ಯಲಹಂಕ: ಬೆಂಗಳೂರು ನಗರ ಜಿ.ಪಂ ಸದಸ್ಯೆಯನ್ನ ಕಾರ್ಯಕ್ರಮಕ್ಕೆ ಆಹ್ವಾನಿಸಿದ ಆಯೋಜಕರು ಶಿಕ್ಷಣ ಸಚಿವ ಸುರೇಶ್ ಕುಮಾರ್ ಮುಂದೆಯೇ ಜಿ.ಪಂ ಸದಸ್ಯೆಯ ಹೆಸರೇಳದೆ ಅವಮಾನಿಸಿದ್ದಾರೆ ಎಂದು ಸಿಂಗನಾಯಕನಹಳ್ಳಿ ಜಿ. ಪಂ ಸದಸ್ಯೆ ಲಾವಣ್ಯ ನರಸಿಂಹಮೂರ್ತಿ ತಮ್ಮ ಅಸಮಾಧಾನ ಹೊರಹಾಕಿದ್ದಾರೆ.
ಶುಕ್ರವಾರ ಯಲಹಂಕ ತಾಲೂಕಿನ ರಾಜನುಕುಂಟೆ ಗ್ರಾಮ ಪಂಚಾಯಿತಿಯಲ್ಲಿ ಡಿಜಿಟಲ್ ಲೈಬ್ರರಿ ಮತ್ತು ಸ್ವರ್ಧಾತ್ಮಕ ಅಧ್ಯಯನ ಕೇಂದ್ರ ಮತ್ತು ಮಕ್ಕಳ ಗ್ರಾಮ ಸಭೆ ಕಾರ್ಯಕ್ರಮ ಆಯೋಜನೆ ಮಾಡಲಾಗಿದ್ದು. ಕಾರ್ಯಕ್ರಮದಲ್ಲಿ ಶಿಕ್ಷಣ ಸಚಿವ ಸುರೇಶ್ ಕುಮಾರ್, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಮತ್ತು ಶಾಸಕ ಎಸ್ ಆರ್ ವಿಶ್ವನಾಥ್. ಹಾಗೆಯೇ ಅದೇ ಕ್ಷೇತ್ರದ ಜಿಲ್ಲಾ ಪಂಚಾಯತ್ ಸದಸ್ಯೆ ಲಾವಣ್ಯ ನರಸಿಂಹಮೂರ್ತಿ ಸಹ ಭಾಗವಹಿಸಿದ್ದರು.
ವೇದಿಕೆ ಹತ್ತಿಸಿ ಜಿಲ್ಲಾ ಪಂಚಾಯತ್ ಸದಸ್ಯೆಯನ್ನ ಅವಮಾನಿಸಿದ್ರಾ ಶಾಸಕರು..? ಕಾರ್ಯಕ್ರಮದ ವೇದಿಕೆಯಲ್ಲಿದ್ದ 27 ಗ್ರಾಮ ಪಂಚಾಯತ್ ಸದಸ್ಯರ ಹೇಳಿದ ಅಯೋಜಕರು ಲಾವಣ್ಯ ನರಸಿಂಹಮೂರ್ತಿಯವರ ಹೆಸರನ್ನ ಹೇಳಿಲಿಲ್ಲ. ಇದರಿಂದ ಅಸಮಾಧಾನಗೊಂಡ ಲಾವಣ್ಯ ನರಸಿಂಹಮೂರ್ತಿ ಕರೆದು ಅವಮಾನ ಮಾಡ್ತೀರಾ ಎಂದು ಆಯೋಜಕರಿಗೆ ಕ್ಲಾಸ್ ತಗೊಂಡಿದ್ದಾರೆ. ನಾನಾಗಿ ನಾನು ಇಲ್ಲಿಗೆ ಬಂದಿಲ್ಲ, ಜನ ಆಯ್ಕೆ ಮಾಡಿ ಕಳ್ಸಿದಾರೆ, ಕೆಲ್ಸ ಮಾಡಿದ್ದೀನಿ, ನನ್ನ ಇಲಾಖೆಗೆ ಸಂಬಂಧಿಸಿದ ಕಾರ್ಯಕ್ರಮ ಇದು. ಸೌಜನ್ಯ ಅನ್ನೋದೆ ಇಲ್ವೇನ್ರಿ, ನೀವು ನನಗೆ ಸನ್ಮಾನ ಮಾಡೋದು ಬೇಡ, ಹೆಸರು ಹೇಳೋ ಸೌಜನ್ಯ ತೋರ್ಸಿಲ್ಲ. ನಮ್ಮ ಇಲಾಖೆಯಿಂದ ಸಂಬಳ ಪಡಿತ್ತಾರೆ, 27 ಗ್ರಾಮ ಪಂಚಾಯಿತಿ ಸದಸ್ಯರ ಹೆಸರು ಹೇಳ್ತಾರೆ, ಇದ್ದ ಒಬ್ಬ ಜಿಲ್ಲಾ ಪಂಚಾಯತ್ ಸದಸ್ಯೆ ಹೆಸರು ಹೇಳಲಿಕ್ಕೆ ಏನೆಂದು ತಮ್ಮ ಅಸಮಾಧಾನ ಹೊರಹಾಕಿ ಕಾರ್ಯಕ್ರಮದಿಂದ ಹೊರಟು ಹೋದರು.
ಯಾರೀ ಲಾವಣ್ಯ ನರಸಿಂಹಮೂರ್ತಿ?:ಇವರು ಕಾಂಗ್ರೆಸ್ ಪಕ್ಷದ ಸಿಂಗನಾಯಕನಹಳ್ಳಿ ಜಿಲ್ಲಾ ಪಂಚಾಯತ್ ಸದಸ್ಯೆಯಾಗಿದ್ದು, ಕಳೆದ ಜಿಲ್ಲಾ ಪಂಚಾಯತ್ ಚುನಾವಣೆಯಲ್ಲಿ ಸ್ಥಳೀಯ ಶಾಸಕರಾದ ಎಸ್ ಆರ್ ವಿಶ್ವನಾಥ್ ಪತ್ನಿ ವಾಣಿ ವಿಶ್ವನಾಥ್ ವಿರುದ್ಧ ಸ್ವರ್ಧಿಸಿ ಗೆಲುವು ಸಾಧಿಸಿದರು. ಇದರಿಂದ ಬಿಜೆಪಿ ಶಾಸಕರಾದ ವಿಶ್ವನಾಥ್ ಅವರಿಗೆ ಲಾವಣ್ಯ ನರಸಿಂಹಮೂರ್ತಿಯವರ ಬಗ್ಗೆ ಅಸಹನೆ ಇದ್ದು. ಪ್ರೋಟೋಕಾಲ್ ಪ್ರಕಾರ ಜಿ. ಪಂ ಸದಸ್ಯೆಯನ್ನ ಕಾರ್ಯಕ್ರಮಕ್ಕೆ ಆಹ್ವಾನಿಸಿ ಕಾರ್ಯಕ್ರಮ ಆಯೋಜಕರ ಮೂಲಕ ಸಚಿವರ ಮುಂದೆಯೇ ಜಿ.ಪಂ ಸದಸ್ಯೆಯ ಹೆಸರು ಹೇಳದೇ ಅವಮಾನಿಸಿದ್ದಾರೆ ಎಂದು ಅಲ್ಲಿನ ಜನ ಮಾತನಾಡಿಕೊಳ್ಳುತ್ತಿದ್ದಾರೆ.