ಕರ್ನಾಟಕ

karnataka

ETV Bharat / state

ಲೋಕಾಯುಕ್ತಕ್ಕೆ ಅಧಿಕಾರ ಮರಳಿಸುವ ಬಗ್ಗೆ ಸೊಲ್ಲೆತ್ತದ ಸರ್ಕಾರ : ಎಸಿಬಿ ಮುಂದುವರಿಯಲಿದೆ ಎಂದು ಹೈಕೋರ್ಟ್​ಗೆ ಮಾಹಿತಿ

ಲೋಕಾಯುಕ್ತ ಸಂಸ್ಥೆಗಿದ್ದ ತನಿಖಾಧಿಕಾರ ಕಸಿದು ಎಸಿಬಿ ರಚಿಸಿದ್ದ ಹಿಂದಿನ ಕಾಂಗ್ರೆಸ್ ಸರ್ಕಾರದ ಕ್ರಮ ಪ್ರಶ್ನಿಸಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಇಂದು ಹಿರಿಯ ನ್ಯಾಯಮೂರ್ತಿ ಅರವಿಂದ್ ಕುಮಾರ್ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು..

Lokayukta
Lokayukta

By

Published : Jun 28, 2021, 10:40 PM IST

ಬೆಂಗಳೂರು: ಭ್ರಷ್ಟರ ಪಾಲಿಗೆ ಸಿಂಹಸ್ವಪ್ನವಾಗಿದ್ದ ಲೋಕಾಯುಕ್ತಕ್ಕೆ ಮರಳಿ ಅಧಿಕಾರ ನೀಡುವ ಕುರಿತು ಯಾವುದೇ ಚಕಾರ ಎತ್ತದಿರುವ ರಾಜ್ಯ ಸರ್ಕಾರ ಹೈಕೋರ್ಟ್‌ಗೆ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ)ವನ್ನು ಮುಂದುವರೆಸುವುದಾಗಿ ಮಾಹಿತಿ ನೀಡಿದೆ. ಅಧಿಕಾರಕ್ಕೆ ಬಂದ ಕೂಡಲೇ ಭ್ರಷ್ಟರ ವಿರುದ್ಧ ಎಸಿಬಿ ಬಳಿ ಇರುವ ತನಿಖಾ ಅಧಿಕಾರವನ್ನು ಲೋಕಾಯುಕ್ತಕ್ಕೆ ಮರಳಿಸುತ್ತೇವೆ ಎಂದು ಭರವಸೆ ನೀಡಿದ್ದ ಬಿಜೆಪಿ, ಇದೀಗ ಕಾಂಗ್ರೆಸ್ ರಚಿಸಿದ್ದ ಎಸಿಬಿಯನ್ನು ಮುಂದುವರಿಸಲು ನಿರ್ಧರಿಸಿರುವುದಾಗಿ ಹೈಕೋರ್ಟ್ ಎದುರು ಪ್ರಮಾಣ ಪತ್ರ ಸಲ್ಲಿಸಿದೆ.

ಲೋಕಾಯುಕ್ತ ಸಂಸ್ಥೆಗಿದ್ದ ತನಿಖಾಧಿಕಾರ ಕಸಿದು ಎಸಿಬಿ ರಚಿಸಿದ್ದ ಹಿಂದಿನ ಕಾಂಗ್ರೆಸ್ ಸರ್ಕಾರದ ಕ್ರಮ ಪ್ರಶ್ನಿಸಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಇಂದು ಹಿರಿಯ ನ್ಯಾಯಮೂರ್ತಿ ಅರವಿಂದ್ ಕುಮಾರ್ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.

ಈ ವೇಳೆ ಸರ್ಕಾರದ ಪರ ಹಾಜರಿದ್ದ ಅಡ್ವೊಕೇಟ್ ಜನರಲ್ ಪ್ರಭುಲಿಂಗ ನಾವದಗಿ, ಮುಖ್ಯ ಕಾರ್ಯದರ್ಶಿ ಪಿ. ರವಿಕುಮಾರ್ ಅವರ ಪ್ರಮಾಣಪತ್ರ ಸಲ್ಲಿಸಿ, ಮಾಹಿತಿ ನೀಡಿದರು. ಎಸಿಬಿ ರಚನೆ ಮಾಡಿ 2016ರ ಮಾರ್ಚ್‌ 13ರಂದು ಹೊರಡಿಸಿದ್ದ ಆದೇಶದಲ್ಲಿ ಸೆಕ್ಷನ್ 5 ರದ್ದುಪಡಿಸಲಾಗಿದೆ. ಭ್ರಷ್ಟಚಾರಿಗಳ ವಿರುದ್ಧ ದೂರು ದಾಖಲಿಸಲು ಈ ಮೊದಲು ಪೂರ್ವಾನುಮತಿ ಕಡ್ಡಾಯವಿತ್ತು. ಸರ್ಕಾರ ಸೆಕ್ಷನ್ 5 ರದ್ದುಪಡಿಸಿದ್ದು, ಇನ್ನು ಮುಂದೆ ದೂರು ದಾಖಲಿಸಲು ಪೂರ್ವಾನುಮತಿ ಅಗತ್ಯವಿಲ್ಲ. ಹಾಗೆಯೇ, ಎಸಿಬಿ ಮುಖ್ಯಸ್ಥರಾಗುವ ಎಡಿಜಿಪಿಗೆ 2 ವರ್ಷ ಅಧಿಕಾರಾವಧಿ ನಿಗದಿಪಡಿಸಲಾಗಿದೆ ಎಂದು ವಿವರಿಸಿದರು.

ಸರ್ಕಾರದ ಈ ಪ್ರಮಾಣಪತ್ರಕ್ಕೆ ಲೋಕಾಯುಕ್ತರ ಪರ ಹಾಗೂ ಅರ್ಜಿದಾರರ ಪರ ವಕೀಲರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಪೂರ್ವಾನುಮತಿ ನಿಯಮ ತೆಗೆದು ಹಾಕುವುದರಿಂದ ಯಾವುದೇ ಪ್ರಯೋಜನವಿಲ್ಲ. ಎಸಿಬಿಗೆ ಯಾವುದೇ ಕಾಯ್ದೆಯ ಬೆಂಬಲವಿಲ್ಲ. ಸರ್ಕಾರ ಕೇವಲ ತನ್ನ ಆದೇಶದ ಮೂಲಕ ಎಸಿಬಿ ರಚನೆ ಮಾಡಿದೆ. ಯಾವುದೇ ಶಾಸನಾತ್ಮಕ ಬೆಂಬಲವಿಲ್ಲದ ಸಂಸ್ಥೆಗೆ ಕಾನೂನಿನಡಿ ಮಾನ್ಯತೆ ಇಲ್ಲ ಎಂದು ವಾದಿಸಿದರು.

ಅಲ್ಲದೆ, ಭ್ರಷ್ಟಾಚಾರಿಗಳ ವಿರುದ್ಧದ ತನಿಖೆಗೆ ಪ್ರಸ್ತುತ ರಾಜ್ಯದಲ್ಲಿ ಯಾವುದೇ ಸ್ವತಂತ್ರ ತನಿಖಾ ಸಂಸ್ಥೆಯಿಲ್ಲ. ಈಗಲೂ ಎಸಿಬಿ ಮುಖ್ಯಮಂತ್ರಿಯ ಅಧೀನದಲ್ಲೇ ಮುಂದುವರಿದಿದೆ. ಭ್ರಷ್ಟಾಚಾರ ತಡೆ ಕಾಯ್ದೆ ಅಡಿ ತನಿಖೆಗೆ ಲೋಕಾಯುಕ್ತ ಸಂಸ್ಥೆಗೆ ತನಿಖಾಧಿಕಾರ ನೀಡಿಲ್ಲ ಎಂದು ಪೀಠಕ್ಕೆ ವಿವರಿಸಿದರು. ವಾದ-ಪ್ರತಿವಾದ ಆಲಿಸಿದ ಪೀಠ ವಿಚಾರಣೆಯನ್ನು ಜುಲೈ 9ಕ್ಕೆ ಮುಂದೂಡಿತು.

ABOUT THE AUTHOR

...view details