ಕೆ.ಆರ್.ಪುರ(ಬೆಂಗಳೂರು): ರಾಮಮೂರ್ತಿನಗರದ ಅಂಬೇಡ್ಕರ್ ನಗರದಲ್ಲಿ ನೂತನ ಸರ್ಕಾರಿ ಶಾಲೆ, ಸಭಾಂಗಣವನ್ನು ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ್ ಉದ್ಘಾಟನೆ ಮಾಡಿದ್ರು. ಇದೇ ವೇಳೆ ಎರಡು ಕೋಟಿ ರೂಪಾಯಿ ನೂತನ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದರು.
ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ 2 ಕೋಟಿ ರೂ. ಅನುದಾನದಲ್ಲಿ ಶಾಲೆ ಕಾಂಪೌಂಡ್, ಹೆಚ್ಚುವರಿ 5 ಕೊಠಡಿಗಳ ನಿರ್ಮಾಣದ ಜೊತೆಗೆ ಮೈದಾನ ಅಭಿವೃದ್ಧಿ, ಶೌಚಾಲಯ ನಿರ್ಮಾಣಕ್ಕೂ ಸಚಿವರು ಗುದ್ದಲಿ ಪೂಜೆ ಸಹ ನೆರವೇರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಚಿವ ಭೈರತಿ ಬಸವರಾಜ್, ಸರ್ಕಾರಿ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿ ನಿಮ್ಮಿಂದ ನಾನು ಈ ಸ್ಥಾನಕ್ಕೆ ಬಂದಿದ್ದೇನೆ. ಕೆಆರ್ ಪುರ ಜನತೆ ಆಶೀರ್ವಾದ ಮಾಡಿದ್ದಕ್ಕೆ ಇವತ್ತು ಸಚಿವನಾಗಿ ರಾಜ್ಯಾದ್ಯಂತ ಪ್ರವಾಸ ಮಾಡಿ ಜನರಸೇವೆ ಮಾಡಲು ಸಾಧ್ಯವಾಗುತ್ತಿದೆ ಎಂದು ತಿಳಿಸಿದರು.
ಪ್ರತಿ ವಿದ್ಯಾರ್ಥಿಗೂ ಉತ್ತಮ ಶಿಕ್ಷಣ ನೀಡುವ ನಿಟ್ಟಿನಲ್ಲಿ ಸರ್ಕಾರ ಹಲವು ಯೋಜನೆಯನ್ನು ರೂಪಿಸಿದ್ದು ಅದನ್ನು ಸಮರ್ಪಕವಾಗಿ ಅನುಷ್ಠಾನ ಮಾಡುವ ಮೂಲಕ ಉತ್ತಮ ಶಿಕ್ಷಣಕ್ಕೆ ಒತ್ತು ನೀಡುವುದಾಗಿ ಹೇಳಿದರು. ಕೆ.ಆರ್ ಪುರ ಕ್ಷೇತ್ರದಲ್ಲಿ ಸರ್ಕಾರಿ ಶಾಲೆಗಳನ್ನು ಉನ್ನತೀಕರಣಗೊಳಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದೆಂದು ತಿಳಿಸಿದರು.
ಅಂಬೇಡ್ಕರ್ ನಗರ ಸರ್ಕಾರಿ ಶಾಲೆಯನ್ನು ಮಾದರಿ ಶಾಲೆಯನ್ನಾಗಿ ಮಾಡುವ ನಿಟ್ಟಿನಲ್ಲಿ ಸ್ವಂತ ಇಚ್ಛೆಯಿಂದ ಇಟ್ಟಾಚಿ ಮಂಜುನಾಥ್ ಅವರು ಶ್ರಮಿಸುತ್ತಿದ್ದು ಮತ್ತಷ್ಟು ಅಭಿವೃದ್ಧಿಗೆ ಕೈಜೋಡಿಸುವುದಾಗಿ ಹೇಳಿದರು.
ಇದಕ್ಕೂ ಮುನ್ನ ಕ್ಷೇತ್ರದ ಕಲ್ಕೆರೆಯ ಎನ್. ಆರ್. ಐ. ಬಡಾವಣೆಯಲ್ಲಿ 4 ಕೋಟಿ ರೂಪಾಯಿಗಳ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿದರು.ಈ ಭಾಗದಲ್ಲಿ ಕುಡಿಯುವ ನೀರು, ರಸ್ತೆ, ಸೇರಿದಂತೆ ಮೂಲಭೂತ ಸೌಕರ್ಯಗಳನ್ನು ಒದಗಿಸುವ ಮೂಲಕ ಸಮರ್ಪಕ ಬೆಳವಣಿಗೆಗೆ ಕ್ರಮ ಕೈಗೊಳ್ಳಲಾಗುವುದೆಂದು ತಿಳಿಸಿದರು.