ಬೆಂಗಳೂರು :ನಾನು ಎಲ್ಲಿಗೂ ಹೋಗಲ್ಲ. ಬಿಜೆಪಿಯಲ್ಲೇ ಇರುತ್ತೇನೆ. ಟಿಕೆಟ್ ಕೊಟ್ರೆ ಸ್ಪರ್ಧೆ ಮಾಡುತ್ತೇನೆ ಎಂದು ಸಚಿವ ವಿ. ಸೋಮಣ್ಣ ಸ್ಪಷ್ಟಪಡಿಸಿದರು. ಕಾವೇರಿ ಭವನದಲ್ಲಿ ಮಾಧ್ಯಮಗೋಷ್ಟಿ ಉದ್ದೇಶಿಸಿ ಮಾತನಾಡಿದ ಅವರು, ಪಕ್ಷ ತೊರೆಯುವ ಬಗ್ಗೆ ಇದ್ದ ಊಹಾಪೋಹದ ಬಗ್ಗೆ ಸ್ಪಷ್ಟನೆ ನೀಡುತ್ತ, ಪ್ರಧಾನಿ ಅವರು ಉತ್ತಮ ಮಾರ್ಗದಲ್ಲಿ ನಡೆಯುತ್ತಿದ್ದಾರೆ. ರಾಜ್ಯದಲ್ಲಿನ ನಮ್ಮ ಗೊಂದಲಗಳಿಗೆ ಇತಿಶ್ರೀ ಹಾಡೋಣ. ಬಿಜೆಪಿಯಲ್ಲೇ ಮುಂದುವರೆಯುತ್ತೇನೆ. ಇನ್ಮುಂದೆ ನಾನು ಮುಖ್ಯಮಂತ್ರಿಗಳಿಗೆ ಅಗೌರವ ತರುವ ರೀತಿ ನಡೆದುಕೊಳ್ಳಲ್ಲ. ಪಕ್ಷ ಹೇಳಿದ್ರೆ ಚುನಾವಣೆಗೆ ನಿಲ್ತೀನಿ. ಇಲ್ಲ ಅಂದರೆ ಪಕ್ಷದ ಪರವಾಗಿ ಕೆಲಸ ಮಾಡುತ್ತೇನೆ ಎಂದು ತಿಳಿಸಿದರು.
ನನ್ನ ಮಗ ಏನೋ ಆಗಬೇಕು ಅನ್ನೋ ಆಸೆ ನನಗಿಲ್ಲ. ನಮ್ಮಪ್ಪ ತಪ್ಪು ಮಾಡಿದ್ರು ತಪ್ಪೇ. ನನ್ನ ಮಗ ಏನಾದರೂ ಪಕ್ಷದ ವಿರುದ್ಧ ನಡೆದುಕೊಂಡ್ರೆ, ಅವನ ವಿರುದ್ಧ ಪಕ್ಷ ಶಿಸ್ತು ಕ್ರಮ ಕೈಗೊಳ್ಳಲಿ. ಪಕ್ಷಕ್ಕೆ ನಾನು ಆಗಲಿ, ನನ್ನ ಪುತ್ರನಿಂದ ಆಗಲಿ ಮುಜುಗರ ತರುವುದಿಲ್ಲ. ಪಕ್ಷದ ತೀರ್ಮಾನಕ್ಕೆ ನಾನು ಬದ್ಧ. ಟಿಕೆಟ್ ಕೊಟ್ರೆ ಸ್ಪರ್ಧೆ ಮಾಡ್ತೇನೆ, ಇಲ್ಲದಿದ್ರೆ ಸುಮ್ಮನಾಗ್ತೇನೆ. ನಾನು ಈಗಾಗಲೇ ಹಲವು ಬಾರಿ ಸ್ಪರ್ಧೆ ಮಾಡಿದ್ದೇನೆ ಎಂದು ಹೇಳಿದರು.
ಮಾಜಿ ಸಿಎಂ ಯಡಿಯೂರಪ್ಪ, ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ ವೈ ವಿಜಯೇಂದ್ರ ವಿರುದ್ಧ ಅರುಣ್ ಸೋಮಣ್ಣ ವಾಗ್ದಾಳಿ ವಿಚಾರವಾಗಿ ಪ್ರತಿಕ್ರಿಯಿಸುತ್ತ, ನನ್ನ ಮಗ ಡಾಕ್ಟರ್. ಅವನಿಗೆ 47 ವರ್ಷ. ಸಣ್ಣ ಮಗು ಅಲ್ಲ. ಕೆಲಸವನ್ನು ಸ್ವೀಕಾರ ಮಾಡಬೇಕು. ರಾಜಕೀಯದಲ್ಲಿ ಯಾರಿಗೆ ಯಾರೂ ಶತ್ರು ಅಲ್ಲ. ಯಾರೂ ಈ ರೀತಿ ಮಾಡಬಾರದು. ವಿಜಯಸಂಕಲ್ಪ ಯಾತ್ರೆ ಶುರುವಾಗಿದೆ. ಬಿಜೆಪಿಯಲ್ಲಿ ಯಾವುದೇ ಗೊಂದಲ ಇಲ್ಲ. ನಾನು ಮಂತ್ರಿ ಆಗಿದ್ದೇನೆ. ಬೊಮ್ಮಾಯಿ ನೇತೃತ್ವದಲ್ಲಿ ಚುನಾವಣೆಗೆ ಹೋಗೋದು ಅಂತಿದೆ. ಪ್ರಧಾನಿ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ನಡ್ಡಾ ನಮ್ಮ ನಾಯಕರು. ನಾವು ಚುನಾವಣೆ ಎದುರಿಸ್ತೇವೆ ಎಂದು ಸ್ಪಷ್ಟಪಡಿಸಿದರು.
ಕಣ್ಣೀರು ಹಾಕಿದ ವಿ. ಸೋಮಣ್ಣ :ಮಾಧ್ಯಮಗೋಷ್ಟಿ ವೇಳೆ ಸಚಿವ ವಿ. ಸೋಮಣ್ಣ ಕಣ್ಣೀರು ಹಾಕಿದ ಘಟನೆ ನಡೆಯಿತು. ನಾನು ಬೆಂಗಳೂರಿಗೆ ಬಂದಿದ್ದು ಹೊಟ್ಟೆ ಪಾಡಿಗೆ. ನನ್ನ ಜೀವನವನ್ನು ನಾನೇ ರೂಪಿಸಿಕೊಂಡಿದ್ದೇನೆ. ಸಂಜೆ ಕಾಲೇಜಿನಲ್ಲಿ ಓದಿದ್ದೇನೆ. ಕಸ್ತೂರಿ ಮಾತ್ರೆ ಮಾರಿದ್ದೇನೆ. ಆರಡಿ ಎಂಟಡಿ ರೂಮ್ ನಲ್ಲಿ 16 ವರ್ಷ ವಾಸಿಸಿದ್ದೇನೆ ಎಂದು ಭಾವುಕರಾಗಿ ನುಡಿದರು.
ಸ್ವಾಭಿಮಾನಕ್ಕೆ ಧಕ್ಕೆ ಆದಾಗ ನಾನು ಸುಮ್ಮನೆ ಇರೋನಲ್ಲ. ಸುಳ್ಳು ಹೇಳಿ ನಾನು ನನ್ನ ಜೀವನ ಮಾಡಲ್ಲ. ನಮ್ಮ ತಾಯಿ ತಂದೆ ನನಗೆ ಸಂಸ್ಕಾರ ಕಲಿಸಿ ಕೊಟ್ಟಿದ್ದಾರೆ. ನಾನು ಯಾರ ಮುಲಾಜಲ್ಲೂ ಬದುಕಿಲ್ಲ. ಅನಾವಶ್ಯಕವಾಗಿ ಇನ್ನೊಬ್ಬರ ತೇಜೋವಧೆ ಮಾಡೋದು ಒಳ್ಳೆಯದಲ್ಲ ಎಂದು ಕಣ್ಣೀರು ಹಾಕಿದರು.