ಬೆಂಗಳೂರು: ಮುಜರಾಯಿ ವ್ಯಾಪ್ತಿಯ ದೇವಸ್ಥಾನಗಳಿಗೆ ಅನುದಾನ ನೀಡುವ ಕುರಿತು ವಿಧಾನಸಭೆಯಲ್ಲಿ ಇಂದು ಸ್ವಾರಸ್ಯಕರ ಪ್ರಸಂಗ ನಡೆಯಿತು.
ನಮ್ಮ ಕ್ಷೇತ್ರದಲ್ಲಿರುವ ದೇವಸ್ಥಾನಗಳಿಗೆ ಅನುದಾನ ನೀಡಿದರೆ ದೇವರು ನಿಮಗೆ ಆಶೀರ್ವಾದ ಮಾಡುತ್ತಾನೆ ಎಂದು ಶಾಸಕ ಆನಂದ್ ನ್ಯಾಮಗೌಡ, ಸಚಿವರನ್ನು ಉದ್ದೇಶಿಸಿ ಹೇಳಿದರು. ‘ಸಚಿವರಿಗಷ್ಟೇ ಆಶೀರ್ವಾದವೋ, ಎಲ್ಲರಿಗೂ ಒಳ್ಳೆಯದು ಆಗುತ್ತೋ? ಅನುದಾನದ ಮೇಲೆ ಆಶೀರ್ವಾದದ ಪ್ರಮಾಣ ನಿರ್ಧಾರವಾಗುತ್ತೋ’ ಎಂದು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಪ್ರಶ್ನಿಸಿದರು. ಆಗ 'ಅನುದಾನ ಕೊಟ್ಟರೆ ಸಚಿವರಿಗೆ ಒಳ್ಳೆಯದು ಆಗುತ್ತದೆ’ ಎಂದು ನ್ಯಾಮಗೌಡ ಹೇಳಿದರು. ನಂತರ ಸದನ ನಗೆಗಡಲಲ್ಲಿ ತೇಲಿತು.
ಇದನ್ನೂ ಓದಿ: ಡಬಲ್ ಇಂಜಿನ್ ಸರ್ಕಾರ ಅಲ್ಲ, ಡಬ್ಬಾ ಸರ್ಕಾರ: ಮುನ್ನೋಟ ಇಲ್ಲದ ಬಜೆಟ್ ಮಂಡನೆ: ಕಲಾಪದಲ್ಲಿ ಸಿದ್ದರಾಮಯ್ಯ ಕೆಂಡ
ಮತ್ತೊಂದು ಪ್ರಶ್ನೆಯಲ್ಲಿ ಶಾಸಕ ಐಹೋಳೆ ಡಿ. ಮಹಾಲಿಂಗಪ್ಪ ಅವರು, 'ಬೆಳಗಾವಿ ಜಿಲ್ಲೆಯ ರಾಯಭಾಗ ಕ್ಷೇತ್ರದ ದೇವಸ್ಥಾನಗಳಿಗೂ ಅನುದಾನ ನೀಡಿ, ನಿಮಗೆ ಪುಣ್ಯ ಬರುತ್ತದೆ ' ಎಂದು ಹೇಳಿದರು.ಎಲ್ಲಾ ಶಾಸಕರು ಕ್ಷೇತ್ರದ ಪಟ್ಟಿ ಕೊಟ್ಟಿದ್ದಾರೆ. ಈ ಬಗ್ಗೆ ಮುಖ್ಯಮಂತ್ರಿಯೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಮುಜರಾಯಿ ಸಚಿವೆ ಶಶಿಕಲಾ ಜೊಲ್ಲೆ ಸದನಕ್ಕೆ ಭರವಸೆ ನೀಡಿದರು.
ಆರಂಭದಲ್ಲಿ ಸದನ ಖಾಲಿ:ವಿಧಾನಸಭೆಯಲ್ಲಿ ನಿಗದಿಯಂತೆ ಪ್ರಶ್ನೋತ್ತರ ಕಲಾಪ ಆರಂಭವಾದಾಗ ಶಾಸಕರ ಹಾಜರಾತಿ ಪ್ರಮಾಣ ಕಡಿಮೆ ಇತ್ತು. ಆಡಳಿತ ಮತ್ತು ಪ್ರತಿಪಕ್ಷಗಳ ಸಾಲಿನಲ್ಲೂ ಸದಸ್ಯರ ಹಾಜರಾತಿ ವಿರಳವಾಗಿತ್ತು.ಬಜೆಟ್ ಅಧಿವೇಶನದ 2ನೇ ದಿನವಾದ ಇಂದು ಕೂಡ ಪೂರ್ಣ ಪ್ರಮಾಣದಲ್ಲಿ ಶಾಸಕರ ಹಾಜರಾತಿ ಇರಲಿಲ್ಲ.