ಬೆಂಗಳೂರು: ಭಾರತೀಯ ದಂಡ ಸಂಹಿತೆ (ಐಪಿಸಿ) 279 (ನಿರ್ಲಕ್ಷ್ಯದ ಚಾಲನೆ) ಮನುಷ್ಯರಿಗೆ ಮಾತ್ರ ಅನ್ವಯಿಸುತ್ತವೆ ಎಂದು ತಿಳಿಸಿರುವ ಹೈಕೋರ್ಟ್, ರಸ್ತೆ ಅಪಘಾತಗಳಲ್ಲಿ ಸಾಕು ನಾಯಿಗಳಿಗೆ ಗಾಯವಾದಲ್ಲಿ ಇದೇ ಸೆಕ್ಷನ್ ಅಡಿ ಕ್ರಮ ಕೈಗೊಳ್ಳುವುದಕ್ಕೆ ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟಿದೆ.
2018ರಲ್ಲಿ ವಾಹನ ಚಲಾಯಿಸುತ್ತಿರುವ ಸಂದರ್ಭದಲ್ಲಿ ನಾಯಿಗೆ ತಾಕಿದ ಪ್ರಕರಣ ರದ್ದು ಕೋರಿ ಬೆಂಗಳೂರಿನ ಕುರುಬರಹಳ್ಳಿಯ ನಿವಾಸಿ ಜಿ. ಪ್ರತಾಪ್ ಕುಮಾರ್ ಎಂಬುವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾ. ಸೂರಜ್ ಗೋವಿಂದರಾಜ್ ಅವರಿದ್ದ ನ್ಯಾಯಪೀಠ, ಐಪಿಸಿ ಸೆಕ್ಷನ್ 279 ಕೇವಲ ಮನುಷ್ಯರಿಗೆ ಸಂಬಂಧಿಸಿದ್ದಾಗಿದೆ. ಆದರೆ, ಮಾನವನ ಹೊರತಾಗಿ ಇತರ ಪ್ರಾಣಿಗಳಿಗೆ ತೊಂದರೆಯಾದಲ್ಲಿ ಅನ್ವಯವಾಗುವುದಿಲ್ಲ ಎಂದು ತಿಳಿಸಿದೆ.
ಪ್ರಕರಣ ಸಂಬಂಧ ದೂರುದಾರರ ಪರ ವಕೀಲರು, ಸುಪ್ರೀಂಕೋರ್ಟ್ ಪ್ರಕರಣವೊಂದರಲ್ಲಿ ಹೇಳಿರುವಂತೆ ಪ್ರಾಣಿಗಳಿಗೂ ಬದುಕುವ ಹಕ್ಕಿದೆ ಮತ್ತು ಪ್ರಾಣಿಗಳನ್ನು ಸಮಾನವಾಗಿ ಕಾಣಬೇಕು. ಆದರೆ, ಯಾವುದೇ ಪ್ರಾಣಿಯೂ ಮನುಷ್ಯನಿಗಿಂತ ಶ್ರೇಷ್ಠವಲ್ಲ ಎಂಬ ಅಂಶವನ್ನು ಉಲ್ಲೇಖಿಸಿದ್ದರು. ಆದರೆ, ಈ ಅಂಶ ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ ಕಾಯಿದೆಗೆ ಅನ್ವಯವಾಗಲಿದೆ. ಆದರೆ, ಐಪಿಸಿ ಕಾಯಿದೆಯಲ್ಲಿ ಅನ್ವಯವಾಗುವುದಿಲ್ಲ ಎಂದು ನ್ಯಾಯಪೀಠ ತಿಳಿಸಿದೆ.
ಅಲ್ಲದೇ, ದೂರುದಾರರ ಪರ ವಕೀಲರ ವಾದ ಪರಿಗಣಿಸಿದಲ್ಲಿ ಐಪಿಸಿ ಕಾಯಿದೆಯಲ್ಲಿ ವ್ಯಕ್ತಿ ಎಂಬ ಪದದ ಬದಲಿಗೆ ಪ್ರಾಣಿ ಎಂಬುದಾಗಿ ಅರ್ಥೈಸಬೇಕಾಗಲಿದೆ. ಆಗ ಸಾಕು ಪ್ರಾಣಿಗಳು ಸಾವನ್ನಪ್ಪಿದಾಗ ಸೆಕ್ಷನ್ 302(ಕೊಲೆ) ಪ್ರಕರಣ ದಾಖಲಿಸಬೇಕಾಗುತ್ತದೆ ಎಂದು ಆದೇಶದಲ್ಲಿ ಹೇಳಲಾಗಿದೆ.
ಅಲ್ಲದೆ, ಐಪಿಸಿ 428(10 ರೂ.ಗಳಿಗೆ ಮೇಲ್ಪಟ್ಟ ಮೌಲ್ಯದ ಪ್ರಾಣಿಯನ್ನು ಉದ್ದೇಶ ಪೂರಕವಾಗಿ ವಿಷ ಹಾಕಿ ಕೊಲ್ಲುವುದು ಇಲ್ಲವೇ ಅಂಗವೈಕಲ್ಯವನ್ನುಂಟು ಮಾಡುವುದು) ಮತ್ತು ಸೆಕ್ಷನ್ 429(50 ರೂ.ಮೌಲ್ಯಕ್ಕೂ ಹೆಚ್ಚಿನ ಬೆಲೆಯ ಪ್ರಾಣಿಗಳನ್ನು ಉದ್ದೇಶ ಪೂರಕವಾಗಿ ವಿಷ ಹಾಕಿ ಕೊಲ್ಲುವುದು ಹಾಗೂ ಅಂಗ ವೈಕಲ್ಯವನ್ನುಂಟು ಮಾಡುವುದಾಗಿದೆ) ಅಡಿ ಪ್ರಕರಣ ದಾಖಲಾಗಿತ್ತು.