ಬೆಂಗಳೂರು: ಅಕ್ರಮ ಗಣಿಗಾರಿಕೆ ಆರೋಪ ಪ್ರಕರಣದಲ್ಲಿ ವಿಶೇಷ ತನಿಖಾ ತಂಡ ದಾಖಲಿಸಿರುವ ಪ್ರಕರಣವನ್ನು ರದ್ದುಪಡಿಸುವಂತೆ ಕೋರಿ ಐಎಎಸ್ ಅಧಿಕಾರಿ ಪುತ್ರ ಗಗನ್ ಬಡೇರಿಯಾ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾ ಮಾಡಿ ಆದೇಶಿಸಿದೆ.
ಪ್ರಕರಣದಲ್ಲಿ ತಮ್ಮನ್ನು ಅನಗತ್ಯವಾಗಿ ಸಿಲುಕಿಸಲಾಗಿದ್ದು, ತಮ್ಮ ವಿರುದ್ಧ ದಾಖಲಿಸಿರುವ ಪ್ರಕರಣವನ್ನು ರದ್ದುಪಡಿಸುವಂತೆ ಕೋರಿ ಐಎಎಸ್ ಅಧಿಕಾರಿ ಗಂಗಾರಾಮ್ ಬಡೇರಿಯಾ ಪುತ್ರ ಗಗನ್ ಬಡೇರಿಯಾ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾ. ಹೆಚ್.ಪಿ.ಸಂದೇಶ್ ಅವರಿದ್ದ ಏಕಸದಸ್ಯ ಪೀಠ ಈ ಆದೇಶ ಮಾಡಿದೆ. ಅಧಿಕಾರಿಯ ಪುತ್ರನ ಖಾತೆಗೆ ಹಣ ಸಂದಾಯವಾಗಿರುವುದು ಯಾವ ಕಾರಣಕ್ಕಾಗಿ ಎಂಬುದು ವಿಚಾರಣೆ ಪೂರ್ಣಗೊಂಡ ಮೇಲೆಯೇ ತಿಳಿಯಲಿದೆ. ಆದ್ದರಿಂದ ಈ ಹಂತದಲ್ಲಿ ಅರ್ಜಿದಾರರ ಮನವಿ ಪುರಸ್ಕರಿಸಲು ಸಾಧ್ಯವಿಲ್ಲ ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ.
ಓದಿ:ಪತ್ನಿ, ನಾದಿನಿ ಕೊಲೆ: ಖ್ಯಾತ ವೀಣಾ ವಾದಕ ಚಂದ್ರಶೇಖರ್ಗೆ ಜೀವಾವಧಿ ಶಿಕ್ಷೆ
ಪ್ರಕರಣದ ಹಿನ್ನೆಲೆ: ಜಂತಕಲ್ ಮೈನಿಂಗ್ ಸಂಸ್ಥೆಗೆ ಅಕ್ರಮವಾಗಿ 1.17 ಲಕ್ಷ ಟನ್ ಕಬ್ಬಿಣದ ಅದಿರು ಸಾಗಾಣಿಕೆ ಮಾಡಲು ಅಂದಿನ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ನಿರ್ದೇಶಕರಾಗಿದ್ದ ಗಂಗಾರಾಮ್ ಬಡೇರಿಯಾ ಅನುಮತಿ ನೀಡಿದ್ದಾರೆ. ಇದಕ್ಕೆ ಪ್ರತಿಫಲವಾಗಿ ಅಧಿಕಾರಿಯ ಪುತ್ರ ಗಗನ್ ಬಡೇರಿಯಾ ಬ್ಯಾಂಕ್ ಖಾತೆಗೆ 20 ಲಕ್ಷ ರೂ. ಹಣ ಸಂದಾಯವಾಗಿದೆ ಎಂದು ವಿಶೇಷ ತನಿಖಾ ತಂಡ ಆರೋಪಿಸಿ ಪ್ರಕರಣ ದಾಖಲಿಸಿದೆ.
ಈ ಹಿನ್ನೆಲೆಯಲ್ಲಿ ತಮ್ಮ ವಿರುದ್ಧದ ಪ್ರಕರಣವನ್ನು ರದ್ದುಪಡಿಸುವಂತೆ ಕೋರಿ ಹೈಕೋರ್ಟ್ ಮೆಟ್ಟಿಲೇರಿದ್ದ ಗಗನ್ ಬಡೇರಿಯಾ, ತಮ್ಮ ತಂದೆಯ ವಿರುದ್ಧ ಕಾನೂನು ಕ್ರಮ ಜರುಗಿಸಲು ಸರ್ಕಾರ ಅನುಮತಿ ನೀಡಿರಲಿಲ್ಲ. ಹೀಗಾಗಿ ಅಧಿಕಾರಿಗಳು ತಪ್ಪಾಗಿ ಅರ್ಥೈಸಿಕೊಂಡು ನನ್ನ ಮೇಲೆ ಪ್ರಕರಣ ದಾಖಲಿಸಿದ್ದಾರೆ. ನನ್ನ ಖಾತೆಗೆ ಹಣ ಸಂದಾಯ ಮಾಡಿರುವ ಟ್ವೆಂಟಿ ಫಸ್ಟ್ ಸೆಂಚುರಿ ವೈರ್ ರಾಡ್ಸ್ ಲಿಮಿಟೆಡ್ ಸಂಗೀತ ಕ್ಷೇತ್ರದಲ್ಲಿ ಕೆಲಸ ನಿರ್ವಹಿಸುತ್ತಿದ್ದು, ಗಣಿಗಾರಿಕೆಯ ಯಾವುದೇ ವ್ಯವಹಾರ ಹೊಂದಿಲ್ಲ ಎಂದು ವಾದಿಸಿದ್ದರು.