ಪ್ರೋತ್ಸಾಹ ಧನ ಕೊಟ್ಟಿದ್ದೇ ನಾವು. ಅದರ ಜೊತೆಗೆ ಕೆಎಂಎಫ್ ಅಲ್ಲಿ ಸಿಗುವಂತ ಲಾಭಾಂಶವನ್ನು ರೈತರಿಗೆ ಹಂಚಲು ಹೇಳಿದ್ದು ನಮ್ಮ ಸರ್ಕಾರ. ನಂದಿನಿ ಹಾಲನ್ನು ಕೇವಲ ಕರ್ನಾಟಕ ರಾಜ್ಯಕ್ಕೆ ಸೀಮಿತ ಮಾಡಬೇಡಿ. ಮಹಾರಾಷ್ಟ್ರದಲ್ಲೂ ಈಗಾಗಲೇ ನಂದಿನಿ ಪ್ರಭಾವ ಇದೆ. ದೆಹಲಿಯಲ್ಲಿ ಕೂಡ ಮಾರಾಟ ಮಾಡಲಿಕ್ಕೆ ಪ್ರಯತ್ನ ಮಾಡುತ್ತಿದ್ದೇವೆ ಎಂದರು.
ತಿರುಪತಿಯ ಲಡ್ಡು ತಯಾರಿಕೆಗೆ ನಮ್ಮ ನಂದಿನಿ ತುಪ್ಪ ಬಳಕೆ ಮಾಡಿಕೊಳ್ಳುತ್ತಿದ್ದಾರೆ. ನಂದಿನಿ ದೇಶಕ್ಕೆ ಮಾದರಿಯಾಗಬೇಕು. ನೆರೆಯ ರಾಜ್ಯಗಳು ಸೇರಿದಂತೆ 16 ರಿಂದ 18 ಖಾಸಗಿ ಸಂಸ್ಥೆಗಳು ರಾಜ್ಯದಲ್ಲಿ ಹಾಲು ಮಾರಾಟ ಮಾಡ್ತಿದೆ. ಆರೋಕ್ಯ ಸೇರಿದಂತೆ ಅನೇಕ ಸಂಸ್ಥೆ ತಮ್ಮ ಹಾಲು ಮಾರಾಟ ಮಾಡ್ತಿದೆ. ಆಗ ನಿಮಗೆ ನೆನಪಾಗಿಲ್ಲ, ಆಗ ಒಬ್ಬರು ಕೂಡ ಚಕಾರ ಎತ್ತಿರಲಿಲ್ಲ. ಈ ರೀತಿಯ ವ್ಯಾಕರಣ ಮಾಡಿ ರೈತರಿಗೆ ಹಾಗೂ ನಮ್ಮ ನಂದಿನಿ ಸಂಸ್ಥೆಗೆ ಅಪಮಾನ ಮಾಡುತ್ತಿದ್ದೀರಾ..?. ಎಲ್ಲವೂ ಕೂಡ ಕಾಮಲೆ ಕಣ್ಣಿಂದ ನೋಡಿ ರಾಜಕಾರಣ ಮಾಡಿಯೇ ಕಾಂಗ್ರೆಸ್ ಪಾತಾಳಕ್ಕೆ ಹೋಗಿದ್ದು. ಇತ್ತೀಚಿನ ದಿನಗಳಲ್ಲಿ ಎಲ್ಲ ಚುನಾವಣೆಯಲ್ಲಿ ಮಣ್ಣು ಮುಕ್ಕುತ್ತಿರೋದು ಕಾಂಗ್ರೆಸ್. ಈ ಚುನಾವಣೆಗಾದರೂ ಸ್ವಲ್ಪ ಮುಖವನ್ನಾದರೂ ಉಳಿಸಿಕೊಳ್ಳಿ. ಈ ರೀತಿಯಾದ ರಾಜಕಾರಣ ಮಾಡಿ ಅಪಹಾಸ್ಯಕ್ಕೆ ಗುರಿಯಾಗೋದು ಬೇಡ ಎಂದು ವಾಗ್ದಾಳಿ ನಡೆಸಿದರು.
ಸ್ಪಷ್ಟ ಬಹುಮತ ನೀಡಿ:ಇನ್ನೇನು ಒಂದು ವರ್ಷಗಳಲ್ಲಿ ಪಾರ್ಲಿಮೆಂಟ್ ಚುನಾವಣೆ ಬರುತ್ತದೆ. ಅದಕ್ಕಿಂತ ಮುನ್ನ ವಿಧಾನಸಭೆ ಚುನಾವಣೆ ಇದೆ, ನಮಗೆ ಅವಕಾಶ ಕೊಡಿ. ಬಿಜೆಪಿಗೆ ಇದುವರೆಗೂ ಸ್ಪಷ್ಟ ಬಹುಮತ ಸಿಕ್ಕಿಲ್ಲ. ಇಲ್ಲಿಯವರೆಗೆ ಕೊಟ್ಟಿಲ್ಲ, ಬೇರೆಯವರಿಗೆ ಕೊಟ್ಟಿದ್ದೀರಾ. ಮೋದಿ ಸರ್ಕಾರಕ್ಕೂ ಕೊಟ್ಟಿರುವುದರಿಂದ ದೇಶ ಅಭಿವೃದ್ಧಿಗೆ ಸಾಧ್ಯ ಆಗಿದ್ದು. ಹೀಗಾಗಿ ಈ ಬಾರಿ ಒಂದು ಸಲ ಅವಕಾಶ ನೀಡಬೇಕು ಎಂದು ವಿನಂತಿ ಮಾಡಿಕೊಂಡರು.
ನಮ್ಮ ಅವಧಿಯಲ್ಲಿ ಬಿಎಸ್ವೈ, ಬೊಮ್ಮಾಯಿ ಉತ್ತಮ ಆಡಳಿತ ನೀಡಿದ್ರು. ಸಮರ್ಥ ಆಡಳಿತವನ್ನು ಸಿಎಂ ಬೊಮ್ಮಾಯಿ ಅವರು ಮಾಡಿದ್ರು. ಬೊಮ್ಮಾಯಿ ಅವರು ಮೃದುವಾಗಿದ್ದರೂ ಉತ್ತಮ ನಿರ್ಧಾರಗಳನ್ನು ಕೈಗೊಂಡಿದ್ದಾರೆ. ಯುದ್ಧದಂತಹ ಸಂದರ್ಭದಲ್ಲಿ ಎಲ್ಲ ಪಕ್ಷ ಒಂದಾಗುವ ಮನಸ್ಥಿತಿ ಇರಬೇಕು. ಆದರೆ ಕಾಂಗ್ರೆಸ್ ಕೋವಿಡ್ ವೇಳೆ ಎಳ್ಳಷ್ಟು ಸಹಾಯ ಮಾಡಿಲ್ಲ. ಬರೀ ರಾಜಕೀಯ ಬೆರೆಸಿಕೊಂಡು ದಿನ ಕಳೆದಿದೆ. ಕೋವಿಡ್ಗೂ ಮೊದಲು ಇದ್ದ ಸ್ಥಿತಿಗೆ ನಾವು ಇವತ್ತು ಮರಳಿದ್ದೇವೆ. ದೇಶದಲ್ಲಿ 220 ಡೋಸ್ ಲಸಿಕೆ ಕೊಟ್ಟಿದ್ದೇವೆ. 1.15 ಕೋಟಿ ಬೂಸ್ಟರ್ ಡೋಸ್ ಲಸಿಕೆ ನೀಡಲಾಗಿದೆ. ಲಸಿಕೆಯನ್ನು ಮೋದಿ ಲಸಿಕೆ ಅಂತ ಅಪಹಾಸ್ಯ ಮಾಡಿದ್ರು. ಕೆಲವೊಂದು ಧರ್ಮದಲ್ಲಿ ಕೀಳುಮಟ್ಟದ ರಾಜಕೀಯ ಕಾಂಗ್ರೆಸ್ ಮಾಡಿತ್ತು. ಲಸಿಕೆ ಪಡೆದರೆ ಸಂತಾನ ಕಳೆದುಕೊಳ್ಳುತ್ತಾರೆ ಅಂತ ಕಾಂಗ್ರೆಸ್ ಅಪಹಾಸ್ಯ ಮಾಡಿದ್ರು ಎಂದರು.