ಕರ್ನಾಟಕ

karnataka

ETV Bharat / state

ನಿತ್ಯ ಕಾಂಗ್ರೆಸ್ ಶಾಸಕರು, ಕಾರ್ಯಕರ್ತರ ಭೇಟಿಗೆ ಸಮಯಾವಕಾಶ ನೀಡುತ್ತೇನೆ: DCM ಡಿ.ಕೆ ಶಿವಕುಮಾರ್

ಪ್ರತಿದಿನ ಪಕ್ಷದ ಶಾಸಕರು ಹಾಗೂ ಕಾರ್ಯಕರ್ತರ ಭೇಟಿಗೆ ಸಮಯಾವಕಾಶ ನೀಡುತ್ತೇನೆ ಎಂದು ಡಿಸಿಎಂ ಹೇಳಿದ್ದಾರೆ.

ಡಿಸಿಎಂ ಡಿ.ಕೆ ಶಿವಕುಮಾರ್
ಡಿಸಿಎಂ ಡಿ.ಕೆ ಶಿವಕುಮಾರ್

By ETV Bharat Karnataka Team

Published : Nov 9, 2023, 3:28 PM IST

ಬೆಂಗಳೂರು: ನಿತ್ಯ ಬೆಳಗ್ಗೆ 10 ರಿಂದ 10.30ರವರೆಗೆ ಪಕ್ಷದ ಶಾಸಕರು ಹಾಗೂ ಕಾರ್ಯಕರ್ತರ ಭೇಟಿಗೆ ಸಮಯ ನೀಡುತ್ತೇನೆ ಎಂದು ಡಿಸಿಎಂ ಡಿ.ಕೆ ಶಿವಕುಮಾರ್ ತಿಳಿಸಿದರು. ಸದಾಶಿವನ‌ಗರದಲ್ಲಿನ ತಮ್ಮ ನಿವಾಸದಲ್ಲಿ ಮಾತನಾಡಿದ ಅವರು, ತಮ್ಮ ಕ್ಷೇತ್ರದಲ್ಲಿನ ಕೆಲಸ ಹಾಗೂ ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳಲು ಅವರಿಗೆ ಅವಕಾಶ ನೀಡಲಾಗುವುದು. ಹೊರಗಡೆ ಹೋಗುವ ದಿನಗಳ ಹೊರತಾಗಿ ಬೆಂಗಳೂರಿನಲ್ಲಿರುವ ಎಲ್ಲ ದಿನ ಸಮಯಾವಕಾಶ ನೀಡಲಾಗುವುದು ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.

ಕಾಂಗ್ರೆಸ್ ಶಾಸಕರ ವಿಶ್ವಾಸ ಗಳಿಸಲು ಹಾಗೂ ಪಕ್ಷದಲ್ಲಿನ ಅಸಮಾಧಾನ ಹಾಗೂ ಸಚಿವರು ಸ್ಪಂದಿಸದೇ ಇರುವ ಬಗ್ಗೆ ಪದೇ ಪದೆ ದೂರುಗಳು ಕೇಳಿ ಬರುತ್ತಿರುವ ಮಧ್ಯೆ ಡಿಸಿಎಂ ಡಿ.ಕೆ.ಶಿವಕುಮಾರ್ ಈ ನಡೆ ಬಹಳ ಕುತೂಹಲ ಮೂಡಿಸಿದೆ. ನಾಯಕತ್ವ ಗಲಾಟೆ, ಸಿಎಂ ಹುದ್ದೆ ತಿಕ್ಕಾಟ, ಭಿನ್ನಮತದ ಮಧ್ಯೆ ಕೈ ಶಾಸಕರು ಹಾಗೂ ಕಾರ್ಯಕರ್ತರಿಗೆ ಸಮಯಾವಕಾಶ ನೀಡುತ್ತಿರುವುದು ಅಚ್ಚರಿ ಮೂಡಿಸಿದೆ.

ಶಾಸಕರ ವಿಶ್ವಾಸ ಗಳಿಸುವ ಭಾಗವಾಗಿ ಇಂದು ಡಿಸಿಎಂ ಡಿ ಕೆ ಶಿವಕುಮಾರ್ ಅವರು ಸದಾಶಿವನಗರದ ತಮ್ಮ ನಿವಾಸದಲ್ಲಿ ಸಚಿವರಾದ ಶಿವಾನಂದ್ ಪಾಟೀಲ್, ಸಂತೋಷ್ ಲಾಡ್, ಸಿಎಲ್ಪಿ ಕಾರ್ಯದರ್ಶಿ ತುಕಾರಾಮ್, ಶಾಸಕರಾದ ಜಿ ಎಸ್ ಪಾಟೀಲ್, ತರೀಕೆರೆ ಶ್ರೀನಿವಾಸ್, ಶಾಂತನಗೌಡ, ದರ್ಶನ್ ಧ್ರುವನಾರಾಯಣ್, ರವಿಶಂಕರ್, ಮಾನಪ್ಪ ವಜ್ಜಲ್, ಡಾ ರಂಗನಾಥ್, ಎಂಎಲ್ಸಿ ಸುನಿಲ್ ಪಾಟೀಲ್, ಮಾಜಿ ಸಚಿವರಾದ ಬಾಬುರಾವ್ ಚಿಂಚನಸೂರ್, ಶಿವರಾಮ್, ಮಾಜಿ ಶಾಸಕ ಕಳಲೆ ಕೇಶವಮೂರ್ತಿ ಅವರನ್ನು ಗುರುವಾರ ಭೇಟಿ ಮಾಡಿದರು.

ದೆಹಲಿ ಭೇಟಿ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ಕಾವೇರಿ ನೀರು ಬಳಕೆ ವಿಚಾರವಾಗಿ ಸುಪ್ರೀಂ ಕೋರ್ಟ್ 2018ರಲ್ಲಿ ಕೊಟ್ಟ ತೀರ್ಮಾನ ಅನುಸಾರ ಬೆಂಗಳೂರಿಗೆ 24 ಟಿಎಂಸಿ ನೀರು ಬಳಸಿಕೊಳ್ಳಲು ವ್ಯವಸ್ಥೆ ಮಾಡಲು ಆದೇಶ ನೀಡಲಾಗಿದೆ. ಇನ್ನು ಪಕ್ಷದಲ್ಲಿ ಯಾರೆಲ್ಲಾ 3ಕ್ಕಿಂತ ಹೆಚ್ಚು ವರ್ಷಗಳಿಂದ ಪದಾಧಿಕಾರಿಗಳಾಗಿದ್ದಾರೆ ಅವರ ಸ್ಥಾನಕ್ಕೆ ಬೇರೆಯವರಿಗೆ ಅವಕಾಶ ನೀಡಬೇಕು ಎಂಬ ಚರ್ಚೆ ಆಗಿದೆ. ಇನ್ನು ಲೋಕಸಭೆ ಅಭ್ಯರ್ಥಿಗಳ ಆಯ್ಕೆ ವಿಚಾರವಾಗಿ ಶೇ.75ರಷ್ಟು ಮಂತ್ರಿಗಳು ತಮ್ಮ ಜಿಲ್ಲೆಗಳಿಗೆ ಹೋಗಿ ಸಭೆ ಮಾಡಿದ್ದಾರೆ, ಉಳಿದವರು ಸಭೆ ಮಾಡಿ ಆದಷ್ಟು ಬೇಗ ತಮ್ಮ ವರದಿ ನೀಡಲಿದ್ದಾರೆ ಎಂದರು.

ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ರಾಜರಾಜೇಶ್ವರಿ ನಗರ ಕ್ಷೇತ್ರದಲ್ಲಿ ಸ್ಥಗಿತಗೊಂಡಿರುವ ಕಾಮಗಾರಿಗಳ ಪರಿಶೀಲನೆ ಬಗ್ಗೆ ಪ್ರತಿಕ್ರಿಯಿಸಿದ ಡಿಸಿಎಂ, "ಬಹಳ ಸಂತೋಷ. ಅವರು ಅಲ್ಲಿಗೆ ಹೋಗಲಿ. ಅವರಿಗೆ ಬೇಕಾದರೆ ಲೋಕಾಯುಕ್ತ ವರದಿಗಳನ್ನು ಕಳುಹಿಸಿಕೊಡುತ್ತೇನೆ" ಎಂದು ಇದೇ ವೇಳೆ ಹೇಳಿದರು.

ಇದನ್ನೂ ಓದಿ:ಮೈಸೂರು: ಸಿಎಂ ನಿವಾಸದೆದುರು ಪ್ರತಿಭಟನೆಗೆ ಮುಂದಾದ ರೈತರು: ಹಲವರು ಪೊಲೀಸ್ ವಶಕ್ಕೆ

ABOUT THE AUTHOR

...view details