ಬೆಂಗಳೂರು : ರಾಜ್ಯದ ಕಂದಾಯ ಕೋರ್ಟ್ಗಳ ಕಲಾಪಗಳನ್ನು ನಿಗದಿಪಡಿಸಿದ ದಿನದಂದೇ ನಡೆಸಬೇಕು. ಅನಗತ್ಯ ಮುಂದೂಡಬಾರದು ಎಂದು ಆದೇಶಿಸಿರುವ ಹೈಕೋರ್ಟ್, ಈ ಸಂಬಂಧ ಸುತ್ತೋಲೆ ಹೊರಡಿಸುವಂತೆ ಕಂದಾಯ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ ನಿರ್ದೇಶಿಸಿದೆ.
ಕೃಷಿ ಜಮೀನಿನ ಖಾತೆ ಬದಲಾವಣೆಗೆ ಸಂಬಂಧಿಸಿದ ಪ್ರಕರಣವನ್ನು ಕಳೆದ ನಾಲ್ಕು ವರ್ಷಗಳಿಂದ ಮುಂದೂಡಿಕೊಂಡೇ ಬರಲಾಗುತ್ತಿದೆ. ಹೀಗಾಗಿ, ಪ್ರಕರಣವನ್ನು ನಿಗದಿತ ಅವಧಿಯಲ್ಲಿ ಇತ್ಯರ್ಥಪಡಿಸಲು ನಿರ್ದೇಶಿಸಿಬೇಕು ಎಂದು ಕೋರಿ ಚಿಕ್ಕಬಳ್ಳಾಪುರದ ಬಂಡಹಳ್ಳಿ ನಿವಾಸಿ ಸುಬ್ಬಾರೆಡ್ಡಿ ಎಂಬುವರು ಅರ್ಜಿ ಸಲ್ಲಿಸಿದ್ರು. ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾ.ಸೂರಜ್ ಗೋವಿಂದರಾಜ್ ಅವರಿದ್ದ ಪೀಠ ಈ ಸೂಚನೆ ನೀಡಿದೆ.
ಕಂದಾಯ ಕೋರ್ಟ್ಗಳನ್ನು ಅನಗತ್ಯವಾಗಿ ಮುಂದೂಡಬಾರದು. ಯಾವ ದಿನಾಂಕಕ್ಕೆ ಪ್ರಕರಣವನ್ನು ನಿಗದಿಪಡಿಸಲಾಗಿರುತ್ತದೆಯೋ ಅಂದೇ ವಿಚಾರಣೆ ನಡೆಸಬೇಕು. ಪ್ರಕರಣಗಳನ್ನು ಮಧ್ಯಾಹ್ನದ ಬದಲಿಗೆ ಬೆಳಗ್ಗೆ ಸಮಯದಲ್ಲೇ ನಡೆಸಬೇಕು.
ಈ ಸಂಬಂಧ ಕಂದಾಯ ಇಲಾಖೆ ಅರೆ ನ್ಯಾಯಿಕ ಪ್ರಾಧಿಕಾರಗಳಾದ ರಾಜ್ಯದ ಎಲ್ಲ ತಹಶೀಲ್ದಾರ್, ಉಪವಿಭಾಗಾಧಿಕಾರಿ ಹಾಗೂ ಜಿಲ್ಲಾಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಿ ಸುತ್ತೋಲೆ ಹೊರಡಿಸಬೇಕು ಎಂದು ನಿರ್ದೇಶಿಸಿದೆ.