ಬೆಂಗಳೂರು: ಕೇಂದ್ರ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ರಾಷ್ಟ್ರೀಯ ಕುಟುಂಬ ಸ್ವಾಸ್ಥ್ಯ ಸರ್ವೇ 2019-20 ರ ವರದಿ ಬಿಡುಗಡೆಯಾಗಿದೆ. ಐದು ವರ್ಷಗಳ ಬಳಿಕ ಜನರಲ್ಲಿ ಆದ ಆರೋಗ್ಯ ಅಭಿವೃದ್ಧಿ ಅಥವಾ ಬದಲಾವಣೆ ಕುರಿತು ಈ ಸಮೀಕ್ಷೆ ಬೆಳಕು ಚೆಲ್ಲಿದೆ.
ತಾಯಿ ಎದೆಹಾಲಿನ ಕೊರತೆಯಿಂದ ಮಕ್ಕಳಲ್ಲಿ ಅಪೌಷ್ಟಿಕತೆ - ರಾಜ್ಯದ ಪುರುಷರು - ಮಹಿಳೆಯರಲ್ಲಿ ಬೊಜ್ಜಿನ ಪ್ರಮಾಣ ಏರಿಕೆ ವರದಿಯ ಪ್ರಕಾರ, ಮಕ್ಕಳಲ್ಲಿ ಅಪೌಷ್ಟಿಕತೆಗೆ ಹುಟ್ಟಿದ ಮೊದಲ ಒಂದು ಗಂಟೆಯಲ್ಲಿ ತಾಯಿಯ ಎದೆಹಾಲು ನೀಡುವಿಕೆಯ ಪ್ರಮಾಣದಲ್ಲಿ ಇಳಿಕೆಯಾಗಿರುವುದು ಕಾರಣವಾಗಿದೆ.
ಮಕ್ಕಳಿಗೆ ಎದೆಹಾಲು ಲಭ್ಯತೆ ಹಾಗೂ ಪೌಷ್ಟಿಕಾಂಶದ ಮಟ್ಟ 2019-20 ಹಾಗೂ 2015-16
ಜನನದ ಒಂದು ಗಂಟೆಯೊಳಗೆ ಎದೆಹಾಲು ಸೇವನೆ- ಶೇ 49.1 - 56.3
6 ತಿಂಗಳವರೆಗೆ ಎದೆಹಾಲು ಸೇವಿಸುತ್ತಿರುವ ಮಕ್ಕಳ ಪ್ರಮಾಣ- ಶೇ 61. - 54.3
6-23 ತಿಂಗಳವರೆಗೆ ಎದೆಹಾಲು ಸೇವನೆಯ ಮಕ್ಕಳ ಪ್ರಮಾಣ- ಶೇ11 - 5.8
ನವಜಾತ ಶಿಶುಗಳಿಗೆ ತಾಯಿಯ ಎದೆಹಾಲು ಅತ್ಯಗತ್ಯ. ಪೌಷ್ಟಿಕಾಂಶ ಹಾಗೂ ಹಲವಾರು ಖಾಯಿಲೆಗಳ ವಿರುದ್ಧ ಹೋರಾಡುವ ಶಕ್ತಿ ತಾಯಿ ಹಾಲಿನಲ್ಲಿದೆ. ಹೀಗಾಗಿ ಎದೆಹಾಲು ಸೇವನೆ ಪ್ರಮಾಣದಲ್ಲಿ ಹೆಚ್ಚಳವಾಗಬೇಕಿದೆ. ಆರೋಗ್ಯ ಇಲಾಖೆ ಪೋಷಕರಿಗೆ ಈ ಕುರಿತು ಅರಿವು ಮೂಡಿಸಬೇಕಿದೆ.
ಮಕ್ಕಳು ಹಾಗೂ ಹಿರಿಯರಲ್ಲಿ ನಿಶ್ಶಕ್ತಿ
ಆರು ವರ್ಷದೊಳಗಿನ ಮಕ್ಕಳಲ್ಲಿ ನಿಶ್ಶಕ್ತಿ- 65.5. - 60.9
ಗರ್ಭಿಣಿಯರಲ್ಲಿ ನಿಶ್ಶಕ್ತಿ- ಶೇ 45.7 - 45.4
ಮಹಿಳೆಯರಲ್ಲಿ ನಿಶ್ಶಕ್ತಿ 47.8 - 44.8
ಪುರಷರಲ್ಲಿ ನಿಶ್ಶಕ್ತಿ- 19.6 - 18.3
ಉತ್ತಮ ಆಹಾರ ಪದ್ಧತಿ ಹಾಗೂ ಪೌಷ್ಠಿಕಾಂಶದ ಕೊರತೆಯಿಂದ ಜನರಿಗೆ ನಿಶ್ಶಕ್ತಿ ಕಾಡುವುದು ದೊಡ್ಡ ಸಮಸ್ಯೆಯಾಗಿದೆ. ಇದಲ್ಲದೇ ನಗರ ಪ್ರದೇಶಗಳಲ್ಲಿ ಬದಲಾದ ಜೀವನ ಶೈಲಿ, ಒತ್ತಡದಿಂದ ಮತ್ತಷ್ಟು ನಿಶ್ಶಕ್ತಿಯನ್ನು ಹೆಚ್ಚಿಸಿದೆ. 6 ವರ್ಷಕ್ಕಿಂತ ಕೆಳಗಿನ ಹಳ್ಳಿಯ ಮಕ್ಕಳಲ್ಲಿ ಶೇ 67.1 ನಿಶ್ಶಕ್ತಿ ಕಂಡುಬಂದಿದೆ.
ವಯಸ್ಕರಲ್ಲಿ ಸಕ್ಕರೆ ಖಾಯಿಲೆ ಹಾಗೂ ರಕ್ತದೊತ್ತಡ (15 ವರ್ಷ ಮೇಲ್ಪಟ್ಟು)
ಮಹಿಳೆಯರಲ್ಲಿ ಸಕ್ಕರೆ ಖಾಯಿಲೆ, ರಕ್ತದೊತ್ತಡ ಚಿಕಿತ್ಸೆ ಪಡೆಯುತ್ತಿರುವವರು - ಶೇ14.0 (ಸ.ಖಾ). -ಶೇ 25 (ಬಿ.ಪಿ)
ಪುರುಷರಲ್ಲಿ ಸಕ್ಕರೆ ಖಾಯಿಲೆ, ರಕ್ತದೊತ್ತಡ ಚಿಕಿತ್ಸೆ ಪಡೆಯುತ್ತಿರುವವರು - ಶೇ15.6 (ಸ.ಖಾ). -ಶೇ 26.9. (ಬಿ.ಪಿ)
ಪ್ರತೀ ಐದು ವರ್ಷಕ್ಕೊಮ್ಮೆ ನಡೆಯುವ ಈ ಸರ್ವೇಯಲ್ಲಿ ಮನೆಮನೆಗೆ ಹೋಗಿ ಅಪೌಷ್ಟಿಕತೆ, ನಿಶ್ಶಕ್ತಿ , ಗರ್ಭಿಣಿಯರ ಆರೋಗ್ಯಕ್ಕೆ ಸಂಬಂಧಿಸಿದ ಹಾಗೂ ಬೇರೆ ಬೇರೆ ರೀತಿಯ ಸಾಮಾಜಿಕ ಸಮಸ್ಯೆಗಳ ಕುರಿತು ಈ ಸರ್ವೇ ಮಾಡಲಾಗುತ್ತಿದೆ. ಇದರ ಅಂಕಿ ಅಂಶಗಳ ಪ್ರಕಾರ ಮುಂದಿನ ಐದು ವರ್ಷಕ್ಕೆ ಬೇಕಾದ ಸರ್ಕಾರದ ಯೋಜನೆಗಳನ್ನು ನಿರ್ಧರಿಸಲು ಈ ವರದಿ ಪ್ರಮುಖವಾಗಿದೆ. ಇದು ಐದನೇ ರಿಪೋರ್ಟ್ ಆಗಿದೆ ಎಂದು ಆಹಾರ ತಜ್ಞ ಕೆ.ಸಿ ರಘು ತಿಳಿಸಿದರು.
ಅಪೌಷ್ಠಿಕತೆ ಹೆಚ್ಚಳ :
ಕರ್ನಾಟಕದ ಮಟ್ಟಿಗೆ ಮಕ್ಕಳ ಅಪೌಷ್ಟಿಕತೆಯನ್ನು ಮೂರು ವಿಧದಲ್ಲಿ ಅಳೆಯಲಾಗುತ್ತಿದ್ದು, ವಯಸ್ಸಿಗೆ ತಕ್ಕ ಎತ್ತರ, ತೂಕ, ಹಾಗೂ ತೂಕ ಕಡಿಮೆ ಇಲ್ಲದೇ ಇರುವ ಬಗ್ಗೆ ಸರ್ವೇ ಮಾಡಲಾಗಿದೆ.
ಕಳೆದ ಸರ್ವೇಗೆ ಹೋಲಿಸಿದರೆ ಶೇ 36.2 ವಯಸ್ಸಿಗೆ ತಕ್ಕ ಎತ್ತರ ಇಲ್ಲದೇ ಇದ್ದವರ ಪ್ರಮಾಣ ಈಗ ಶೇ 35.4 ಆಗಿದೆ. ಇದರಲ್ಲಿ ಅಪೌಷ್ಟಿಕತೆಯಲ್ಲಿ ಅಂತಹಾ ವ್ಯತ್ಯಾಸ ಕಂಡುಬಂದಿಲ್ಲ. ಆದರೆ ಶೇ 26 ನಿಂದ 19.5 ಗೆ ವಯಸ್ಸಿಗೆ ತಕ್ಕ ಎತ್ತರ ಇದ್ದು ತೂಕ ಇಲ್ಲದವರ ಪ್ರಮಾಣದಲ್ಲಿ ಚೇತರಿಕೆ ಕಂಡಿದೆ. ಇನ್ನು ವಯಸ್ಸಿಗೆ ತಕ್ಕಂತೆ ತೂಕ ಇಲ್ಲದವರ ಪ್ರಮಾಣ 35.2 ರಿಂದ 32.9 ಕ್ಕೆ ಇಳಿಮುಖವಾಗಿದೆ.
ಬೊಜ್ಜಿನ ರೋಗ ಹೆಚ್ಚಳ:
ಮಹಿಳೆಯರಲ್ಲಿ ಬೊಜ್ಜಿನ ರೋಗ ಪ್ರಮಾಣದಲ್ಲಿ ಏರಿಕೆಯಾಗಿದ್ದು, ಶೇ 23.3 ರಿಂದ 30.1ಕ್ಕೆ ಏರಿಕೆಯಾಗಿದೆ. ಐದು ವರ್ಷದಲ್ಲಿ ಶೇ 8ರಷ್ಟು ಏರಿಕೆಯಾಗಿರುವುದು ಅಪಾಯಕಾರಿ. ಹೀಗಾಗಿ ಜನರು ಆಹಾರದ ಅಭ್ಯಾಸದ ಬಗ್ಗೆ ಗಮನಕೊಡಬೇಕಾಗಿದೆ ಎಂದರು. ಇನ್ನು ಪುರುಷರಲ್ಲಿಯೂ 22.1 ರಿಂದ 30.9ಕ್ಕೆ ಬೊಜ್ಜಿನ ಪ್ರಮಾಣ ಹೆಚ್ಚಳವಾಗಿದೆ.
ರಕ್ತ ಹೀನತೆ ಪ್ರಮಾಣ ಏರಿಕೆ:
ಇನ್ನು 6-69 ತಿಂಗಳ ಮಕ್ಕಳಲ್ಲಿ ರಕ್ತಹೀನತೆ ಪ್ರಮಾಣ ಶೇ 60.9 ರಿಂದ 65.5ಕ್ಕೆ ಏರಿಕೆಯಾಗಿದೆ. ಸರ್ಕಾರದ ಯೋಜನೆಗಳ ಹೊರತಾಗಿಯೂ ರಕ್ತಹೀನತೆ ಏರಿಕೆಯಾಗಿರುವುದು ಒಳ್ಳೆಯ ಸೂಚಕ ಅಲ್ಲ ಎಂದರು. - ಮಹಿಳೆಯರಲ್ಲಿಯೂ ರಕ್ತಹೀನತೆ 44.8 ರಿಂದ 47.8 ಕ್ಕೆ ಏರಿಕೆಯಾಗಿದೆ. - ಪುರುಷರಲ್ಲಿಯೂ 45.4 ರಿಂದ 45.7 ಕ್ಕೆ ರಕ್ತಹೀನತೆ ಸಮಸ್ಯೆ ಏರಿಕೆಯಾಗಿದೆ.
ಇನ್ನು ರಕ್ತಹೀನತೆ, ಅಪೌಷ್ಠಿಕತೆಗೆ ಪ್ರಮುಖ ಕಾರಣ ತಾಯಂದಿರು ಮಗು ಹಡೆದ ಒಂದು ಗಂಟೆಯೊಳಗೆ ಶೇ 56ರಷ್ಟು ಹಾಲು ಕೊಡುತ್ತಿದ್ದುದು, ಈಗ ಶೇ 49ಕ್ಕೆ ಇಳಿಕೆಯಾಗಿದೆ. ಮಕ್ಕಳಿಗೆ ತಾಯಿಯ ಎದೆಹಾಲು ಕೊಡುತ್ತಿರುವವರ ಪ್ರಮಾಣದಲ್ಲಿ ಇಳಿಕೆಯಾಗಿರುವುದಕ್ಕೆ, ಸಿಸೇರಿಯನ್ ಪ್ರಮಾಣ ಹೆಚ್ಚಳವಾಗಿರುವುದು ಕಾರಣ ಎಂದು ಆಹಾರ ತಜ್ಞರಾದ ಕೆ.ಸಿ.ರಘು ಹೇಳಿದರು.