ಕರ್ನಾಟಕ

karnataka

ETV Bharat / state

ಅಧಿವೇಶನದಲ್ಲಿ ಕೃಷಿ ಕಾಯ್ದೆ ವಾಪಸ್ ಪಡೆಯದಿದ್ದರೆ ಹೋರಾಟ: ಸಿಎಂಗೆ ರೈತ ಸಂಘದ ಎಚ್ಚರಿಕೆ

ಅಧಿವೇಶನದಲ್ಲಿ ಕೃಷಿ ಕಾಯ್ದೆ ಹಿಂಪಡೆಯದಿದ್ದರೆ ಹೋರಾಟ ಮುಂದುವರೆಸಬೇಕಾಗುತ್ತೆ ಎಂದು ರೈತ ಸಂಘ ಸಿಎಂ ಎಚ್ಚರಿಕೆ ನೀಡಿದೆ. ಅಲ್ಲದೇ 35 ವಿವಿಧ ಅಂಶಗಳ ಬೇಡಿಕೆಯುಳ್ಳ ಮನವಿಯನ್ನು ಸಿಎಂಗೆ ಸಲ್ಲಿಸಿದೆ.

Farmers' union warning to CM
ಸಿಎಂಗೆ ರೈತ ಸಂಘದ ಎಚ್ಚರಿಕೆ

By

Published : Feb 18, 2022, 10:02 PM IST

ಬೆಂಗಳೂರು: ಕೇಂದ್ರದ ಕೃಷಿ ಕಾಯ್ದೆ ವಾಪಸ್​ ಪಡೆಯಬೇಕು ಎನ್ನುವುದು ಸೇರಿದಂತೆ 35 ವಿವಿಧ ಅಂಶಗಳ ಬೇಡಿಕೆಯುಳ್ಳ ಮನವಿಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ರೈತ ಸಂಘಟನೆಗಳ ನಿಯೋಗ ಸಲ್ಲಿಸಿದೆ.

ಒಂದು ವೇಳೆ ಈ ಅಧಿವೇಶನದಲ್ಲೂ ಕೃಷಿ ಕಾಯ್ದೆ ಹಿಂಪಡೆಯದಿದ್ದರೆ ಹೋರಾಟ ಮುಂದುವರೆಸಬೇಕಾಗುತ್ತೆ ಎಂದು ಎಚ್ಚರಿಕೆ ನೀಡಿದೆ. ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ನಿಯೋಗದಿಂದ ಸಿಎಂ ಭೇಟಿ ಮಾಡಲಾಯಿತು. ಗೃಹ ಕಚೇರಿ ಕೃಷ್ಣಾದಲ್ಲಿ ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ನೇತೃತ್ವದಲ್ಲಿ ಸಿಎಂ ಭೇಟಿ ಮಾಡಲಾಗಿದ್ದು, ವಿವಿಧ ಬೇಡಿಕೆಗಳ ಈಡೇರಿಕೆಗೆ ಮನವಿ ಸಲ್ಲಿಸಲಾಯಿತು.

ಸಿಎಂ ಜೊತೆಗಿನ ಭೇಟಿ ವೇಳೆ ಕೇಂದ್ರ ಸರ್ಕಾರದಿಂದ ಕೃಷಿ ಕಾಯ್ದೆ ವಾಪಸ್​ ಪಡೆದಿದ್ದರೂ, ರಾಜ್ಯ ಸರ್ಕಾರದಿಂದ ಇನ್ನು ವಾಪಸ್ ಪಡೆದಿಲ್ಲ. ಬೆಳಗಾವಿ ಅಧಿವೇಶನ ಸಮಯದಲ್ಲಿ ಬೆಂಗಳೂರಲ್ಲಿ ನಡೆಯುವ ಅಧಿವೇಶನದಲ್ಲಿ ವಾಪಸ್ ಪಡೆಯುವ ಭರವಸೆ ನೀಡಲಾಗಿತ್ತು. ಆದರೆ, ಈ ಅಧಿವೇಶನದಲ್ಲಿ ಕೃಷಿ ಕಾಯ್ದೆಯನ್ನು ಹಿಂಪಡೆದಿಲ್ಲ. ಕೂಡಲೇ ಕಾಯ್ದೆ ವಾಪಸ್​ಗೆ ಕ್ರಮ ಕೈಗೊಳ್ಳಬೇಕು ಎಂದು ನಿಯೋಗ ಸಿಎಂ ಎದುರು ಆಗ್ರಹ ಮಾಡಿದೆ.

ಇದನ್ನೂ ಓದಿ:ಕಲಾಪ ಹಾಳು ಮಾಡುವುದನ್ನು ಬಿಟ್ಟು ಕಾಂಗ್ರೆಸ್ ಕೋರ್ಟ್​ಗೆ ಪಿಐಎಲ್ ಹಾಕಲಿ: ಹೆಚ್​ಡಿಕೆ

ವಿರೋಧ ಪಕ್ಷದವರ ಜೊತೆ ಒಮ್ಮೆ ಚರ್ಚೆ ಮಾಡಿ ನಿರ್ಧಾರ ಕೈಗೊಳ್ಳಲಿದ್ದೇವೆ ಎಂದು ರೈತ ಸಂಘದ ನಿಯೋಗಕ್ಕೆ ಸಿಎಂ ಹೇಳಿದ್ದಾರೆ ಎಂದು ತಿಳಿದು ಬಂದಿದೆ.

ಇತರ ಬೇಡಿಕಗಳು:

  • ಕೃಷಿ ಬೆಲೆ ಆಯೋಗಕ್ಕೆ ಕಾನೂನಿನ ಮಾನ್ಯತೆ ನೀಡಬೇಕು.
  • ಆಯೋಗ ನಿಗಧಿಪಡಿಸಿದ ಬೆಲೆಯನ್ನು ರೈತರಿಗೆ ಕೊಡಬೇಕು.
  • ರಾಜ್ಯದ ನೆನೆಗುದಿಗೆ ಬಿದ್ದ ನೀರಾವರಿ ಯೋಜನೆಗಳಿಗೆ ಬಜೆಟ್​ನಲ್ಲಿ ಹೆಚ್ಚಿನ ಅನುದಾನ ನೀಡಬೇಕು. ಈ ಮೂಲಕ ಕಾಮಗಾರಿಗಳನ್ನು ತ್ವರಿತವಾಗಿ ಜಾರಿ ಮಾಡುವ ಕೆಲಸ ಮಾಡಬೇಕು.
  • ಕಾಮಗಾರಿ ಪ್ರಗತಿಯಲ್ಲಿರುವ ಭದ್ರಾ ಮೇಲ್ದಂಡೆ ಯೋಜನೆಗೆ 29.9 ಟಿಎಂಸಿ ನೀರನ್ನು ತುಂಗಾ‌ ನದಿಯಿಂದ ಕೊಡಬೇಕು. ಈ ಯೋಜನೆಯನ್ನು ರಾಷ್ಟ್ರೀಯ ಯೋಜನೆಯಾಗಿ ತೀರ್ಮಾನಿಸಿ, ಕಾಮಗಾರಿ ತಕ್ಷಣವೇ ಪೂರ್ಣಗೊಳಿಸಬೇಕು.
  • ವೈಜ್ಞಾನಿಕ ಬೆಲೆ ಮತ್ತು ಬೆಳೆ ನಷ್ಟ ಪರಿಹಾರ ಕೊಡದ ಕಾರಣ ರೈತರ ಎಲ್ಲ ಸಾಲಗಳನ್ನು ರದ್ದು ಮಾಡಬೇಕು.
  • ಕಾಡು ಪ್ರಾಣಿಗಳು, ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ, ಬೆಂಕಿ ಅನಾಹುತದಿಂದ ಬೆಳೆ ನಾಶವಾಗುವ ರೈತರ ಸಾಲ ಮನ್ನಾ ಮಾಡಬೇಕು.
  • ಈ ಬಾರಿ ಸಕ್ಕರೆಯ ಬೆಲೆ ಜಾಸ್ತಿ ಇರೋದ್ರಿಂದ ಕಬ್ಬಿನ ಪ್ರತಿ ಟನ್​​ಗೆ 4000 ರೂಪಾಯಿ ನಿಗದಿ ಪಡಿಸಬೇಕು, ಅಲ್ಲದೆ ಬಾಕಿ ಹಣವನ್ನು ತಕ್ಷಣವೇ ಬಿಡುಗಡೆ ಮಾಡಬೇಕು.
  • ಪ್ರಧಾನ ಮಂತ್ರಿಗಳ ಆತ್ಮ ನಿರ್ಭರ ಯೋಜನೆ ಯಡಿ, ಕೃಷಿ ಉತ್ಪನ್ನ ಸಂಸ್ಕರಣ ಘಟಕ ಗಳಿಗೆ ಆದ್ಯತೆ ಮೇಲೆ‌ ಹೆಚ್ಚು ಹಣ ನೀಡಬೇಕು ಹಾಗೂ ಸಬ್ಸಿಡಿ ಕೊಡಬೇಕು.
  • ದುಬಾರಿಯಾಗಿರುವ ರಸ ಗೊಬ್ಬರ ಬೆಲೆಗೆ ನಿಯಂತ್ರಣ ಹಾಕಿ, ರಸಗೊಬ್ಬರಕ್ಕೆ ಹೆಚ್ಚು ಸಬ್ಸಿಡಿ ನೀಡಲು ಕೇಂದ್ರಕ್ಕೆ ಒತ್ತಾಯಿಸಬೇಕು.
  • ಅನ್ನಭಾಗ್ಯ ಯೋಜನೆ ಗೆ ಬೇರೆ ರಾಜ್ಯದಿಂದ ಬರುವ ಅಕ್ಕಿಯನ್ನು ನಿಲ್ಲಿಸಿ, ನಮ್ಮ ರಾಜ್ಯದಲ್ಲಿ ಬೆಳೆದ ಭತ್ತವನ್ನು ಖರೀದಿ ಮಾಡಬೇಕು.
  • 50 ರೂಪಾಯಿ ಕೊಟ್ಟು ರೈತರಿಂದ ಹಾಲು ಖರೀದಿಸಬೇಕು. ಹಾಲು ಖರೀದಿಗೆ ಸಬ್ಸಿಡಿ ನೀಡಬೇಕು.
  • 60 ವರ್ಷ ಮೇಲ್ಪಟ್ಟ ರೈತರಿಗೆ ವೃದ್ಧಾಪ್ಯ ವೇತನ.

ಹೀಗೆ ಹಲವು ಬೇಡಿಕೆಗಳ ಬಗ್ಗೆ ಸಿಎಂ ಗೆ ರೈತ ನಿಯೋಗ ಮನವಿ ಮಾಡಿದೆ.

ABOUT THE AUTHOR

...view details