ಬೆಂಗಳೂರು: ಸರ್ಕಾರಿ ಅಧಿಕಾರಿಗಳು ಅಥವಾ ನೌಕರರು ತಮ್ಮ ಕರ್ತವ್ಯ ನಿರ್ವಹಿಸಲು ಸಾರ್ವಜನಿಕರಿಂದ ಲಂಚಕ್ಕೆ ಬೇಡಿಕೆಯಿಟ್ಟರೂ ಅದನ್ನು ಸ್ವೀಕರಿಸದೇ ಇದ್ದ ಸಂದರ್ಭದಲ್ಲಿ ಭ್ರಷ್ಟಾಚಾರ ಪ್ರಕರಣ ಎಂಬುದಾಗಿ ಪರಿಗಣಿಸಲು ಸಾಧ್ಯವಿಲ್ಲ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
ಪ್ರಕರಣದ ಹಿನ್ನೆಲೆ ಏನು?ಹೊಸದುರ್ಗದ ಡಿ.ಹೆಚ್.ಗುರುಪ್ರಸಾದ್ ಅವರಿಗೆ ಸಹಕಾರ ಸಂಘದಿಂದ 14 ಲಕ್ಷ ರೂ ಸಾಲ ಮಂಜೂರಾಗಿತ್ತು. ಇದಕ್ಕೆ ಭದ್ರತೆಗಾಗಿ ತಮಗೆ ಸೇರಿದ ಸ್ಥಿರಾಸ್ತಿಯನ್ನು ಅಡಮಾನ ಕ್ರಯವಾಗಿ ನೋಂದಣಿ ಮಾಡಿಕೊಡಲು ಕೋರಿದ್ದರು. ಅದರಂತೆ 2022ರ ಫೆ.24ರಂದ ಸ್ಥಿರಾಸ್ತಿಯನ್ನು ಅಡಮಾನ ಕ್ರಯವಾಗಿ ನೋಂದಣಿ ಮಾಡಲಾಗಿತ್ತು. ಇದಾದ 7 ದಿನಗಳ ನಂತರ ಗುರುಪ್ರಸಾದ್ ಎಸಿಬಿಗೆ ದೂರು ನೀಡಿ, ಅಡಮಾನ ಕ್ರಯ ನೋಂದಣಿ ಮಾಡಿಕೊಡಲು ಚಿತ್ರದುರ್ಗದ ಮುದ್ರಾಂಕ ಶುಲ್ಕ ಮತ್ತು ನೋಂದಣಿ ವಿಭಾಗದಲ್ಲಿ ಪ್ರಥಮ ದರ್ಜೆ ಸಹಾಯಕ ಮಂಜುನಾಥ್ ಅವರು ಐದು ಸಾವಿರ ರೂ. ಲಂಚಕ್ಕೆ ಬೇಡಿಕೆಯಿಟ್ಟಿದ್ದರು ಎಂದು ಆರೋಪಿಸಿದ್ದರು.
ಅದನ್ನು ಆಧರಿಸಿ ಚಿತ್ರದುರ್ಗದ ಎಸಿಬಿ ಪೊಲೀಸರು (ಲೋಕಾಯುಕ್ತ ಪೊಲೀಸರು) ಭ್ರಷ್ಟಾಚಾರ ನಿಯಂತ್ರಣಕಾಯ್ದೆ-1988ರ ಸೆಕ್ಷನ್ 7 (ಎ) ಅಡಿ ಮಂಜುನಾಥ್ ವಿರುದ್ಧ 2022ರ ಮಾ.2ರಂದು ದೂರು ದಾಖಲಿಸಿದ್ದರು. ದೂರಿನ ಮೇರೆಗೆ ಎಸಿಬಿ ನಾಲ್ಕು ಸಾವಿರ ರೂ. ಮೊತ್ತದ ನೋಟುಗಳನ್ನು ಗುರುಪ್ರಸಾದ್‌ಗೆ ನೀಡಿ, ಅವುಗಳನ್ನು ಮಂಜುನಾಥ್‌ಗ ನೀಡಲು ಸೂಚಿಸಲಾಗಿತ್ತು. 2022ರ ಮಾ.2 ರಂದು ಮಂಜುನಾಥ್ ಕಚೇರಿಯಲ್ಲಿ ಇರದ ಕಾರಣ ದಾಳಿ ನಡೆಸುವ ಪ್ರಯತ್ನ ವಿಫಲವಾಗಿತ್ತು. ಅದಾದ ಎರಡು ತಿಂಗಳ ಬಳಿಕ ಮತ್ತೆ ದಾಳಿಗೆ ಯೋಜಿಸಲಾಗಿತ್ತು. 2022ರ ಏ.4ರಂದು ಮಂಜುನಾಥ್ ಟೇಬಲ್ ಮೇಲೆ ಗುರುಪ್ರಸಾದ್ ನಾಲ್ಕು ಸಾವಿರು ರೂ. ಇಟ್ಟಿದ್ದರು. ಆಗ ಎಸಿಬಿ ದಾಳಿ ನಡೆಸಿ ಪ್ರಕರಣ ದಾಖಲಿಸಿಕೊಂಡಿತ್ತು. ಈ ಪ್ರಕರಣ ರದ್ದು ಕೋರಿ ಮಂಜುನಾಥ್ ಹೈಕೋರ್ಟ್‌ಗೆ ತಕರಾರು ಅರ್ಜಿ ಸಲ್ಲಿಸಿದ್ದರು.
ಲಂಚ ಸ್ವೀಕಾರ ಅಥವಾ ಲಂಚಕ್ಕೆ ಬೇಡಿಕೆಯಿಟ್ಟ ಪ್ರಕರಣದಲ್ಲಿ ಸರ್ಕಾರಿ ನೌಕರ ಕಾರ್ಯ ನಿರ್ವಹಿಸಲು ಲಂಚ ಸ್ವೀಕರಿಸಿರಬೇಕು. ಪ್ರಕರಣದಲ್ಲಿ ಹಣವನ್ನು ದೂರುದಾರರು ಮಂಜುನಾಥ್ ಟೇಬಲ್ ಮೇಲಿಟ್ಟಿದ್ದಾರೆ. ಹಣ ಸ್ವೀಕರಿಸುವಾಗ ಮಂಜುನಾಥ್ ಎಸಿಬಿಗೆ ಪ್ರತ್ಯಕ್ಷವಾಗಿ ಸಿಕ್ಕಿಬಿದ್ದಿಲ್ಲ. ಹಾಗಾಗಿ, ದಾಳಿ ವಿಫಲವಾಗಿದೆ ಎಂದರ್ಥ. ಇನ್ನೂ ಟೇಬಲ್ ಮೇಲೆ ಹಣ ಪತ್ತೆಯಾಗಿದೆ ಎಂಬ ಆಧಾರದ ಮೇಲೆ ತನಿಖಾಧಿಕಾರಿಗಳು, ಹಣ ಸ್ವೀಕರಿಸಿದ ಆರೋಪದಲ್ಲಿ ಮಂಜುನಾಥ್ ಅವರನ್ನು ದೋಷಿಯನ್ನಾಗಿಸಿದ್ದಾರೆ. ಆದರೆ 2022ರ ಫೆ.24ರಂದು ಅಡಮಾನ ಕ್ರಯ ನೋಂದಣಿ ಮಾಡಿದ್ದು, ಅಂದೇ ದಾಖಲೆ ಕಳುಹಿಸಿಕೊಡಲಾಗಿದೆ, ನಂತರ ಮಂಜುನಾಥ್ ಮುಂದೆ ಯಾವುದೇ ಕೆಲಸ ಬಾಕಿಯಿರಲಿಲ್ಲ. ಇದಾದ 15 ದಿನಗಳ ನಂತರ ದೂರು ದಾಖಲಿಸಲಾಗಿದೆ. ಹಾಗಾಗಿ, ಅರ್ಜಿದಾರರ ವಿರುದ್ಧದ ಪ್ರಕರಣ ಮುಂದುವರಿಸಿದರೆ ಕಾನೂನು ಪ್ರಕ್ರಿಯೆ ದುರ್ಬಳಕೆ ಮತ್ತು ನ್ಯಾಯದಾನ ವೈಫಲ್ಯ ಕಾಣುತ್ತದೆ ಎಂದು ಅಭಿಪ್ರಾಯಪಟ್ಟ ಹೈಕೋರ್ಟ್, ಮಂಜುನಾಥ್ ವಿರುದ್ಧದ ದೂರು ರದ್ದುಪಡಿಸಿದೆ.
ಇದನ್ನೂ ಓದಿ: ಲಂಚ ಸ್ವೀಕರಿಸುವ ವೇಳೆ ರೆಡ್ಹ್ಯಾಂಡಾಗಿ ಬಲೆಗೆ ಬಿದ್ದ ಇಂಜಿನಿಯರ್.. ರಾಶಿ ರಾಶಿ ಹಣ ವಶಕ್ಕೆ