ಬೆಂಗಳೂರು : ಬರ್ಮಿಂಗ್ ಹ್ಯಾಮ್ನಲ್ಲಿ 2023ರ ಅಂತಾರಾಷ್ಟ್ರೀಯ ಅಂಧರ ಕ್ರೀಡಾ ಫೆಡರೇಶನ್ (ಐಬಿಎಸ್ಎ) ವಿಶ್ವ ಗೇಮ್ಸ್ ನಡೆಯಲಿದೆ. ಈ ಹಿನ್ನೆಲೆ ಭಾರತವನ್ನು ಪ್ರತಿನಿಧಿಸಲಿರುವ ಭಾರತೀಯ ಅಂಧರ ಕ್ರಿಕೆಟ್ ತಂಡಗಳ ಪುರುಷರು ಮತ್ತು ಮಹಿಳೆಯರ ನಾಯಕರ ಹೆಸರನ್ನು ಕ್ರಿಕೆಟ್ ಅಸೋಸಿಯೇಷನ್ ಫಾರ್ ದಿ ಬ್ಲೈಂಡ್ ಇನ್ ಇಂಡಿಯಾ (ಸಿಎಬಿಐ) ಗುರುವಾರ ಪ್ರಕಟಿಸಿದೆ.
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪುರುಷರ ಕ್ರಿಕೆಟ್ ತಂಡದ ನಾಯಕನಾಗಿ ಅಜಯ್ ಕುಮಾರ್ ರೆಡ್ಡಿ ಇಲ್ಲೂರಿ ಮತ್ತು ವೆಂಕಟೇಶ್ವರ ರಾವ್ ದುನ್ನಾ ಅವರನ್ನು ಉಪನಾಯಕರನ್ನಾಗಿ ಆಯ್ಕೆ ಮಾಡಲಾಗಿದೆ. ಬಿ 2 ವಿಭಾಗದ ಇಬ್ಬರೂ ಆಟಗಾರರು ಆಂಧ್ರಪ್ರದೇಶ ಮೂಲದವರಾಗಿದ್ದಾರೆ. ಕರ್ನಾಟಕ ಮೂಲದ ವರ್ಷಾ ಉಮಾಪತಿ (ಬಿ1 ವಿಭಾಗ) ಮಹಿಳಾ ಕ್ರಿಕೆಟ್ ತಂಡ ನಾಯಕಿಯಾಗಿ, ಒಡಿಶಾದ ಫುಲಾ ಸರನ್ (ಬಿ 3 ವಿಭಾಗ) ರನ್ನು ತಂಡದ ಉಪನಾಯಕಿಯಾಗಿ ನೇಮಿಸಲಾಗಿದೆ. ಈ ಸಂದರ್ಭದಲ್ಲಿ ಪುರುಷರ ಮತ್ತು ಮಹಿಳಾ ತಂಡಗಳ ಜರ್ಸಿಗಳನ್ನು ಕ್ರಿಕೆಟ್ ಅಸೋಸಿಯೇಷನ್ ಫಾರ್ ದಿ ಬ್ಲೈಂಡ್ ಇನ್ ಇಂಡಿಯಾ ಅನಾವರಣಗೊಳಿಸಿತು.
ವಿಶ್ವ ಕ್ರೀಡಾಕೂಟಕ್ಕೆ ಮುಂಚಿತವಾಗಿ ಈ ಘೋಷಣೆಯ ಬಗ್ಗೆ ಮಾತನಾಡಿದ ಸಿಎಬಿಐ ಅಧ್ಯಕ್ಷ ಬುಸೇಗೌಡ, ಐಬಿಎಸ್ಎ ವಿಶ್ವ ಕ್ರೀಡಾಕೂಟದಲ್ಲಿ ಭಾಗವಹಿಸಲು ಭಾರತೀಯ ಮಹಿಳಾ ಮತ್ತು ಪುರುಷರ ಕ್ರಿಕೆಟ್ ತಂಡಗಳು ಬರ್ಮಿಂಗ್ ಹ್ಯಾಮ್ ಗೆ ಪ್ರಯಾಣಿಸುತ್ತಿದೆ. ಈ ಕುರಿತು ಅಧ್ಯಕ್ಷನಾಗಿ ಮೊದಲ ಮಾಧ್ಯಮಗೋಷ್ಟಿಯನ್ನುದ್ದೇಶಿಸಿ ಮಾತನಾಡಲು ನನಗೆ ಸಂತೋಷ ಮತ್ತು ಹೆಮ್ಮೆಯಾಗುತ್ತಿದೆ. ವಿಶ್ವ ಕ್ರೀಡಾಕೂಟದಲ್ಲಿ ಮೊದಲ ಬಾರಿಗೆ ಅಂಧರ ಕ್ರಿಕೆಟ್ ಸೇರಿಸಿದ್ದಕ್ಕಾಗಿ ನಾವು ಐಬಿಎಸ್ಎಗೆ ಕೃತಜ್ಞರಾಗಿದ್ದೇವೆ. ದೇಶವನ್ನು ಪ್ರತಿನಿಧಿಸಲು ಮತ್ತು ವಿಶ್ವ ಚಾಂಪಿಯನ್ ಆಗಿ ಮುಂದುವರಿಯಲು ಆಟಗಾರರಿಗೆ ಇದು ಅತ್ಯುತ್ತಮ ಅವಕಾಶವಾಗಿದೆ ಎಂದರು.
ಇದೆ ವೇಳೆ ಸಿಎಬಿಐ ಸಂಸ್ಥಾಪಕ ಅಧ್ಯಕ್ಷ ಡಾ. ಮಹಾಂತೇಶ ಜಿ. ಕಿವಡಸಣ್ಣವರ್ ಮಾತನಾಡಿ, ವಿಶ್ವ ಕ್ರೀಡಾಕೂಟದಲ್ಲಿ ಪುರುಷರ ಮತ್ತು ಮಹಿಳಾ ತಂಡಗಳು ಭಾಗವಹಿಸುತ್ತಿರುವುದು ಇದೇ ಮೊದಲು. ಕಳೆದ 10 ವರ್ಷಗಳಲ್ಲಿ ಭಾರತೀಯ ಪುರುಷರ ಅಂಧರ ತಂಡವು 3 ಟಿ-20 ವಿಶ್ವಕಪ್, 2 ಏಕದಿನ ವಿಶ್ವಕಪ್ ಮತ್ತು ಒಂದು ಏಷ್ಯಾ ಕಪ್ ಗೆದ್ದಿದೆ. ಬರ್ಮಿಂಗ್ ಹ್ಯಾಮ್ನಲ್ಲಿ ದೇಶದ ಧ್ವಜವನ್ನು ಎತ್ತರಕ್ಕೆ ಹಾರಿಸುವ ಸರದಿ ಈಗ ಪುರುಷರ ತಂಡದೊಂದಿಗೆ ಮಹಿಳಾ ತಂಡದದ್ದಾಗಿದೆ ಎಂದರು.
ಐತಿಹಾಸಿಕ ಚಾಂಪಿಯನ್ ಶಿಪ್ನಲ್ಲಿ ತಂಡವನ್ನು ಮುನ್ನಡೆಸಲು ಅವಕಾಶ ನೀಡಿದ ಸಿಎಬಿಐಗೆ ಭಾರತೀಯ ಮಹಿಳಾ ಅಂಧರ ಕ್ರಿಕೆಟ್ ತಂಡದ ನಾಯಕಿ ವರ್ಷಾ ಕೃತಜ್ಞತೆ ಸಲ್ಲಿಸಿದರು. ಭಾರತೀಯ ಪುರುಷರ ಅಂಧರ ಕ್ರಿಕೆಟ್ ತಂಡದ ನಾಯಕ ಅಜಯ್ ಕುಮಾರ್ ರೆಡ್ಡಿ ಪಂದ್ಯಾವಳಿಯ ಸಿದ್ಧತೆ ಮತ್ತು ಐಬಿಎಸ್ಎ ವಿಶ್ವ ಕ್ರೀಡಾಕೂಟದಲ್ಲಿ ಸ್ಪರ್ಧಾತ್ಮಕ ಕ್ರಿಕೆಟ್ ಆಡಲು ತಂಡವು ಹೇಗೆ ಉತ್ಸುಕವಾಗಿದೆ ಎಂದು ಹೇಳಿದರು.