ಕರ್ನಾಟಕ

karnataka

ETV Bharat / state

ನಾನು ಸೋತರೂ ಸುಮ್ಮನೆ ಕೂತಿಲ್ಲ: ಗುಟುರು ಹಾಕಿದ ದೊಡ್ಡ ಗೌಡರು!

ಲೋಕಸಭೆ ಚುನಾವಣೆಯಲ್ಲಿ ಸೋತರೂ ನಾನು ಕಂಗೆಡದೆ ಪಕ್ಷ ಕಟ್ಟುವ ಕಾರ್ಯದಲ್ಲಿ ನಿರತನಾಗಿದ್ದಾನೆ ಎಂದು ಜೆಡಿಎಸ್​ ವರಿಷ್ಠ ಹೆಚ್​.ಡಿ ದೇವೇಗೌಡರು ಗುಟುರು ಹಾಕಿದ್ದಾರೆ.

By

Published : Jun 7, 2019, 8:41 PM IST

ನಾನು ಸೋತರೂ ಸುಮ್ಮನೆ ಕೂತಿಲ್ಲ

ಬೆಂಗಳೂರು:ಲೋಕಸಭೆ ಚುನಾವಣೆಯಲ್ಲಿ ಸೋತರೂ ನಾನು ಕಂಗೆಟ್ಟಿಲ್ಲ, ಸುಮ್ಮನೆ ಕೂತಿಲ್ಲ. ಪಕ್ಷ ಕಟ್ಟುವ ಶಕ್ತಿ ನನಗೆ ಇನ್ನೂ ಇದೆ ಎಂದು ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡರು ಮಾರ್ಮಿಕವಾಗಿ ನುಡಿದಿದ್ದಾರೆ.

ಅರಮನೆ ಮೈದಾನದಲ್ಲಿ ಜೆಡಿಎಸ್ ವತಿಯಿಂದ ಹಮ್ಮಿಕೊಂಡಿದ್ದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಜಯಗಳಿಸಿರುವ ಪಕ್ಷದ ಸದಸ್ಯರನ್ನು ಸನ್ಮಾನಿಸುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಗೌಡರು, ನನ್ನ ಆರೋಗ್ಯ ಸರಿಯಿಲ್ಲ, ಆದರೂ ಬಂದಿದ್ದೇನೆ. ಪಕ್ಷದ ಆರೋಗ್ಯ ಸರಿ ಮಾಡೋದು ನನ್ನ ಕೆಲಸ. ಪಕ್ಷ ಸಂಘಟನೆಗೆ ವಯಸ್ಸು ಮುಖ್ಯವಲ್ಲ. ಯಾರೇ ಪಕ್ಷ ಬಿಟ್ಟು ಹೋದರೂ ಹೆದರುವ ಪ್ರಶ್ನೆ ಇಲ್ಲ. ಮತ್ತಷ್ಟು ಪಕ್ಷ ಸಂಘಟನೆ ಮಾಡೋಣ ಎಂದು ಸಲಹೆ ನೀಡಿದರು.ಎಲ್ಲಾ ವರ್ಗಗಳಿಗೂ 10-15 ಕೋಟಿ ರೂ. ಅನುದಾನ ಕೊಡಿ. ಪಕ್ಷ ಹೇಗೆ ಉಳಿಯಲ್ಲ ಅಂತ ನಾನೂ ನೋಡುತ್ತೇನೆ ಎಂದು ಸಿಎಂಗೆ ಗೌಡರು ಸಲಹೆ ನೀಡಿದರು.
ನಿರ್ದಾಕ್ಷಿಣ್ಯವಾಗಿ ಹೇಳುತ್ತೇನೆ. ಈ ಪಕ್ಷ ಉಳಿಯಬೇಕು. ನಾನು ದುಡಿದಿದ್ದೇನೆ. ಪಾದಯಾತ್ರೆ ಮಾಡಿದ್ದೇನೆ. ರೈಲು ತಡೆ ಮಾಡಿ ಹೋರಾಟ ಮಾಡಿದ್ದೇನೆ. ರೈತರ ಪರ ನಾನು ಹೋರಾಟ ಮಾಡುತ್ತಲೇ ಇದ್ದೇನೆ. ರೈತರನ್ನು ನಾನು ಎಂದಿಗೂ ಬಿಟ್ಟುಕೊಟ್ಟಿಲ್ಲ ಎಂದು ಹೇಳಿದರು.

ಲೋಕಸಭೆ ಚುನಾವಣೆಯಲ್ಲಿ ಸೋತಿದ್ದು, ಮನೆಗೆ ಹೋಗುತ್ತಾರೆ ಎಂಬ ಮಾತುಗಳು ಕೇಳಿಬಂದಿವೆ. ಆದರೆ, ನನಗೆ ಸೋತು ಮತ್ತೆ ಎದ್ದು ಬರೋದು ಗೊತ್ತಿದೆ. ನಿಷ್ಠಾವಂತ ಕಾರ್ಯಕರ್ತರನ್ನು ನಾನೇ ಗುರುತಿಸುತ್ತೇನೆ. ಲಿಂಗಾಯತ, ಕುರುಬ, ಒಕ್ಕಲಿಗ ಯಾರೇ ಇದ್ದರೂ ಪಕ್ಷಕ್ಕೆ ನಿಷ್ಠಾವಂತರಾಗಿರಿ. ಪಕ್ಷಕ್ಕೆ ದ್ರೋಹ ಮಾಡ್ಬೇಡಿ ಎಂದು ಮನವಿ ಮಾಡಿದರು.
ಮೈತ್ರಿ ಸರ್ಕಾರವನ್ನು ಅವರು ನಡೆಸಿಕೊಂಡು ಹೋಗಲಿ. 17 ರಾಜ್ಯಗಳಲ್ಲಿ ಕಾಂಗ್ರೆಸ್ ಇಲ್ಲ. ಏನಾಗುತ್ತಿದೆ ದೇಶದಲ್ಲಿ ಎಂದು ಪ್ರಶ್ನಿಸಿದ ಗೌಡರು, ಮೈತ್ರಿ ಸರ್ಕಾರ ಮಾಡಿದ್ದರಿಂದ ಒಂದು ಸ್ಥಾನ ಬಂದಿದೆ ಅಂತಾರೆ. ವಿಜಯಪುರದಿಂದ ಯಾರು ಅನ್ಯಾಯ ಮಾಡಿದ್ದು, ಕಾಂಗ್ರೆಸ್ ನವರು ಅನ್ಯಾಯ ಆಗಿದೆ ಅಂತಾನೆ ವಿಶ್ಲೇಷಣೆ ಮಾಡ್ಲಿ ಬಿಡಿ. ಒಕ್ಕಲಿಗರು ಅನ್ಯಾಯ ಮಾಡಿದ್ರಾ ? ವಿಜಯಪುರದಲ್ಲಿ ಅನ್ಯಾಯ ಮಾಡಿದ್ದು ಯಾರು?ಲಿಂಗಾಯತರಿಗೆ ನಾನು ಕೊಟ್ಟಷ್ಟು ಅವಕಾಶ ಯಾರು ಕೊಟ್ಟಿದ್ದಾರೆ. ಸಂಪುಟದಲ್ಲಿ ನಾನು ಅವಕಾಶ ಕೊಟ್ಟಿದ್ದೇನೆ. ಅವರ ಜೀವಮಾನದಲ್ಲಿ ಸಿಗದಷ್ಟು ಅವಕಾಶ ಕೊಟ್ಟಿದ್ದೇನೆ ಎಂದು ಗುಡುಗಿದರು.

For All Latest Updates

ABOUT THE AUTHOR

...view details