ಕರ್ನಾಟಕ

karnataka

ETV Bharat / state

ಕೊರೊನಾ ವಾರಿಯರ್ಸ್​ಗೆ ವಿಮೆ ಪರಿಹಾರ ವಿಳಂಬ : ಸರ್ಕಾರಕ್ಕೆ ಲೋಕಾಯುಕ್ತ ನೋಟಿಸ್

ಆರೋಗ್ಯ ಕಾರ್ಯಕರ್ತರು, ಪೊಲೀಸ್, ನಗರ ಸ್ಥಳೀಯ ಸಂಸ್ಥೆಗಳ ನೌಕರರು, ಆಶಾ ಕಾರ್ಯಕರ್ತೆಯರು ಸೇರಿ ಕರ್ತವ್ಯ ನಿರ್ವಹಣೆ ಸಂದರ್ಭದಲ್ಲಿ ಮೃತಪಟ್ಟವರು ಎಷ್ಟು ಎಂಬ ವಿವರ ಸಲ್ಲಿಸಬೇಕು..

corona-warriors-lokayukta-notice-to-govt
ಸರ್ಕಾರಕ್ಕೆ ಲೋಕಾಯುಕ್ತ ನೋಟಿಸ್

By

Published : Feb 16, 2021, 10:54 PM IST

ಬೆಂಗಳೂರು :ಕೊರೊನಾ ನಿಯಂತ್ರಣ ಕರ್ತವ್ಯದ ವೇಳೆ ಮೃತಪಟ್ಟವರಿಗೆ ಘೋಷಿಸಿದ್ದ ವಿಮೆ ಪರಿಹಾರ ಪಾವತಿ ವಿಳಂಬಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತರು ಸ್ವಯಂ ಪ್ರೇರಿತವಾಗಿ ದಾಖಲಿಸಿಕೊಂಡಿರುವ ಅರ್ಜಿ ಸಂಬಂಧ ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದ್ದಾರೆ.

ಓದಿ: ರಾಜ್ಯದಲ್ಲಿಂದು 438 ಮಂದಿಗೆ ಸೋಂಕು.. 6 ಮಂದಿ ಸಾವು..

ಲೋಕಾಯುಕ್ತ ನ್ಯಾಯಮೂರ್ತಿ ಪಿ.ವಿಶ್ವನಾಥಶೆಟ್ಟಿ ಅವರು, ಸರ್ಕಾರದ ಮುಖ್ಯ ಕಾರ್ಯದರ್ಶಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಹೆಚ್ಚುವರಿ ಮುಖ್ಯಕಾರ್ಯದರ್ಶಿ, ವೈದ್ಯಕೀಯ ಶಿಕ್ಷಣ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ನಗರಾಭಿವೃದ್ಧಿ ಇಲಾಖೆಯ ಪ್ರಧಾನ ಕಾರ್ಯದರ್ಶಿ, ರಾಜ್ಯ ಪೊಲೀಸ್ ಮಹಾನಿರ್ದೇಶಕರು, ಬಿಬಿಎಂಪಿ ಆಯುಕ್ತರು ಸೇರಿ 11 ಅಧಿಕಾರಿಗಳಿಗೆ ನೋಟಿಸ್ ಜಾರಿ ಮಾಡಲು ಆದೇಶಿಸಿದ್ದಾರೆ.

ಅಲ್ಲದೇ, ಮೃತ ಕೊರೊನಾ ವಾರಿಯರ್ಸ್ ಕುಟುಂಬ ಸದಸ್ಯರ ಅಹವಾಲುಗಳನ್ನು ಆಲಿಸಬೇಕು. ಕೂಡಲೇ ಸಮಸ್ಯೆ ಬಗೆಹರಿಸಬೇಕು. ಈ ಸಂಬಂಧ ಮೂರು ವಾರದೊಳಗೆ ವರದಿ ಸಲ್ಲಿಸಬೇಕು ಎಂದು ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿದ್ದಾರೆ. ಆರೋಗ್ಯ ಕಾರ್ಯಕರ್ತರು, ಪೊಲೀಸ್, ನಗರ ಸ್ಥಳೀಯ ಸಂಸ್ಥೆಗಳ ನೌಕರರು, ಆಶಾ ಕಾರ್ಯಕರ್ತೆಯರು ಸೇರಿ ಕರ್ತವ್ಯ ನಿರ್ವಹಣೆ ಸಂದರ್ಭದಲ್ಲಿ ಮೃತಪಟ್ಟವರು ಎಷ್ಟು ಎಂಬ ವಿವರ ಸಲ್ಲಿಸಬೇಕು.

ಎಷ್ಟು ಕುಟುಂಬಗಳಿಗೆ 30 ಲಕ್ಷ ರೂ. ವಿಮಾ ಪರಿಹಾರ ನೀಡಲಾಗಿದೆ. ಇನ್ನೂ ಎಷ್ಟು ಮಂದಿಗೆ ಪರಿಹಾರ ನೀಡುವುದು ಬಾಕಿ ಇದೆ..? ಪರಿಹಾರ ನೀಡಿಕೆ ವಿಳಂಬಕ್ಕೆ ಕಾರಣಗಳೇನು ಎಂಬುದರ ಮಾಹಿತಿ ಒದಗಿಸಬೇಕು ಎಂದು ಸೂಚಿಸಿದ್ದಾರೆ. ಮೃತರ ಕುಟುಂಬಕ್ಕೆ ಈಗಾಗಲೇ ಪಾವತಿಸಿರುವ ವಿಮಾ ಮೊತ್ತ ಮತ್ತು ರಾಜ್ಯವು ನಿರ್ದಿಷ್ಟಪಡಿಸಿದ ಇತರೆ ಪರಿಹಾರ ಮೊತ್ತಗಳು, ಪರಿಗಣನೆಗೆ ಬಾಕಿ ಇರುವ ಅರ್ಜಿಗಳ ಸಂಖ್ಯೆ, ತಿರಸ್ಕರಿಸಿರುವ ಅರ್ಜಿಗಳ ಸಂಖ್ಯೆ, ನಿರಾಕರಣೆಯ ಕಾರಣಗಳು ಮತ್ತು ವಿಳಂಬದ ಕಾರಣಗಳ ಬಗ್ಗೆ ವಿವರಗಳನ್ನು ಸಲ್ಲಿಸಬೇಕು.

ಮೃತಪಟ್ಟ ಕೊರೊನಾ ವಾರಿಯರ್ಸ್ ಕುಟುಂಬಗಳನ್ನು ಪರಿಹಾರಕ್ಕಾಗಿ ಅಲೆದಾಡಿಸದೆ ಕೂಡಲೇ ವಿಮಾ ಪರಿಹಾರ ಪಾವತಿಸಬೇಕು. ಈ ಎಲ್ಲ ಸಂಗತಿಗಳ ಕುರಿತು ಮುಂದಿನ ಮೂರು ವಾರಗಳಲ್ಲಿ ಉತ್ತರಿಸಬೇಕು ಎಂದು ಸರ್ಕಾರಕ್ಕೆ ಗಡುವು ನೀಡಿದ್ದು. ವಿಚಾರಣೆಯನ್ನು ಮಾ.15ಕ್ಕೆ ಮುಂದೂಡಿದ್ದಾರೆ.

ABOUT THE AUTHOR

...view details