ಬೆಂಗಳೂರು: ಕೊರೊನಾ ಸೋಂಕಿತ ಪ್ರಕರಣಗಳು ಹೆಚ್ಚುತ್ತಿದ್ದಂತೆ ಸಾವಿಗೀಡಾಗುವವರ ಸಂಖ್ಯೆಯೂ ನಿಧಾನಕ್ಕೆ ಏರುತ್ತಿದೆ. ಈ ಆತಂಕ ಒಂದೆಡೆ ಇದ್ದರೆ, ಇನ್ನೊಂದೆಡೆ ಸಾವಿಗೀಡಾದ ಸೋಂಕಿತರ ಅಂತ್ಯಸಂಸ್ಕಾರದ ವೇಳೆ ಆರೋಗ್ಯ ಸಿಬ್ಬಂದಿಯ ಬೇಜವಾಬ್ದಾರಿತನವೂ ಎದ್ದು ಕಾಣುತ್ತಿದೆ. ಇದಕ್ಕೆ ಇವತ್ತು ಜೆ.ಸಿ ನಗರದಲ್ಲಿ ನಡೆದ ಘಟನೆ ಸಾಕ್ಷಿಯಾಗಿದೆ.
ಸೋಂಕಿತನ ಅಂತ್ಯಕ್ರಿಯೆ ಬಳಿಕ ಆರೋಗ್ಯ ಸಿಬ್ಬಂದಿ ಬೇಜವಾಬ್ದಾರಿ: ಪಿಪಿಇ ಕಿಟ್ ಸುಟ್ಟು ಹಾಕಿದ ಪೊಲೀಸರು
ಸೋಂಕಿತರ ಅಂತ್ಯಸಂಸ್ಕಾರವನ್ನು ಗೌರವ ಮತ್ತು ಸುರಕ್ಷತಾ ಕ್ರಮಗಳನ್ನು ಅನುಸರಿಸಿ ಮಾಡಬೇಕಿದೆ. ಆದರೆ, ಅಂತ್ಯಕ್ರಿಯೆ ವೇಳೆ ಆರೋಗ್ಯ ಸಿಬ್ಬಂದಿ ಸರ್ಕಾರ ವಿಧಿಸಿದ ಮಾರ್ಗಸೂಚಿಗಳನ್ನು ಪಾಲನೆ ಮಾಡುತ್ತಿದ್ದಾರೆಯೇ? ಎಂಬ ಪ್ರಶ್ನೆ ಉದ್ಭವಿಸಿದೆ. ಏಕೆಂದರೆ, ಜೆ.ಸಿ.ನಗರದಲ್ಲಿ ನಡೆದ ಘಟನೆಯಲ್ಲಿ ಆರೋಗ್ಯ ಸಿಬ್ಬಂದಿ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ.
ಜೆ.ಸಿ.ನಗರದಲ್ಲಿ ಶವ ಸಂಸ್ಕಾರಕ್ಕೆ ಮೀಸಲಿಟ್ಟಿದ್ದ ಪ್ರದೇಶಕ್ಕೆ ಆರೋಗ್ಯ ಸಿಬ್ಬಂದಿ ಸೋಂಕಿತ ವ್ಯಕ್ತಿಯ ಮೃತದೇಹ ತಂದಿದ್ದಾರೆ. ಅಂತ್ಯ ಸಂಸ್ಕಾರ ಮುಗಿದ ಬಳಿಕ ಪಿಪಿಇ ಕಿಟ್‌ಗಳನ್ನು ಮರದ ಬುಡದಲ್ಲಿಯೇ ಬಿಟ್ಟುಹೋಗಿದ್ದರು. ಈ ಸುರಕ್ಷಾ ಕಿಟ್‌ಗಳು ಗಾಳಿಗೆ ಹಾರುತ್ತಿದ್ದವು. ಇದು ಸುತ್ತಮುತ್ತಲ ಜನರಲ್ಲಿ ಸಹಜವಾಗಿಯೇ ಆತಂಕ ಸೃಷ್ಟಿಸಿತ್ತು. ತಕ್ಷಣ ಈ ಬಗ್ಗೆ ಅವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲನೆ ನಡೆಸಿ ಸ್ಥಳೀಯ ಕಾರ್ಪೊರೇಟರ್‌ಗೆ ವಿಚಾರ ಮುಟ್ಟಿಸಿದ್ದರು. ಆದರೂ ಪ್ರಯೋಜನವಾಗಲಿಲ್ಲ. ಬಳಿಕ ಪೊಲೀಸರೇ ಪಿಪಿಇ ಕಿಟ್ ಸುಟ್ಟು ಹಾಕಿದ್ದಾರೆ.