ಬೆಂಗಳೂರು:ರಾಜ್ಯದಲ್ಲಿ ಮೈತ್ರಿ ಸರ್ಕಾರ ಪತನವಾಗುತ್ತಿದ್ದಂತೆ ಪ್ರತಿಪಕ್ಷದ ನಾಯಕರಾಗಲು ಹಾಗೂ ಕೆಪಿಸಿಸಿ ಅಧ್ಯಕ್ಷರಾಗಲು ಕಾಂಗ್ರೆಸ್ ಪಕ್ಷದ ನಾಯಕರಲ್ಲಿ ತೀವ್ರ ಪೈಪೋಟಿ ಆರಂಭವಾಗಿದೆ. ಈ ಸಂಬಂಧ ಈಗಾಗಲೇ ಮಾಜಿ ಡಿಸಿಎಂ ಡಾ ಜಿ.ಪರಮೇಶ್ವರ್ ಹಾಗೂ ಮಾಜಿ ಸಚಿವ ಡಿ.ಕೆ ಶಿವಕುಮಾರ್ ಮನೆಗಳಲ್ಲಿ ಪ್ರತ್ಯೇಕ ಸಭೆ ನಡೆಸಿದ್ದಾರೆ.
ಡಿಕೆಶಿ ನಿವಾಸದಲ್ಲಿ ತಡರಾತ್ರಿಯವರೆಗೆ ಮೀಟಿಂಗ್ ನಡೆದರೆ, ಇದೇ ಸದಾಶಿವನಗರದಲ್ಲಿರುವ ಡಾ ಜಿ.ಪರಮೇಶ್ವರ್ ನಿವಾಸದಲ್ಲಿ ಕೂಡಾ ಸುದೀರ್ಘ ಸಭೆ ನಡೆದಿದೆ. ಕಾಂಗ್ರೆಸ್ ಮುಖಂಡರ ಜೊತೆ ಡಿಕೆಶಿ ಹಾಗೂ ಪರಮೇಶ್ವರ್ ಪ್ರತ್ಯೇಕ ಸಭೆ ನಡೆಸಿದ್ದಾರೆ.
ಮೈತ್ರಿ ಸರ್ಕಾರಕ್ಕೆ ಸೋಲು.. ಜೆಡಿಎಸ್ ನಾಯಕರ ಮಹತ್ವದ ಚರ್ಚೆ
ಬೆಂಗಳೂರಿನ ಮೂರು ಕ್ಷೇತ್ರಗಳ ಮುಖಂಡರ ಜೊತೆ ಡಿಕೆಶಿ ಸದಾಶಿವನಗರದ ನಿವಾಸದಲ್ಲಿಯೇ ಸಭೆ ನಡೆಸಿದ್ದಾರೆ. ಆದರೆ,ಸಿದ್ದರಾಮಯ್ಯ ರಾಜೀನಾಮೆ ನೀಡಿರುವ ಯಶವಂತಪುರ, ಕೆ.ಆರ್.ಪುರಂ, ಆರ್.ಆರ್ ನಗರ ಶಾಸಕರನ್ನ ಯಾವುದೇ ಕಾರಣಕ್ಕೂ ಪಕ್ಷಕ್ಕೆ ಸೇರಿಸಲ್ಲವೆಂದಿದ್ದಾರೆ. ಹೀಗಾಗಿ ಯಾವಾಗ ಬೇಕಾದರೂ ಚುನಾವಣೆ ಆಗಬಹುದು. ಆದ್ದರಿಂದ ನೀವೆಲ್ಲರೂ ಈಗಿನಿಂದಲೇ ಸಿದ್ಧತೆ ನಡೆಸಿ. ಬೆಂಗಳೂರಿನ ನಾಲ್ಕು ಕ್ಷೇತ್ರ ನಾನೇ ವಹಿಸಿಕೊಳ್ತೇನೆ, ಅತೃಪ್ತರ ಕ್ಷೇತ್ರಗಳ ಉಸ್ತುವಾರಿಯಾಗ್ತೇನೆ. ನಾಲ್ಕೂ ಕ್ಷೇತ್ರಗಳನ್ನ ನಾವೇ ಗೆಲ್ಲಬೇಕು. ಒಂದು ತಿಂಗಳು ಮುಗಿಯಲಿ. ನಾಲ್ಕು ಕ್ಷೇತ್ರಗಳಿಗೆ ನಾನೇ ಬರುತ್ತೇನೆ. ನಾಲ್ಕೂ ಕ್ಷೇತ್ರಗಳ ಮುಖಂಡರ ಸಭೆ ನಡೆಸುತ್ತೇನೆ. ಗೆಲ್ಲುವಂತ ಅಭ್ಯರ್ಥಿಗಳನ್ನ ಹುಡುಕೋಣ. ಒಟ್ಟಾಗಿ ಎಲ್ಲರೂ ಸೇರಿ ಗೆಲ್ಲಿಸಿಕೊಳ್ಳೋಣ ಎಂದು ಡಿಕೆಶಿ ಹುರಿದುಂಬಿಸಿದ್ದಾರೆ.
ಗುರುಶಿಷ್ಯರ ಹಠಮಾರಿತನ: ಅಂದು ವೀರೇಂದ್ರ ಪಾಟೀಲ್, ಇಂದು ಹೆಚ್ಡಿಕೆ ಸಿಎಂ ಸ್ಥಾನಕ್ಕೆ ರಾಜೀನಾಮೆ...!
ಕೊರಗು ಬೇಡ
ಸರ್ಕಾರ ಹೋಯ್ತು ಅನ್ನೋ ಕೊರಗು ನಿಮಗೆ ಬೇಡ. ಪ್ರಮುಖವಾಗಿ ನಾಲ್ಕು ಕ್ಷೇತ್ರಗಳಿಗೆ ನಾನೇ ರಣತಂತ್ರ ರೂಪಿಸ್ತೇನೆ ಎಂದು ನಿನ್ನೆ ರಾತ್ರಿ ನಡೆದ ಮುಖಂಡರ ಸಭೆಯಲ್ಲಿ ಡಿಕೆಶಿ ಭರವಸೆ ನೀಡಿದ್ದಾರೆ ಎನ್ನಲಾಗಿದೆ.
ತೀವ್ರ ಪೈಪೋಟಿ
ಪರಮೇಶ್ವರ್, ಡಿಕೆಶಿ ಕೆಪಿಸಿಸಿ ಅಧ್ಯಕ್ಷ ಇಲ್ಲವೇ ಪ್ರತಿಪಕ್ಷದ ನಾಯಕ ಸ್ಥಾನಕ್ಕೆ ಪೈಪೋಟಿ ನಡೆಸಿರುವ ಬಗ್ಗೆ ಮಾಹಿತಿ ಇದೆ. ಅಲ್ಪ ಮತಗಳ ಮುನ್ನಡೆಯೊಂದಿಗೆ ಬಿಜೆಪಿ ಸರ್ಕಾರ ರಚನೆ ಮಾಡುತ್ತಿದ್ದು ಯಾವುದೇ ಸಂದರ್ಭದಲ್ಲಿಯೂ ಆತಂಕ ಎದುರಾಗಬಹುದು. ಅಲ್ಲದೆ ಮಧ್ಯಂತರ ಚುನಾವಣೆಯನ್ನು ಘೋಷಿಸಿ ಜನರ ಮುಂದೆ ಹೋಗುವ ಸಾಧ್ಯತೆ ಹೆಚ್ಚಿದೆ. ಇದರಿಂದ ಈ ಸಂದರ್ಭದಲ್ಲಿ ಕೆಪಿಸಿಸಿ ಅಧ್ಯಕ್ಷರಾದ ಹೆಚ್ಚಿನ ಅನುಕೂಲ ಎಂಬ ಯೋಚನೆಯನ್ನು ಇಬ್ಬರು ನಾಯಕರು ಮಾಡಿದ್ದಾರೆ ಎಂಬ ಮಾಹಿತಿ ಇದೆ.
ಈ ಕಾರಣ ಇವರಿಬ್ಬರು ಯಾವುದಾದರೂ ಒಂದು ಸ್ಥಾನಕ್ಕೆ ಒತ್ತಡ ಹೇರುತ್ತಿದ್ದು ಸಾಧ್ಯವಾದಷ್ಟು ಕೆಪಿಸಿಸಿ ಅಧ್ಯಕ್ಷ ಸ್ಥಾನದ ತಲೆ ಕಣ್ಣು ನೆಟ್ಟಿದ್ದಾರೆ ಎನ್ನಲಾಗಿದೆ. ಸಾಮಾನ್ಯವಾಗಿ ಕಾಂಗ್ರೆಸ್ ಪಕ್ಷದಲ್ಲಿ ಕೆಪಿಸಿಸಿ ಅಧ್ಯಕ್ಷರಾಗಿ ಚುನಾವಣೆ ಎದುರಿಸಿದರೆ ಮುಖ್ಯಮಂತ್ರಿ ಅಭ್ಯರ್ಥಿಯಾಗುವುದು ವಾಡಿಕೆ. ಅವರು ಚುನಾವಣೆಯಲ್ಲಿ ಸೋತ ಪಕ್ಷದಲ್ಲಿ ಶಾಸಕಾಂಗ ಪಕ್ಷದ ನಾಯಕರಿಗೆ ಅವಕಾಶ ಲಭ್ಯವಾಗುತ್ತದೆ. ಇದರಿಂದ ಅಭ್ಯರ್ಥಿಗಳಿಗೆ ಬಿ ಫಾರಂ ವಿತರಿಸುವ ಹಾಗೂ ಮುಂದಿನ ಮುಖ್ಯಮಂತ್ರಿ ಅಭ್ಯರ್ಥಿ ಯಾಗುವ ಅವಕಾಶ ಸಿಗುವ ಕೆಪಿಸಿಸಿ ಸ್ಥಾನದ ತಲೆ ಹೆಚ್ಚಿನ ಒಲವನ್ನ ಈ ಇಬ್ಬರು ನಾಯಕರು ತೋರಿಸಿದ್ದಾರೆ ಎನ್ನಲಾಗುತ್ತಿದೆ.
ಪಾಟೀಲರ ಪ್ರಯತ್ನ
ಜಿಂದಾಲ್ ವಿಚಾರದಲ್ಲಿ ಪಕ್ಷದ ನಿಲುವನ್ನು ಖಂಡಿಸಿದ್ದ ಮಾಜಿ ಸಚಿವ ಹೆಚ್ ಕೆ ಪಾಟೀಲ್ ಸಹ ಒಂದು ಕೈ ನೋಡುವ ಇಚ್ಛಾಶಕ್ತಿ ಹೊರಹಾಕಿದ್ದಾರೆ ಎನ್ನಲಾಗಿದೆ. ವಿಶ್ವಾಸಮತದ ಚರ್ಚೆಯಲ್ಲಿ ಪಾಲ್ಗೊಂಡು ಕಾನೂನಿನ ಪಟ್ಟು ಹಾಗೂ ನೈತಿಕತೆ ಹಾಗೌ ಮೌಲ್ಯಗಳ ಬಗ್ಗೆ ಗಮನ ಸೆಳೆದಿದ್ದಾರೆ. ಹೀಗಾಗಿ ಅವರು ಸಹ ಪ್ರತಿಪಕ್ಷದ ನಾಯಕನಾಗುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ ಎಂದೇ ಹೇಳಲಾಗುತ್ತಿದೆ. ಇವೆಲ್ಲ ಸನ್ನಿವೇಶವನ್ನು ಸಿದ್ದರಾಮಯ್ಯ ಸುಮ್ಮನೆ ನೋಡುತ್ತಿದ್ದಾರೆ. ಅವರ ನಡೆ ಏನು ಎಂಬುದು ಇನ್ನೂ ಹೊರ ಬಿದ್ದಿಲ್ಲ.