ಬೆಂಗಳೂರು:ಇನ್ಫೋಸಿಸ್ ಫೌಂಡೇಷನ್ ಮುಖ್ಯಸ್ಥೆಸುಧಾಮೂರ್ತಿತಮ್ಮ ಸರಳತೆ ಮತ್ತು ಸಮಾಜ ಸೇವೆಯ ಮೂಲಕ ಹೆಸರುವಾಸಿಯಾದವರು. ಜೊತೆಗೆ ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ಸಾಹಿತ್ಯ ರಚಿಸಿದ ಬರಹಗಾರ್ತಿ ಕೂಡ ಹೌದು. ಇನ್ಫೋಸಿಸ್ ಫೌಂಡೇಷನ್ ಮೂಲಕ ಸುಧಾಮೂರ್ತಿ ತಮ್ಮ ಪಾಡಿಗೆ ಸಮಾಜ ಮುಖಿ ಕೆಲಸಗಳನ್ನ ಮಾಡ್ತಿದ್ದಾರೆ. ಅಂತೆಯೇ ಇತ್ತೀಚೆಗೆ ಕೇಂದ್ರ ಸರ್ಕಾರವು ಸುಧಾಮೂರ್ತಿ ಅವರ ಸಮಾಜ ಸೇವೆ ಗುರುತಿಸಿ, ಪದ್ಮಭೂಷಣ ಪ್ರಶಸ್ತಿ ನೀಡಿ ಗೌರವಿಸಿದೆ.
ಈ ಹಿನ್ನೆಲೆಯಲ್ಲಿ ನಾತಿಚರಾಮಿ, ಪಡ್ಡೆಹುಲಿ, 100 ಹಾಗೂ ಗಾಳಿಪಟ2 ಸಿನಿಮಾಗಳ ನಿರ್ಮಾಪಕ ಎಂ.ರಮೇಶ್ ರೆಡ್ಡಿ ಗೆಳಯರ ಬಳಗ ಸೇರಿಕೊಂಡು ಖಾಸಗಿ ಹೋಟೆಲ್ನಲ್ಲಿ ಸುಧಾಮೂರ್ತಿಯವರಿಗೆ ಸನ್ಮಾನ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಈ ಕಾರ್ಯಕ್ರಮದಲ್ಲಿ ನಿರ್ಮಾಪಕ ರಮೇಶ್ ರೆಡ್ಡಿ ಗೆಳೆಯರು ಸುಧಾಮೂರ್ತಿಯವರಿಗೆ ಮೈಸೂರು ಪೇಟಾ ತೊಡಿಸಿ ಗೋವಿನ ನೆನಪಿನ ಕಾಣಿಕೆ ನೀಡಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಸುಧಾಮೂರ್ತಿಯವರು, ಮೊದಲು ಹೆಣ್ಣು ಮಕ್ಕಳು ಸಾಧನೆ ಮಾಡಬೇಕು. ಯಾಕಂದ್ರೆ ಹೆಣ್ಣು ಮಕ್ಕಳಲ್ಲಿ ಒಂದು ಅಗಾಧವಾದ ಶಕ್ತಿ ಇದೆ. ಅದನ್ನ ಬಳಸಿಕೊಂಡು ನೀವು ದೊಡ್ಡ ಮಟ್ಟದಲ್ಲಿ ಬೆಳಯುವ ಯೋಚನೆ ಮಾಡಬೇಕು. ನಿಮ್ಮನ್ನು ಎಂದಿಗೂ ಇತರರಿಗೆ ಹೋಲಿಸಿಕೊಂಡು ನಿಮ್ಮ ಮನಸ್ಸು ಹಾಳುಮಾಡಿಕೊಳ್ಳಬೇಡಿ ಎಂದರು.
ಹಾಗೆಯೇ ಮೊಬೈಲ್ನಲ್ಲಿ ಕೆಲಸಕ್ಕೆ ಬಾರದ ಮೆಸೇಜ್ ಓದಿ, ನಿಮ್ಮ ಕುಟುಂಬದ ನೆಮ್ಮದಿಯ ಹಾಳು ಮಾಡಿಕೊಳ್ಳಬೇಡಿ. ಇನ್ನು ತಂದೆ, ತಾಯಂದಿರು ದಯವಿಟ್ಟು ಮಕ್ಕಳಿಗೆ ಓದಿ ಅಂತಾ ಒತ್ತಡ ಹಾಕಬೇಡಿ. ಆ ಮಗುವಿಗೆ ಸುಂದರವಾದ ರೂಮ್ ಕಟ್ಟಿಸಿ ಕೊಟ್ಟೆ, ವಿದೇಶಕ್ಕೆ ಕರೆದುಕೊಂಡು ಹೋದೆ, ಅವನು ಹೇಳಿದ ಹಾಗೇ ನಾವು ಮಾಡಿದ್ದೇವೆ ಅಂತಾ ಮಕ್ಕಳ ಮೇಲೆ ಪೋಷಕರು ಒತ್ತಡ ಹೇರಬಾರದು. ಯಾಕಂದ್ರೆ ಇದು ಕಾಂಫಿಟೇಷನ್ ಯುಗ ನಿಮ್ಮ ಮಗ ಸದಾ ಕಾಂಫಿಟೇಟರ್ ಆಗಿ ಇರಬೇಕಾದ ಪರಿಸ್ಥಿತಿ ಇದೆ ಎಂದು ಹೇಳಿದರು.