ಬೆಂಗಳೂರು: ಐಎಂಎ ಜ್ಯುವೆಲ್ಸ್ ವಂಚನೆ ಪ್ರಕರಣ ಸಂಬಂಧ ವಿಧಾನಸೌಧದಲ್ಲಿ ಸಚಿವ ಜಮೀರ್ ಅಹಮ್ಮದ್ ಖಾನ್ ಅವರು, ಸಿಎಂ ಕುಮಾರಸ್ವಾಮಿ ಅವರನ್ನು ಭೇಟಿಯಾಗಿ ಚರ್ಚೆ ನಡೆಸಿದರು. ಸಭೆಯಲ್ಲಿ ಶಾಸಕ ಎನ್.ಎ. ಹ್ಯಾರೀಸ್, ರಿಜ್ವಾನ್ ಅರ್ಷದ್ ಭಾಗಿಯಾಗಿದ್ದರು.
ಐಎಂಎ ವಂಚನೆ ಪ್ರಕರಣ: ಸಿಎಂ ಭೇಟಿ ಬಳಿಕ ಸಚಿವ ಜಮೀರ್ ಅಹಮ್ಮದ್ ಹೇಳಿದ್ದೇನು?
ಐಎಂಎ ಜ್ಯುವೆಲರ್ಸ್ ವಂಚನೆ ಪ್ರಕರಣವು ರಾಜ್ಯಾದ್ಯಂತ ಸದ್ದು ಮಾಡುತ್ತಿದೆ. ಈ ಮಧ್ಯೆ ಸಚಿವ ಜಮೀರ್ ಅಹಮ್ಮದ್ ಖಾನ್ ಅವರು ಮುಖ್ಯಮಂತ್ರಿ ಕುಮಾರಸ್ವಾಮಿ ಅವರನ್ನು ಭೇಟಿಯಾಗಿ, ಚರ್ಚೆ ನಡೆಸಿದರು.
ಸಿಎಂ ಭೇಟಿ ಬಳಿಕ ಮಾತನಾಡಿದ ಸಚಿವ ಜಮೀರ್, ಒಂದು ವೇಳೆ ಎಸ್ಐಟಿ ತನಿಖೆಯೂ ಸರಿಯಾಗದಿದ್ದರೆ ಸಿಬಿಐ ತನಿಖೆ ಆಗಬೇಕು. ಸುಮಾರು 500 ಕೋಟಿ ಆಸ್ತಿಯಲ್ಲಿ ಎಷ್ಟೆಷ್ಟು, ಎಲ್ಲೆಲ್ಲಿ ಇದೆ ಅಂತಾ ಲೆಕ್ಕ ತೆಗೆದಿದ್ದೇವೆ. ಸರ್ಕಾರ ಆಸ್ತಿಯನ್ನು ವಶಕ್ಕೆ ಪಡೆದು ಸಂತ್ರಸ್ತರಿಗೆ ಪರಿಹಾರ ಕೊಡಬೇಕು ಎಂದು ತಿಳಿಸಿದರು.
ಸಂಸ್ಥೆಯಲ್ಲಿ ಡೈಮಂಡ್ ಕೂಡಾ ಇದೆ ಎಂಬ ಮಾಹಿತಿ ಇದೆ. ಪ್ರಕರಣದಲ್ಲಿ ಯಾರದೇ ಹೆಸರು ಕೇಳಿ ಬಂದರೂ ಎಲ್ಲಾ ತನಿಖೆ ಆಗಲಿ. ಯಾರೋ ಮೂರ್ನಾಲ್ಕು ಜನ ಮಾಡಿದ ತಪ್ಪಿಗೆ ಉಳಿದವರ ಮೇಲೂ ಆರೋಪ ಬರುವುದು ಬೇಡ. ತಪ್ಪು ಮಾಡಿದವರಿಗೆ ಶಿಕ್ಷೆ ಆಗಲಿ, ಎಲ್ಲ ಸತ್ಯ ಹೊರಗೆ ಬರಲಿ ಎಂದು ಜಮೀರ್ ಅಹ್ಮದ್ ಖಾನ್ ಒತ್ತಾಯಿಸಿದರು.