ಬೆಂಗಳೂರು:ಕೋವಿಡ್-19 ಸೋಂಕಿನ ವಿಷಮ ಪರಿಸ್ಥಿತಿಯಲ್ಲೂ ಹಲವು ಪೂರ್ವಸಿದ್ಧತೆಯೊಂದಿಗೆ ನಗರದ 2020-21 ನೇ ಸಾಲಿನ ಬಿಬಿಎಂಪಿ ಬಜೆಟ್ ಇಂದು ಮಂಡನೆಯಾಗಲಿದೆ.
ಈಗಾಗಲೇ ಬಜೆಟ್ ಮಂಡನೆ ವಿಳಂಬವಾಗಿದ್ದು, ಪಾಲಿಕೆಯ ಆಡಳಿತಕ್ಕೆ ಹಣಕಾಸಿನ ಅಡಚಣೆಯಾಗಬಾರದೆಂದು, ತುರ್ತಾಗಿ ಬಜೆಟ್ ಮಂಡಿಸಲು ಬಿಬಿಎಂಪಿ ತಯಾರಾಗಿದೆ. ಇಂದು ಮಧ್ಯಾಹ್ನ ಹನ್ನೆರಡು ಗಂಟೆಗೆ ಬಿಬಿಎಂಪಿ ಪೌರಸಭಾಂಗಣದಲ್ಲಿ ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಅಧ್ಯಕ್ಷ ಎಲ್ ಶ್ರೀನಿವಾಸ್ ಬಜೆಟ್ ಮಂಡಿಸಲಿದ್ದಾರೆ.
ಇಲ್ಲಿ ಮೇಯರ್, ಉಪಮೇಯರ್, ಆಯುಕ್ತರು ಹಾಗೂ ಪಕ್ಷದ ಮುಖಂಡರು ಸೇರಿದಂತೆ ಸಾಮಾಜಿಕ ಅಂತರ ಕಾಯ್ದುಕೊಂಡು ಬಜೆಟ್ ಮಂಡನೆ ಮಾಡಲಿದ್ದಾರೆ. ಬಜೆಟ್ ಮಂಡನೆಗೂ ಮುನ್ನ ಎಲ್ಲರಿಗೂ ಆರೋಗ್ಯ ತಪಾಸಣೆ ನಡೆಸಿಯೇ ಬಿಬಿಎಂಪಿ ಪೌರಸಭಾಂಗಣದೊಳಗೆ ಅವಕಾಶಕೊಡಲಿದ್ದಾರೆ. ಉಳಿದಂತೆ ಪಾಲಿಕೆ ಸದಸ್ಯರು ಆಯಾ ವಲಯ ಕಚೇರಿಗಳಲ್ಲಿ ಬಜೆಟ್ ಮಂಡನೆ ವೀಡಿಯೋ ಕಾನ್ಫರೆನ್ಸ್ ಮೂಲಕ ನೋಡಲಿದ್ದಾರೆ.
ಇದೇ ಬುಧವಾರದಂದು ಬಜೆಟ್ ಮೇಲಿನ ಚರ್ಚೆ ನಡೆಯಲಿದೆ. ಸಾರ್ವಜನಿಕರೂ ಕೂಡಾ ಪಾಲಿಕೆಯ ಅಧಿಕೃತ ವೆಬ್ ಸೈಟ್ ನಲ್ಲಿ http://bbmp.gov.in ನ ಮೂಲಕ ಬಜೆಟ್ ನೋಡಬಹುದು. ಅಲ್ಲದೆ ಬಜೆಟ್ ವೀಡಿಯೋ ಕಾನ್ಫರೆನ್ಸ್ ನಡೆಸಲು http://www.facebook.com/BBMP.Mayor ಸಂಪರ್ಕವನ್ನು ಬಳಸಿಕೊಳ್ಳಲಾಗ್ತಿದೆ ಎಂದು ಕೌನ್ಸಿಲ್ ಕಾರ್ಯದರ್ಶಿ ಜಿ.ಹೇಮಂತ್ ಶರಣ್ ತಿಳಿಸಿದ್ದಾರೆ.
ಬಜೆಟ್ ನಿರೀಕ್ಷೆಗಳು
ಹೆಚ್ಚಾಗಿ ಕೋವಿಡ್-19 ಪರಿಹಾರ ಕ್ರಮಕ್ಕೆ ಹಣ ಮೀಸಲಿಡುವ ಅಗತ್ಯವಿದ್ದು ಪ್ರತೀ ವಾರ್ಡ್ ಗೆ ಇಪ್ಪತ್ತೈದು ಲಕ್ಷದಂತೆ 49.5 ಕೋಟಿ ರೂ. ಮೀಸಲಿಡಲಿದ್ದಾರೆ.
ನಗರದ ಕೆಲ ಪ್ರಮುಖ ಜಂಕ್ಷನ್ ಗಳು, ರಿಂಗ್ ರಸ್ತೆಯ ಅಭಿವೃದ್ಧಿಗೆ ಅನುದಾನ, ಪಾಲಿಕೆ ಶಾಲೆಗಳ ಅಭಿವೃದ್ಧಿ ಗೆ ಒತ್ತು ಸಿಗಲಿದೆ. ಅಲ್ಲದೆ ಬಿಡಾಡಿ ದನಗಳಿಗೆ ಸೂಕ್ತ ವ್ಯವಸ್ಥೆ, ಪೌರಕಾರ್ಮಿಕರಿಗೆ ಹೊಸ ಯೋಜನೆ ಘೋಷಣೆಯಾಗುವ ಸಾಧ್ಯತೆ ಇದೆ. ಕಲ್ಯಾಣ ಯೋಜನೆಯಡಿ ಬಡವರಿಗೆ, ವಿದ್ಯಾರ್ಥಿಗಳಿಗೆ ಹೊಸ ಯೋಜನೆ ಘೋಷಣೆ ಸಾಧ್ಯತೆ.