ಬೆಂಗಳೂರು:ಇಂದು ರಾಜ್ಯದ ಜನರ ಬಹುನಿರೀಕ್ಷಿತ ಪಂಚ ಗ್ಯಾರಂಟಿಗಳ ಭವಿಷ್ಯ ನಿರ್ಧಾರವಾಗಲಿದೆ. ಮಹತ್ವದ ಸಚಿವ ಸಂಪುಟ ಸಭೆ ನಡೆಯಲಿದ್ದು, ಗ್ಯಾರಂಟಿ ಜಾರಿ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳಲಾಗುತ್ತದೆ. ಹಾಗಾಗಿ ರಾಜ್ಯದ ಜನರು ಕಾತರದಿಂದ ಸಂಪುಟ ಸಭೆಯನ್ನು ಎದುರು ನೋಡುತ್ತಿದ್ದಾರೆ.
ಕುಟುಂಬದ ಮಹಿಳೆಗೆ ಪ್ರತಿ ತಿಂಗಳು ₹ 2,000 ನೀಡುವ ಗೃಹಲಕ್ಷ್ಮಿ ಯೋಜನೆ, ಪ್ರತಿ ತಿಂಗಳು ಗೃಹ ಬಳಕೆಯ 200 ಯುನಿಟ್ವರೆಗೆ ಉಚಿತ ವಿದ್ಯುತ್ ನೀಡುವ ಗೃಹಜ್ಯೋತಿ ಯೋಜನೆ, ಪದವಿಧರರಿಗೆ ₹3,000 ಹಾಗೂ ಡಿಪ್ಲೋಮಾ ಪದವೀಧರರಿಗೆ ₹1,500 ನೀಡುವ ಯುವನಿಧಿ ಯೋಜನೆ, ರಾಜ್ಯದ ಮಹಿಳೆಯರಿಗೆ ಉಚಿತ ಸರ್ಕಾರಿ ಬಸ್ ಪ್ರಯಾಣದ ಶಕ್ತಿ ಯೋಜನೆ ಹಾಗೂ ಬಿಪಿಎಲ್ ಕಾರ್ಡುದಾರರಿಗೆ 10 ಕೆಜಿ ಅನ್ನಭಾಗ್ಯ ಯೋಜನೆ ಜಾರಿ ಸಂಬಂಧ ಈಗಾಗಲೇ ಮೊದಲ ಸಂಪುಟ ಸಭೆಯಲ್ಲಿ ತಾತ್ವಿಕ ಒಪ್ಪಿಗೆ ನೀಡಿ ಆದೇಶಿಸಲಾಗಿದೆ. ಸಂಪುಟ ಸಭೆಯಲ್ಲಿ ಗ್ಯಾರಂಟಿಗಳ ಜಾರಿ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳಲಾಗುತ್ತದೆ.
ಸಂಪುಟ ಸಭೆಯಲ್ಲಿ ಸಿದ್ದರಾಮಯ್ಯ ಸರ್ಕಾರ ಐದೂ ಗ್ಯಾರಂಟಿಗಳನ್ನು ಜಾರಿ ಮಾಡುತ್ತೋ ಅಥವಾ ಕೆಲ ಗ್ಯಾರಂಟಿಗಳನ್ನು ಮಾತ್ರ ಜಾರಿಗೊಳಿಸಿ ತೀರ್ಮಾನಿಸಿ, ಉಳಿದ ಕೆಲ ಗ್ಯಾರಂಟಿಗಳನ್ನು ಹಂತ ಹಂತವಾಗಿ ಅನುಷ್ಠಾನಗೊಳಿಸಲು ತೀರ್ಮಾನಿಸುತ್ತಾ ಎಂಬ ಕುತೂಹಲವೂ ಇದೆ. ಪಂಚ ಗ್ಯಾರಂಟಿಗಳಿಗೆ ಷರತ್ತು ಅನ್ವಯಿಸಿ ಜಾರಿಗೊಳಿಸಲಾಗುತ್ತಾ ಎಂಬ ಹಲವು ಗೊಂದಲಗಳಿಗೆ ಸಂಪುಟ ಸಭೆಯಲ್ಲಿ ತೆರೆ ಬೀಳಲಿದೆ. ಬೆಳಗ್ಗೆ 11 ಗಂಟೆಗೆ ವಿಧಾನಸೌಧದಲ್ಲಿ ಸಚಿವ ಸಂಪುಟ ಸಭೆ ನಿಗದಿಯಾಗಿದ್ದು, ಸಭೆ ಬಳಿಕ ಸುದ್ದಿಗೋಷ್ಠಿ ನಡೆಸಿ, ಸಿಎಂ ಸಿದ್ದರಾಮಯ್ಯನವರೇ ಗ್ಯಾರಂಟಿ ಬಗ್ಗೆ ಘೋಷಣೆ ಮಾಡಲಿದ್ದಾರೆ.
ಮೂರು ಗ್ಯಾರಂಟಿ ಜಾರಿ? :ಸಂಪುಟ ಸಭೆಯಲ್ಲಿ ಮೊದಲಿಗೆ ಮೂರು ಗ್ಯಾರಂಟಿ ಅನುಷ್ಟಾನ ಮಾಡಲು ತೀರ್ಮಾನಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಪ್ರತಿ ತಿಂಗಳು ಗೃಹ ಬಳಕೆಯ 200 ಯುನಿಟ್ವರೆಗೆ ಉಚಿತ ವಿದ್ಯುತ್ ನೀಡುವ ಗೃಹಜ್ಯೋತಿ ಯೋಜನೆ, ರಾಜ್ಯದ ಮಹಿಳೆಯರಿಗೆ ಉಚಿತ ಸರ್ಕಾರಿ ಬಸ್ ಪ್ರಯಾಣದ ಶಕ್ತಿ ಯೋಜನೆ ಹಾಗೂ ಬಿಪಿಎಲ್ ಕಾರ್ಡ್ ದಾರರಿಗೆ 10 ಕೆ.ಜಿ. ಅನ್ನಭಾಗ್ಯ ಯೋಜನೆ ಜಾರಿಗೊಳಿಸುವ ತೀರ್ಮಾನಿಸುವ ಸಾಧ್ಯತೆ ಇದೆ.
ಉಳಿದಂತೆ ಕುಟುಂಬದ ಮಹಿಳೆಗೆ ಪ್ರತಿ ತಿಂಗಳು 2,000 ರೂ. ನೀಡುವ ಗೃಹಲಕ್ಷ್ಮಿ ಯೋಜನೆ, ಪದವೀಧರರಿಗೆ 3,000 ರೂ. ಹಾಗೂ ಡಿಪ್ಲೋಮಾ ಪದವೀಧರರಿಗೆ 1,500 ರೂ. ನೀಡುವ ಯುವನಿಧಿ ಯೋಜನೆಯನ್ನು ಬಳಿಕದ ದಿನಗಳಲ್ಲಿ ಜಾರಿಗೊಳಿಸುವ ಸಾಧ್ಯತೆ ಇದೆ ಎಂಬ ಮಾತುಗಳೂ ಕೇಳಿ ಬರುತ್ತಿದೆ. ಈ ಎರಡು ಯೋಜನೆಗಳ ಸಂಬಂಧ ರೂಪುರೇಷೆ, ನಿಖರ ಅಂಕಿ - ಅಂಶ, ಅರ್ಹ ಫಲಾನುಭವಿಗಳ ಸಂಬಂಧ ಸ್ಪಷ್ಟ ಮಾರ್ಗಸೂಚಿ ಸಿದ್ಧಪಡಿಸುವ ಅಗತ್ಯ ಇದೆ. ಹಾಗಾಗಿ ಈ ಎರಡು ಗ್ಯಾರಂಟಿಗಳನ್ನು ಸ್ವಲ್ಪ ವಿಳಂಬವಾಗಿ ಜಾರಿಗೊಳಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಷರತ್ತಿನೊಂದಿಗೆ ಗ್ಯಾರಂಟಿ ಜಾರಿ? :ಸಂಪುಟ ಸಭೆಯತ್ತ ಜನರ ಚಿತ್ತ ನೆಟ್ಟಿರುವುದು ಗ್ಯಾರಂಟಿಗಳಿಗೆ ಷರತ್ತು ಅನ್ವಯವಾಗುತ್ತಾ ಎಂಬುದರ ಮೇಲೆ. ಪಂಚ ಗ್ಯಾರಂಟಿಗಳಿಗೆ 50 ಸಾವಿರ ಕೋಟಿ ರೂ. ಹೊರೆಯಾಗಲಿದ್ದು, ಅಷ್ಟು ದೊಡ್ಡ ಪ್ರಮಾಣದಲ್ಲಿ ಗ್ಯಾರಂಟಿಗಳು ಎಲ್ಲರಿಗೂ ಅನ್ವಯವಾಗುವಂತೆ ಜಾರಿ ಮಾಡುವುದು ಕಷ್ಟ ಸಾಧ್ಯವಾಗಿದೆ. ಹೀಗಾಗಿ ಕೆಲ ನಿಬಂಧನೆ, ಮಾನದಂಡ ಹಾಗೂ ಷರತ್ತುಗಳೊಂದಿಗೆ ಗ್ಯಾರಂಟಿಗಳು ಜಾರಿಯಾಗುವುದು ಬಹುತೇಕ ಖಚಿತ ಎನ್ನಲಾಗಿದೆ.
ಬಿಪಿಎಲ್ ಕಾರ್ಡ್ ದಾರರಿಗೆ ಅನ್ವಯಿಸಿ ಕೆಲ ಗ್ಯಾರಂಟಿಗಳ ಜಾರಿ ಮಾಡುವುದು, ಫ್ರೀ ಬಸ್ ಪ್ರಯಾಣಕ್ಕೆ ಕೆಲ ನಿಬಂಧನೆ, 100 ಕಿಲೋಮೀಟರ್ಗೆ ಉಚಿತ ಪ್ರಯಾಣ ಸೀಮಿತಗೊಳಿಸವುದು, ಹಂತ ಹಂತವಾಗಿ ಎಪಿಲ್ ಕಾರ್ಡುದಾರರಿಗೆ ಬಳಿಕ ಗ್ಯಾರಂಟಿ ಜಾರಿ, ಮೊದಲು ವಿದ್ಯುತ್ ಬಿಲ್ ಕಟ್ಟಿಸಿಕೊಂಡು ನಂತರ ಫಲಾನುಭವಿಗಳ ಖಾತೆಗಳಿಗೆ ಹಣ ಮರುಪಾವತಿ ಮಾಡುವುದು ಸೇರಿದಂತೆ ಹಲವು ಷರತ್ತುಗಳು ಗ್ಯಾರಂಟಿಗಳಿಗೆ ಅನ್ವಯಿಸುವ ಸಾಧ್ಯತೆಯೂ ಇದೆ.
ಹಣಕಾಸು ಇಲಾಖೆಯಿಂದ ಆಕ್ಷೇಪ:ಹಣಕಾಸು ಇಲಾಖೆ ಪಂಚ ಗ್ಯಾರಂಟಿಗಳಿಗೆ ಕನಿಷ್ಟ 50 ಸಾವಿರ ಕೋಟಿ ರೂ. ಹಣ ಬೇಕಾಗಿದೆ. ಹೀಗಾಗಿ ಹಣಕಾಸು ಇಲಾಖೆ ಈಗಾಗಲೇ ತನ್ನ ಆಕ್ಷೇಪ ವ್ಯಕ್ತಪಡಿಸಿದೆ. ಹಣ ಹೊಂದಿಸುವ ಬಗ್ಗೆ ಹಣಕಾಸು ಇಲಾಖೆ ತನ್ನ ಅಸಹಾಯಕತೆ ವ್ಯಕ್ತಪಡಿಸಿದೆ. ಹೀಗಾಗಿ ಗ್ಯಾರಂಟಿ ಜಾರಿಯನ್ನು ಹಂತ ಹಂತವಾಗಿ, ಬಿಪಿಎಲ್ ಕಾರ್ಡ್ ದಾರರಿಗೆ ಹಾಗೂ ಷರತ್ತಿನೊಂದಿಗೆ ಜಾರಿ ಮಾಡುವ ಬಗ್ಗೆ ಸಲಹೆ ನೀಡಿದೆ. ಇಷ್ಟು ದೊಡ್ಡ ಪ್ರಮಾಣದಲ್ಲಿ ಹಣ ಹೊಂದಿಸುವುದು ಕಷ್ಟಸಾಧ್ಯವಾಗಿದ್ದು, ಪಂಚ ಗ್ಯಾರಂಟಿಗಳಿಗಾಗಿ ಭಾರೀ ಸಾಲದ ಮೊರೆ ಹೋಗುವ ಅನಿವಾರ್ಯತೆ, ತೆರಿಗೆ ಏರಿಸುವ ಬಗ್ಗೆನೂ ಹಣಕಾಸು ಇಲಾಖೆ ಸಿಎಂ ಸಿದ್ದರಾಮಯ್ಯಗೆ ಎಚ್ಚರಿಕೆ ನೀಡಿದೆ.
200 ಯೂನಿಟ್ ಫ್ರಿ ವಿದ್ಯುತ್ ಯೋಜನೆಯಿಂದ ಅಂದಾಜು 2.14 ಕೋಟಿ ಕುಟುಂಬಗಳಿಗೆ ಪ್ರಯೋಜನವಾಗಲಿದೆ. ಇದಕ್ಕಾಗಿ ವಾರ್ಷಿಕ 12,038 ಕೋಟಿ ರೂ. ಆಗಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಕುಟುಂಬದ ಮಹಿಳೆಗೆ ಪ್ರತಿ ತಿಂಗಳು 2,000 ರೂ. ನೀಡುವ ಗೃಹಲಕ್ಷ್ಮಿ ಯೋಜನೆ ಕಾಂಗ್ರೆಸ್ನ ಮತ್ತೊಂದು ಗ್ಯಾರಂಟಿ ಯೋಜನೆ. ಗೃಹಲಕ್ಷ್ಮಿ ಯೋಜನೆಗೆ ವಾರ್ಷಿಕ ಅಂದಾಜು 32,000 ಕೋಟಿ ರೂ. ಬೇಕಾಗಬಹುದು ಎಂದು ಮಾಹಿತಿ ನೀಡಿದ್ದಾರೆ.
ಪದವೀಧರರಿಗೆ 3,000 ರೂ. ಹಾಗೂ ಡಿಪ್ಲೋಮಾ ಪದವೀಧರರಿಗೆ 1,500 ರೂ. ನೀಡುವ ಯುವನಿಧಿ ಯೋಜನೆಗೆ ವಾರ್ಷಿಕ 860-900 ಕೋಟಿ ರೂ. ಹೊರೆಯಾಗಲಿದೆ ಎಂದು ಅಧಿಕಾರಿಗಳು ಅಂಕಿ-ಅಂಶ ನೀಡಿದ್ದಾರೆ. ರಾಜ್ಯದ ಮಹಿಳೆಯರಿಗೆ ಉಚಿತ ಸರ್ಕಾರಿ ಬಸ್ ಪ್ರಯಾಣದ ಶಕ್ತಿ ಯೋಜನೆಗೆ ರಸ್ತೆ ಸಾರಿಗೆ ನಿಗಮಗಳ ಮೇಲೆ ವಾರ್ಷಿಕ ಒಟ್ಟು ಅಂದಾಜು 3,600 ಕೋಟಿ ರೂ. ಹೊರೆ ಬೀಳಲಿದೆ. ಇನ್ನು ಅನ್ನಭಾಗ್ಯ ಯೋಜನೆಗೆ ವಾರ್ಷಿಕ ಅಂದಾಜು ಸುಮಾರು 4,500-5,000 ಕೋಟಿ ರೂ. ವೆಚ್ಚವಾಗುವ ಬಗ್ಗೆ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಮಾಹಿತಿ ನೀಡಿದೆ.
ಗ್ಯಾರಂಟಿಗಳ ವೆಚ್ಚ ಸರಿದೂರಿಸಲು ತೆರಿಗೆ ಹೆಚ್ಚಳಕ್ಕೆ ಹಣಕಾಸು ಇಲಾಖೆ ಅಧಿಕಾರಿಗಳು ಪ್ರಸ್ತಾಪ ಇಟ್ಟಿದ್ದಾರೆ. ಅಬಕಾರಿ ಸುಂಕ, ಪೆಟ್ರೋಲ್, ಡೀಸೆಲ್ ವ್ಯಾಟ್ ಹೆಚ್ಚಳದ ಅನಿವಾರ್ಯತೆ ಬಗ್ಗೆ ಮನಗಾಣಿಸಿದೆ. ನಗರ ಪ್ರದೇಶಗಳಲ್ಲಿ ಆಸ್ತಿ ತೆರಿಗೆ ಹೆಚ್ಚಳ, ನೋಂದಣಿ ಮುದ್ರಾಂಕ ತೆರಿಗೆ ಹೆಚ್ಚಳ, ಗಣಿಗಾರಿಕೆ, ಮೋಟಾರು ವಾಹನ ತೆರಿಗೆ ಹೆಚ್ಚಳ ಬಗ್ಗೆ ಗಂಭೀರ ಚರ್ಚೆ ನಡೆದಿದೆ. ಆದರೆ, ನಾಳಿನ ಸಂಪುಟ ಸಭೆಯಲ್ಲಿ ಈ ಎಲ್ಲ ಗೊಂದಲಗಳಿಗೆ ತೆರೆ ಬೀಳುತ್ತಾ ಎಂಬುದನ್ನು ಕಾದು ನೋಡಬೇಕು.