ಬೆಂಗಳೂರು:ಹೊಸಕೋಟೆಯಲ್ಲಿ ಉಪಚುನಾವಣೆ ನಡೆದರೆ ನಾನೇ ಚುನಾವಣೆಗೆ ನಿಲ್ಲುತ್ತೇನೆ, ಆದರೆ ಯಾವ ಪಕ್ಷದಿಂದ ಅಂತಾ ಇನ್ನೂ ನಿರ್ಧಾರ ಮಾಡಿಲ್ಲ ಎಂದು ಅನರ್ಹ ಶಾಸಕ ಎಂಟಿಬಿ ನಾಗರಾಜ್ ಸ್ಪಷ್ಟಪಡಿಸಿದ್ದಾರೆ.
ಬೆಳಗಾವಿ ಜಿಲ್ಲಾ ನೆರೆಪೀಡಿತ ಪ್ರದೇಶಗಳ ಭೇಟಿ ಮುಕ್ತಾಯಗೊಳಿಸಿ ಬೆಂಗಳೂರಿಗೆ ಸಿಎಂ ಬಿ.ಎಸ್.ಯಡಿಯೂರಪ್ಪ ವಾಪಸ್ಸಾಗುತ್ತಿದ್ದಂತೆ ಅನರ್ಹ ಶಾಸಕ ಎಂಟಿಬಿ ನಾಗರಾಜ್ ಮುಖ್ಯಮಂತ್ರಿಗಳನ್ನು ಭೇಟಿಯಾದರು. ಡಾಲರ್ಸ್ ಕಾಲೋನಿ ನಿವಾಸದಲ್ಲಿ ಭೇಟಿಯಾಗಿ ಕೆಲಕಾಲ ಸಮಾಲೋಚನೆ ನಡೆಸಿದರು.
ಸಿಎಂ ಭೇಟಿ ಬಳಿಕ ಮಾತನಾಡಿದ ಅನರ್ಹ ಶಾಸಕ ಎಂ.ಟಿ.ಬಿ ನಾಗರಾಜ್, ಹೊಸಕೋಟೆ ಉಪಚುನಾವಣೆಯಲ್ಲಿ ಸ್ಪರ್ಧೆ ಮಾಡುವ ಹೇಳಿಕೆ ನೀಡುವ ಮೂಲಕ ಮತ್ತೆ ಚುನಾವಣೆಗೆ ನಿಲ್ಲೋ ನಿರ್ಧಾರ ಪ್ರಕಟಿಸಿದರು.
ಹೊಸಕೋಟೆ ವಿಧಾನಸಭಾ ಕ್ಷೇತ್ರದಲ್ಲಿ ಮತ್ತೆ ನಾನೇ ಚುನಾವಣೆಗೆ ನಿಲ್ಲುತ್ತೇನೆ ಇದರಲ್ಲಿ ಯಾವುದೇ ಅನುಮಾನ ಬೇಡ. ಒಂದು ವೇಳೆ ಕೋರ್ಟ್‌ನಿಂದ ತೀರ್ಪು ಬರಲಿಲ್ಲ ಅಂದರೆ ನನ್ನ ಮಗನನ್ನ ನಿಲ್ಲಿಸುತ್ತೇನೆ. ಆದರೆ ಯಾವ ಪಕ್ಷದಿಂದ ನಿಲ್ಲಬೇಕು ಅಂತಾ ನಿರ್ಧಾರ ಮಾಡಿಲ್ಲ. ಈ ಬಗ್ಗೆ ನಿರ್ಧಾರ ಕೈಗೊಂಡ ನಂತರ ಯಾವ ಪಕ್ಷ ಅಂತಾ ತಿಳಿಸುತ್ತೇನೆ ಎಂದರು.