ಬೆಂಗಳೂರು: ನಾಡಿನ ಜನತೆ ಈ ರಾಷ್ಟ್ರೀಯ ಪಕ್ಷಗಳನ್ನು ನಂಬಿ ಮತ ಹಾಕಿದ್ದಾರೆ. ಈ ಎರಡೂ ರಾಷ್ಟ್ರೀಯ ಪಕ್ಷಗಳ ನಾಟಕ ಜನ ನೋಡಲೇ ಬೇಕು, ಇದು ಅನಿವಾರ್ಯ ಎಂದು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಮಾರ್ಮಿಕವಾಗಿ ನುಡಿದರು.
ಜೆಪಿ ನಗರದ ತಮ್ಮ ನಿವಾಸದ ಬಳಿ ಇಂದು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಜನತೆಗೆ ಯಾವ ರೀತಿ ಟೋಪಿ ಹಾಕುತ್ತಾರೆಂದು ನೋಡಿ. ಕಾಂಗ್ರೆಸ್ ಅಧ್ಯಕ್ಷರು ಅರ್ಜಿ ಪ್ರದರ್ಶನ ಮಾಡಿ ಕೇಂದ್ರವನ್ನು ದೂಷಣೆ ಮಾಡಿದ್ದಾರೆ. ಜನರ ಮುಂದೆ ಮಾತು ಕೊಟ್ಟಾಗ ಸಮಸ್ಯೆ ಬಗ್ಗೆ ಅರಿವಿರಲಿಲ್ವಾ? ಎಂದು ಪ್ರಶ್ನಿಸಿದ್ದಾರೆ.
ವಿಧಾನಸಭೆ ಚುನಾವಣಾ ಪೂರ್ವದಲ್ಲಿ ಕಾಂಗ್ರೆಸ್ ಜನತೆಗೆ ನೀಡಿರುವ ಭರವಸೆಯಂತೆ ಬಡವರಿಗೆ 10 ಕೆ ಜಿ ಅಕ್ಕಿ ನೀಡುವುದು ರಾಜ್ಯ ಸರ್ಕಾರದ ಜವಾಬ್ದಾರಿ. ಕೇಂದ್ರ ಸರ್ಕಾರ ಅಕ್ಕಿ ಯಾಕೆ ಕೊಡಬೇಕು. ಕೇಂದ್ರ ಸರ್ಕಾರಕ್ಕೆ ಅಕ್ಕಿಗಾಗಿ ಅರ್ಜಿ ಹಾಕಿಕೊಂಡಿದ್ರಾ? ಎಂದು ಕುಟುಕಿದರು.
ವಿದ್ಯುತ್ ಉಚಿತವಾಗಿ ಕೊಡುವುದಾಗಿ ಸರ್ಕಾರ ಘೋಷಣೆ ಮಾಡಿದೆ. ವಿದ್ಯುತ್ ಬಿಲ್ ದು ಇದೇ ಕಥೆ ಆಗಿದೆ. 35 ಲಕ್ಷ ಬಿಲ್ ಕಟ್ಟಬೇಕು ಅಂತ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ವೈಸ್ ಚಾನ್ಸಲರ್ ಹೇಳುತ್ತಿದ್ದಾರೆ. ಎಷ್ಟೋ ಕುಟುಂಬಗಳಿಗೆ ಇನ್ನೂ ಬಿಲ್ ಬಂದಿಲ್ಲ. ಜನ ಆತಂಕದಲ್ಲಿದ್ದಾರೆ. ಜನರು ತೀರ್ಮಾನ ಮಾಡಬೇಕಾದಾಗ, ಬದುಕು ಕಟ್ಟಿಕೊಳ್ಳಲು ಸರಿಯಾಗಿ ತೀರ್ಮಾನ ಮಾಡದಿದ್ದರೆ, ಇನ್ನೂ ಕೆಟ್ಟ ದಿನಗಳು ಬರಬೇಕಾಗುತ್ತದೆ ಎಂದ ಕುಮಾರಸ್ವಾಮಿ, ಕೋಲಾರದಲ್ಲಿ ಡಿಸಿಸಿ ಬ್ಯಾಂಕ್ ಗಲಾಟೆ ನಡೆದಿದೆ. ಇದರಲ್ಲಿ ತನಿಖೆ ನಡೆದರೆ ಯಾರ್ಯಾರು ಜೈಲಿಗೆ ಹೋಗ್ತಾರೋ ಗೊತ್ತಿಲ್ಲ ಎಂದರು.
ಬಾಯಿ ಚಪಲಕ್ಕೆ ಜಾರಕಿಹೊಳಿ ಹೇಳಿಕೆ:ಸಚಿವ ಸತೀಶ್ ಜಾರಕಿಹೊಳಿ ಅವರು ನೀಡಿದ ಸರ್ವರ್ ಹ್ಯಾಕ್ ಹೇಳಿಕೆಗೆ ಪ್ರತಿಕ್ರಿಯಿಸಿದ ಹೆಚ್ ಡಿ ಕುಮಾರಸ್ವಾಮಿ, ಅವರು ಬಾಯಿ ಚಪಲಕ್ಕೆ ಮಾತಾಡುತ್ತಿದ್ದಾರೆ. ಸತೀಶ್ ಜಾರಕಿಹೊಳಿ ಅವರಿಗೆ ಏನು ಗೊತ್ತಿದೆ. ಇವರೆಲ್ಲಾ ಮಂತ್ರಿಗಳು?. ಏಕೆ ಹ್ಯಾಕ್ ಮಾಡುತ್ತಾರೆ. ನಿಮ್ಮ ಸರ್ವರ್ ಬಲಪಡಿಸಿಕೊಳ್ಳುವುದು ನಿಮ್ಮ ಜವಾಬ್ದಾರಿ ಎಂದು ಜಾರಕಿಹೊಳಿಗೆ ಟಾಂಗ್ ನೀಡಿದರು.
ಯಾರೋ ಬಂದು ಚುನಾವಣಾ ತಂತ್ರಗಾರಿಕೆ ಐಡಿಯಾ ಕೊಟ್ಟರು. ನೀವು ಉಚಿತ, ಉಚಿತ ಎಂದು ಹೇಳಿದಿರಿ, ಸಚಿವರ ಹೆಂಡ್ತಿಗೂ ಉಚಿತ ಅರ್ಜಿ ಹಾಕಿಕೊಳ್ಳಬಹುದು ಎಂದು ಹೇಳಿದರು. ಇದೇನು ಹುಡುಗಾಟಿಕೆನಾ? ಕೊಡೋಕೆ ಸಾಧ್ಯವಾಗುತ್ತೋ ಇಲ್ಲವೋ ಅನ್ನುವುದು ಪ್ರಶ್ನೆಯಲ್ಲ. ಗ್ಯಾರಂಟಿ ಆಧಾರದಲ್ಲಿ ಘೋಷಣೆ ಮಾಡಿದ್ದಾರೆ. ಅದರ ಆಧಾರವಾಗಿ ಕೊಡಬೇಕಿರುವುದು ಅವರ ಜವಾಬ್ದಾರಿ. ಮೊದಲು ಈ ಬಗ್ಗೆ ಯೋಚನೆ ಮಾಡಿರಲಿಲ್ಲವೇ? ಎಂದು ಪ್ರಶ್ನಿಸಿದರು.