ಬೆಂಗಳೂರು:ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಮೂಲಕ ಗ್ರಾಮೀಣ ಭಾಗಗಳಿಗೆ ನೀರು ಸರಬರಾಜು ಮಾಡಲು, ರಾಜ್ಯದ ವಿವಿಧೆಡೆ ಕೈಗೆತ್ತಿಕೊಂಡಿರುವ ನಳಸಂಪರ್ಕ ಕಾಮಗಾರಿಗಳ ಗುಣಮಟ್ಟದಲ್ಲಿ ಸುಧಾರಣೆ ತರಲು, ಥರ್ಡ್ ಪಾರ್ಟಿ ಏಜೆನ್ಸಿ ಮೂಲಕ ವಿಸ್ತೃತ ತಪಾಸಣೆ ನಡೆಸಲು ಆರಂಭಿಸಲಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.
ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಅಧಿಕಾರಿಗಳು ಹಾಗೂ ತಪಾಸಣೆ ಕಾರ್ಯ ಕೈಗೆತ್ತಿಕೊಂಡಿರುವ ಬ್ಯೂರೋ ವೆರಿಟಾಸ್ ಇಂಡಿಯಾ ಬಾಹ್ಯ ಸಂಸ್ಥೆಯೊಂದಿಗೆ ಸಭೆ ನಡೆಸಿದ ಸಚಿವರು, ಗ್ರಾಮೀಣ ನಳಸಂಪರ್ಕ ಕಾಮಗಾರಿಗಳ ಗುಣಮಟ್ಟದ ಬಗ್ಗೆ ಸಾರ್ವಜನಿಕರಿಂದ ಬಂದ ದೂರುಗಳನ್ನು ಗಮನಿಸಿ ಈ ಕ್ರಮ ಕೈಗೊಳ್ಳಲಾಗಿದೆ ಎಂದರು.
ಸಂಸ್ಥೆ ನಡೆಸುತ್ತಿರುವ ತಪಾಸಣಾ ಕ್ರಮದ ವಿವರಗಳನ್ನು ಸಚಿವ ಖರ್ಗೆ ಪರಿಶೀಲಿಸಿ, ಹಲವಾರು ಸಲಹೆಗಳನ್ನು ನೀಡಿದರು. ರಾಜ್ಯದಲ್ಲಿ ನಡೆಯುತ್ತಿರುವ ಗ್ರಾಮೀಣ ನಳ ಸಂಪರ್ಕ ಕಾಮಗಾರಿಗಳ ಭೌತಿಕ ಆಯಾಮಗಳು, ನೀರಿನ ಗುಣಮಟ್ಟ ಮುಂತಾದ ಪರೀಕ್ಷೆಗಳನ್ನು ಕಾಮಗಾರಿಗಳಿಗೆ ತೊಡಕಾಗದಂತೆ ತಪಾಸಣೆ ಮಾಡಲಾಗುತ್ತಿದೆ. ಭೂಮಿಯಲ್ಲಿ ಹುದುಗಿಸಿರುವ ಕೊಳವೆಗಳ ಗುಣಮಟ್ಟ, ಕೊಳವೆಗಳನ್ನು ಭೂಮಿಯಲ್ಲಿ ಹಾಗೂ ಭೂಮಿಯ ಮೇಲೆ ಹಾಯಿಸುವಾಗ ತೆಗೆದುಕೊಳ್ಳಲಾಗಿರುವ ಸುರಕ್ಷತಾ ಕ್ರಮಗಳು, ಸಂಪರ್ಕಕ್ಕೆ ಅಳವಡಿಸಲಾಗುವ ನಲ್ಲಿ ಹಾಗೂ ಸಾಮಗ್ರಿಗಳ ಗುಣಮಟ್ಟ ಹಾಗೂ ಪೂರೈಸಲಾಗುವ ನೀರಿನ ಗುಣಮಟ್ಟವನ್ನು ತಪಾಸಣೆ ಮಾಡಲಾಗುತ್ತಿದೆ ಎಂದು ಹೇಳಿದರು.