ಬೆಂಗಳೂರು: ಭೂ ವ್ಯಾಜ್ಯಕ್ಕೆ ಸಂಬಂಧಿಸಿದ ಲಂಚ ಪ್ರಕರಣದಲ್ಲಿ ಶಾಮೀಲಾದ ಆರೋಪ ಪ್ರಕರಣದಲ್ಲಿ ಬಂಧನಕ್ಕೊಳಗಾಗಿ ಸೇವೆಯಿಂದ ಅಮಾನತುಗೊಂಡಿರುವ ಬೆಂಗಳೂರು ನಗರದ ಜಿಲ್ಲಾಧಿಕಾರಿಯಾಗಿದ್ದ ಐಎಎಸ್ ಅಧಿಕಾರಿ ಜೆ.ಮಂಜುನಾಥ್ ಅವರಿಗೆ ಇಲ್ಲಿನ ವಿಶೇಷ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.
ಆರೋಪಿ ಮಂಜುನಾಥ್ ಅವರ ಜಾಮೀನು ಅರ್ಜಿ ವಿಚಾರಣೆ ನಡೆಸಿದ ವಿಶೇಷ ನ್ಯಾಯಾಲಯದ ನ್ಯಾಯಾಧೀಶರು ಶನಿವಾರ ಷರತ್ತುಬದ್ಧ ಜಾಮೀನು ನೀಡಿದ್ದಾರೆ. ಭ್ರಷ್ಟಾಚಾರ ನಿಯಂತ್ರಣ ಸಂಸ್ಥೆಯು (ಎಸಿಬಿ) ನಿಗದಿತ 60 ದಿನಗಳಲ್ಲಿ ಲಂಚ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪ ಪಟ್ಟಿ ಸಲ್ಲಿಸಬೇಕು. ಆದರೆ, ತನಿಖಾಧಿಕಾರಿಗಳು ಆರೋಪ ಪಟ್ಟಿ ಸಲ್ಲಿಸದ ಹಿನ್ನೆಲೆಯಲ್ಲಿ ಜಾಮೀನು ಮಂಜೂರು ಮಾಡಲಾಗಿದೆ ಎಂದು ನ್ಯಾಯಾಲಯ ಆದೇಶದಲ್ಲಿ ತಿಳಿಸಿದೆ. ತನಿಖಾಧಿಕಾರಿಯ ಅನುಮತಿ ಪಡೆಯದೇ 6 ತಿಂಗಳು ರಾಜ್ಯ ತೊರೆಯುವಂತಿಲ್ಲ. ನ್ಯಾಯಾಲಯದ ಅನುಮತಿ ಪಡೆಯದೇ ಆರು ತಿಂಗಳು ದೇಶ ತೊರೆಯುವಂತಿಲ್ಲ ಎಂಬ ಷರತ್ತುಗಳನ್ನು ವಿಧಿಸಲಾಗಿದೆ.
ಆನೇಕಲ್ ತಾಲೂಕಿನ ಜಮೀನು ವಿವಾದದ ಭ್ರಷ್ಟಾಚಾರ ಪ್ರಕರಣದಲ್ಲಿ ಹೈಕೋರ್ಟ್ ನಿರ್ದೇಶನದಂತೆ ಬೆಂಗಳೂರು ನಗರ ಜಿಲ್ಲಾಧಿಕಾರಿಯಾಗಿದ್ದ ಜೆ ಮಂಜುನಾಥ್ ಅವರನ್ನು ಎಸಿಬಿ ಆರೋಪಿಯನ್ನಾಗಿ ಉಲ್ಲೇಖಿಸಿತ್ತು. ಇದೇ ಪ್ರಕರಣದಲ್ಲಿ ಆರೋಪಿಯಾಗಿದ್ದ ಜಿಲ್ಲಾಧಿಕಾರಿ ಕಚೇರಿಯ ಉಪ ತಹಶೀಲ್ದಾರ್ ಪಿ.ಎಸ್.ಮಹೇಶ್ ಸಲ್ಲಿಸಿದ್ದ ಜಾಮೀನು ಅರ್ಜಿ ವಿಚಾರಣೆ ಸಂದರ್ಭದಲ್ಲಿ ಹೈಕೋರ್ಟ್ ಏಕ ಸದಸ್ಯ ಪೀಠದ ನ್ಯಾಯಮೂರ್ತಿ ಹೆಚ್.ಪಿ.ಸಂದೇಶ್ ಅವರು ಎಸಿಬಿ ಕಾರ್ಯವೈಖರಿ ಬಗ್ಗೆ ತೀವ್ರ ಅತೃಪ್ತಿ ವ್ಯಕ್ತಪಡಿಸಿದ್ದರು. "ಎಸಿಬಿಯೇ ದೊಡ್ಡ ಭ್ರಷ್ಟರ ಕೂಪವಾಗಿದೆ. ಅದರ ಕಚೇರಿಗಳು ಕಲೆಕ್ಷನ್ ದಂಧೆಯ ಕೇಂದ್ರಗಳಾಗಿವೆ" ಎಂದು ಕಿಡಿ ಕಾರಿದ್ದರು.
ಹೈಕೋರ್ಟ್ನ ತೀವ್ರ ತರದ ಟೀಕೆ ನಂತರ ಎಸಿಬಿಯು ಜೆ.ಮಂಜುನಾಥ್ ಅವರ ಮೇಲೆ ದಾಳಿ ನಡೆಸಿ ಬಂಧಿಸಿತ್ತು. ಈ ಬಂಧನವನ್ನು ಪ್ರಶ್ನಿಸಿ ಮಂಜುನಾಥ್ ಅವರು ಸಿಟಿ ಸಿವಿಲ್ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿ ತಮಗೆ ಜಾಮೀನು ನೀಡುವಂತೆ ನ್ಯಾಯಾಲಯವನ್ನು ಕೋರಿದ್ದರು. ಜಾಮೀನು ಅರ್ಜಿ ತಿರಸ್ಕರಿಸಿರುವ ಕೆಳ ನ್ಯಾಯಾಲಯದ ಆದೇಶ ಪ್ರಶ್ನಿಸಿದ ಜೆ.ಮಂಜುನಾಥ್ ಅವರು ಹೈಕೋರ್ಟ್ಗೆ ಮೊರೆ ಹೋಗಿದ್ದರು.
ಇದನ್ನೂ ಓದಿ:ಐಎಎಸ್ ಅಧಿಕಾರಿ ಮಂಜುನಾಥ್ ಜಾಮೀನು ಅರ್ಜಿ: ಆಕ್ಷೇಪಣೆ ಸಲ್ಲಿಸಲು ಎಸಿಬಿಗೆ ಹೈಕೋರ್ಟ್ ಆದೇಶ