ಬೆಂಗಳೂರು :ಅರಣ್ಯ ವಾಸಿಗಳಿಗೆ ಸಾಗುವಳಿ ಹಕ್ಕನ್ನು ಕೊಡುವ ಮಹತ್ವದ ಅರಣ್ಯ ಹಕ್ಕು ಕಾಯ್ದೆ ಜಾರಿಗೊಂಡು ದಶಕವೇ ಕಳೆದಿದೆ. ಆದರೆ, ರಾಜ್ಯದಲ್ಲಿ ಅದರ ಅನುಷ್ಠಾನ ಮಾತ್ರ ಆಮೆಗತಿಯಲ್ಲಿ ಸಾಗಿದೆ. ಕಾಯ್ದೆಯಡಿ ಸ್ವೀಕರಿಸಲಾದ ಅರ್ಜಿ ವಿಲೇವಾರಿಗೇ ಗ್ರಹಣ ಹಿಡಿದಿದೆ.
ಅರಣ್ಯ ಹಕ್ಕು ಕಾಯ್ದೆ. ಮಹಾತ್ವಾಕಾಂಕ್ಷೆಯ ಈ ಕಾಯ್ದೆ 2006ರಲ್ಲಿಯೇ ಅಂಗೀಕಾರವಾಗಿತ್ತು. ಅದರಡಿ ಅರಣ್ಯ ಅತಿಕ್ರಮಣದ ಜಾಗದ ಸಾಗುವಳಿ ಹಕ್ಕನ್ನು ಪಡೆಯಬಹುದಾಗಿದೆ. ಪರಿಶಿಷ್ಟ ಪಂಗಡದವರು (ಎಸ್‌ಟಿ), ಪಾರಂಪರಿಕ ಅರಣ್ಯವಾಸಿಗಳು, ಸಮುದಾಯದವರು (ಕಮ್ಯುನಿಟಿ) ಈ ಕಾಯ್ದೆಯಡಿ ಹಕ್ಕುಪತ್ರ ಪಡೆಯಲು ಅರ್ಹತೆ ಪಡೆದಿದ್ದಾರೆ.
ಇದು ನೂರಾರು ವರ್ಷಗಳಿಂದ ಅರಣ್ಯ ಪ್ರದೇಶದಲ್ಲಿ ವಾಸವಿರುವ ಸಾವಿರಾರು ಜನರಿಗೆ ಖಾಯಂ ನೆಲೆಯನ್ನು ಒದಗಿಸುವ ಹಾಗೂ ಮಲೆನಾಡಿನ ಪ್ರದೇಶದಲ್ಲಿನ ಅರಣ್ಯದಲ್ಲಿ ವಾಸಿಸುತ್ತಿರುವ ಜನರಿಗೆ ಪುನರ್ವಸತಿ ಒದಗಿಸುವ ಮಹತ್ವಾಕಾಂಕ್ಷೆಯ ಕಾಯ್ದೆಯಾಗಿದೆ. ಆದರೆ, ಸರ್ಕಾರಗಳ ನಿರ್ಲಕ್ಷ್ಯ ನೀತಿಯಿಂದ ಕಾಯ್ದೆ ಪರಿಣಾಮಕಾರಿಯಾಗಿ ಅನುಷ್ಠಾನಗೊಳ್ಳುತ್ತಿಲ್ಲ ಎಂಬುದು ಸ್ಪಷ್ಟ.
ಸಿಎಂ ನೇತೃತ್ವದಲ್ಲಿ ಇತ್ತೀಚೆಗೆ ನಡೆದ ಸಭೆಯಲ್ಲಿ ಅರಣ್ಯ ಹಕ್ಕು ಕಾಯ್ದೆಯ ಅನುಷ್ಠಾನದಲ್ಲಿನ ವೈಫಲ್ಯದ ಬಗ್ಗೆ ಚರ್ಚೆ ನಡೆಸಲಾಗಿದೆ. ತ್ವರಿತಗತಿಯಲ್ಲಿ ಅರ್ಜಿ ವಿಲೇವಾರಿ ಮಾಡಿ, ಅರ್ಹರಿಗೆ ಹಕ್ಕು ಪತ್ರ ನೀಡುವಂತೆ ಸಭೆಯಲ್ಲಿ ಸೂಚನೆ ನೀಡಲಾಗಿದೆ.
ಏನಿದು ಅರಣ್ಯ ಹಕ್ಕು ಕಾಯ್ದೆ? :ಅರಣ್ಯದಲ್ಲಿ ವಾಸಿಸುವವರಿಗೆ ಅರಣ್ಯ ಹಕ್ಕು ನೀಡುವ ಮಹತ್ವದ ಕಾಯ್ದೆ ಇದಾಗಿದೆ. ಅವರಿಗೆ ಖಾಯಂ ನೆಲೆ ಹಾಗೂ ಪುನರ್ವಸತಿ ಒದಗಿಸುವುದು ಇದರ ಪ್ರಮುಖ ಉದ್ದೇಶವಾಗಿದೆ.
ಕೇಂದ್ರ ಸರ್ಕಾರ ಜಾರಿಗೊಳಿಸಿರುವ ನಿಯಮದಂತೆ ಅರಣ್ಯ ಹಕ್ಕು ಪತ್ರ ಪಡೆಯ ಬೇಕಾದರೆ ಡಿಸೆಂಬರ್ 12, 2005ಕ್ಕೂ ಮುಂಚೆ ಅರಣ್ಯ ಪ್ರದೇಶದಲ್ಲಿ ವಾಸಿಸುತ್ತಿರುವ ಪರಿಶಿಷ್ಟ ಪಂಗಡಗಳ ಜನಾಂಗದವರು ಹಾಗೂ ಇತರೆ ಪಾರಂಪರಿಕ ಅರಣ್ಯ ವಾಸಿಗಳು ಡಿಸೆಂಬರ್ 13, 2005ಕ್ಕೂ ಮುನ್ನ ಒಂದು ತಲೆಮಾರಿಗೆ 25 ವರ್ಷದಂತೆ ಕೊನೆಯ ಪಕ್ಷ ಮೂರು ತಲೆಮಾರಿನವರೆಗೆ ಅಂದರೆ ಸುಮಾರು 75 ವರ್ಷಗಳು ಪ್ರಧಾನವಾಗಿ ಅರಣ್ಯಗಳಲ್ಲಿ ವಾಸಿಸಿದ ಮತ್ತು ವಾಸ್ತವಿಕ ಜೀವನೋಪಾಯದ ವ್ಯಕ್ತಿ ಅಥವಾ ಯಾವುದೇ ಸಮುದಾಯದವರಿಗೆ ಅರಣ್ಯ ಹಕ್ಕುಗಳನ್ನು ನೀಡಬಹುದು.
ಈ ಕಾಯ್ದೆಯ ವ್ಯಾಪ್ತಿಯಲ್ಲಿ ಪ್ರತಿ ಕುಟುಂಬಕ್ಕೆ 4 ಹೆಕ್ಟೇರ್‌ಗೆ ಮೀರದಂತೆ ಭೂಮಿಯ ಅನುಭೋಗದ ಹಕ್ಕು ಮತ್ತು ಪರಿಸರ ಸಂರಕ್ಷಣೆ ನೀಡಬಹುದು. ಅರಣ್ಯ ಅತಿಕ್ರಮಣದ ಜಾಗದ ಸಾಗುವಳಿ ಹಕ್ಕನ್ನು ಅರಣ್ಯ ಹಕ್ಕು ಕಾಯ್ದೆಯಡಿ ಪಡೆಯಲು ಮೊದಲನೆಯದಾಗಿ ಪರಿಶಿಷ್ಟ ಪಂಗಡದವರು (ಎಸ್‌ಟಿ) ಅರ್ಹರಾದರೆ, ಎರಡನೆಯದಾಗಿ ಪಾರಂಪರಿಕ ಅರಣ್ಯವಾಸಿಗಳು (ಒಟಿಎಫ್‌ಡಿ), ಮೂರನೆಯದಾಗಿ ಸಮುದಾಯದವರು (ಕಮ್ಯುನಿಟಿ) ಅರ್ಹತೆ ಪಡೆಯಲಿದ್ದಾರೆ.
ಕಾಯ್ದೆ ಅನುಷ್ಠಾನದಲ್ಲಿ ಆಮೆಗತಿ :ಕಾಯ್ದೆಯನ್ನು ತ್ವರಿತವಾಗಿ ಜಾರಿಗೊಳಿಸುವಂತೆ ಶಾಸಕರು ಸರ್ಕಾರಗಳಿಗೆ ಒತ್ತಾಯ ಮಾಡುತ್ತಲೇ ಇದ್ದಾರೆ. ಆದರೆ, ಅನುಷ್ಠಾನ ಮಾತ್ರ ದಶಕದ ಬಳಿಕನೂ ಆಮೆಗತಿಯಲ್ಲೇ ಸಾಗುತ್ತಿದೆ. ಅದರಲ್ಲೂ ಕೋವಿಡ್ ಬಳಿಕ ಕಾಯ್ದೆಯಡಿ ಸ್ವೀಕರಿಸಲಾದ ಅರ್ಜಿಗಳ ವಿಲೇವಾರಿ ಮತ್ತಷ್ಟು ನೆನಗುದಿಗೆ ಬಿದ್ದಿದೆ.