ಬೆಂಗಳೂರು:ಮಾಜಿ ಸಿಎಂ ಹಾಗೂ ಬಿಜೆಪಿ ಹಿರಿಯ ನಾಯಕ ಜಗದೀಶ್ ಶೆಟ್ಟರ್ ಕಾಂಗ್ರೆಸ್ನತ್ತ ಮುಖ ಮಾಡಿದ್ದಾರೆ ಎಂಬ ಮಾಹಿತಿ ಕೇಳಿ ಬರುತ್ತಲೇ ಇದೆ. ಆದ್ರೆ ನಾನಿನ್ನೂ ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿಲ್ಲವೆಂದು ಶೆಟ್ಟರ್ ಹೇಳಿದ್ದಾರೆ. ಇಂದು ಬೆಳಗ್ಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಕರೆದಿರುವ ಮಾಧ್ಯಮಗೋಷ್ಟಿ ಮಹತ್ವ ಪಡೆದುಕೊಂಡಿದೆ. ಹೀಗಾಗಿ ಮಾಜಿ ಸಿಎಂ ಜಗದೀಶ್ ಶೆಟ್ಟರ್ ನಡೆ ಇನ್ನೂ ನಿಗೂಢವಾಗಿದೆ.
ಬಿಜೆಪಿಯಲ್ಲಿ ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಕ್ಷೇತ್ರದಿಂದ ಟಿಕೆಟ್ ಸಿಗುವುದಿಲ್ಲ ಎನ್ನುವುದು ದೃಢವಾಗುತ್ತಿದ್ದಂತೆ ಮುನಿಸಿಕೊಂಡಿರುವ ಜಗದೀಶ್ ಶೆಟ್ಟರ್ ಅವರ ಮನವೊಲಿಸುವ ಯತ್ನವನ್ನು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ರಾಜ್ಯ ಚುನಾವಣಾ ಉಸ್ತುವಾರಿ ಧರ್ಮೇಂದ್ರ ಪ್ರಧಾನ್ ಹಾಗೂ ಸಿಎಂ ಬಸವರಾಜ ಬೊಮ್ಮಾಯಿ ಮಾಡಿದ್ದರು. ಸಾಕಷ್ಟು ಆಫರ್ಗಳನ್ನು ಅವರ ಮುಂದಿಟ್ಟಿದ್ದರು. ಕೇಂದ್ರ ಸಚಿವ ಸ್ಥಾನ, ರಾಜ್ಯಪಾಲ ಹುದ್ದೆ ನೀಡುವ ಭರವಸೆ ಸಹ ಕೊಟ್ಟಿದ್ದರು. ಆದರೆ ಯಾವುದಕ್ಕೂ ಬಗ್ಗದ ಶೆಟ್ಟರ್ ವಿಧಾನಸಭೆ ಸ್ಪರ್ಧೆಗೆ ಅವಕಾಶ ನೀಡಿ, ಇಲ್ಲವಾದರೆ ಪಕ್ಷ ಬಿಡುತ್ತೇನೆ ಎಂದು ಸ್ಪಷ್ಟಪಡಿಸಿದ್ದರು. ಅಂತಿಮವಾಗಿ ರಾಷ್ಟ್ರೀಯ ಹಾಗೂ ರಾಜ್ಯ ಬಿಜೆಪಿ ನಾಯಕರು ಶೆಟ್ಟರ್ ಮನವೊಲಿಸುವಲ್ಲಿ ವಿಫಲವಾಗಿದ್ದಾರೆ. ಅವರು ಭಾನುವಾರದಂದು ಶಿರಸಿಗೆ ತೆರಳಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ರಾಜೀನಾಮೆ ಸಲ್ಲಿಸಿದ್ದರು.
ನಾನಿನ್ನೂ ಬಿಜೆಪಿಗೆ ರಾಜೀನಾಮೆ ನೀಡಿಲ್ಲ:ನಾನಿನ್ನೂ ಬಿಜೆಪಿಗೆ ರಾಜೀನಾಮೆ ನೀಡಿಲ್ಲ. ವಿಧಾನಸಭಾ ಸ್ಥಾನದ ಟಿಕೆಟ್‌ಗಾಗಿ ಇಷ್ಟೆಲ್ಲ ನಡೆಯಿತು ಎಂದು ನೋವಿನಿಂದ ಶಾಸಕ ಸ್ಥಾನಕ್ಕೆ ಮಾತ್ರ ರಾಜೀನಾಮೆ ನೀಡಿದ್ದೇನೆ. ಬಿಜೆಪಿಗೆ ರಾಜೀನಾಮೆ ಸೇರಿದಂತೆ ಇನ್ನೆರಡು ದಿನದಲ್ಲಿ ಮುಂದಿನ ರಾಜಕೀಯ ನಡೆ ಕುರಿತು ನಿರ್ಧಾರ ಕೈಗೊಳ್ಳುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಬೆಂಗಳೂರಿನಲ್ಲಿ ಹಿರಿಯ ಕಾಂಗ್ರೆಸ್ ಶಾಸಕ ಶಾಮನೂರು ಶಿವಶಂಕರಪ್ಪ ಅವರ ಭೇಟಿಗೆ ಮುನ್ನ ಶೆಟ್ಟರ್ ಸ್ಪಷ್ಟಪಡಿಸಿದ್ದರು.
ಶೆಟ್ಟರ್ನ್ನು ಭೇಟಿ ಮಾಡಿದ ಕಾಂಗ್ರೆಸ್ ನಾಯಕರು: ಕರ್ನಾಟಕ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ, ಕರ್ನಾಟಕ ರಾಜ್ಯ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮತ್ತು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರನ್ನು ಬೆಂಗಳೂರಿನಲ್ಲಿ ಭೇಟಿಯಾದರು.