ಬೆಂಗಳೂರು :ಮರಾಠಿ ಪೇಶ್ವೆಗಳ ಡಿಎನ್ಎ ಇರುವ ವ್ಯಕ್ತಿಯನ್ನು ಕರ್ನಾಟಕಕ್ಕೆ ಮುಖ್ಯಮಂತ್ರಿ ಮಾಡಲು ಬಿಜೆಪಿ ಮತ್ತು ಆರ್ಎಸ್ಎಸ್ ಹೊರಟಿವೆ ಎಂದು ಹೇಳಿದ್ದೇನೆಯೇ ಹೊರತು, ರಾಜ್ಯದ ಬ್ರಾಹ್ಮಣ ಸಮುದಾಯವನ್ನು ನಾನೆಲ್ಲೂ ನಿಂದಿಸಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರು ಸ್ಪಷ್ಟಪಡಿಸಿದ್ದಾರೆ. ಯಶವಂತಪುರ ವಿಧಾನಸಭೆ ಕ್ಷೇತ್ರದ ಮುಖಂಡರು ಹಾಗೂ ಕಾರ್ಯಕರ್ತರ ಸಭೆಯಲ್ಲಿ ಪಾಲ್ಗೊಂಡು ನಂತರ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ನನ್ನ ಹೇಳಿಕೆಯನ್ನು ತಿರುಚುವ ಪ್ರಯತ್ನವನ್ನು ವ್ಯವಸ್ಥಿತವಾಗಿ ನಡೆಸಲಾಗುತ್ತಿದೆಯೇ ಹೊರತು ನಾನು ಎತ್ತಿದ ವಿಷಯದ ಬಗ್ಗೆ ಚರ್ಚೆ ಮಾಡುತ್ತಿಲ್ಲ ಎಂದರು.
ಪೇಶ್ವೆಗಳ ಡಿಎನ್ಎ ಇರುವ ವ್ಯಕ್ತಿಯನ್ನು ಸಿಎಂ ಮಾಡಲು ಬಿಜೆಪಿಯವರು ಹುನ್ನಾರ ಮಾಡಿದ್ದಾರೆ ಅಂತ ಹೇಳಿದ್ದೇನೆ. ಇದಕ್ಕೆ ಗಾಬರಿ ಯಾಕೆ? ಬ್ರಾಹ್ಮಣ ಸಮುದಾಯವೂ ಸೇರಿ ನಾನು ಯಾವುದೇ ಸಮಾಜಕ್ಕೆ ಅಗೌರವ ತೋರಿಲ್ಲ. ತೋರುವುದೂ ಇಲ್ಲ ಎಂದು ಎಂದು ಸ್ಪಷ್ಟ ಮಾತುಗಳಲ್ಲಿ ಹೇಳಿದರು.
ಬ್ರಾಹ್ಮಣ ಸಮಾಜ ಸುಸಂಸ್ಕೃತ ಸಮಾಜ: ನಾನು ಸಮಾಜದ ಬಗ್ಗೆ ಅಗೌರವ ತೋರಿದ್ದೇನೆ, ಕೆಲವರು ನನ್ನ ಹೇಳಿಕೆಯನ್ನು ತಿರುಚಿ ಮಾತನಾಡುತ್ತಿದ್ದಾರೆ. ದೇಶದ ಇತಿಹಾಸದಲ್ಲಿ ನಡೆದ ಬೆಳವಣಿಗೆ ಬಗ್ಗೆ ಹೇಳಿದ್ದೇನೆ. ನಿನ್ನೆ ನಾನು ಕೊಟ್ಟ ಹೇಳಿಕೆ ಬ್ರಾಹ್ಮಣ ಸಮಾಜದ ಅವಹೇಳನ ಅಲ್ಲ. ಕರ್ನಾಟಕದಲ್ಲಿ ಇರುವ ಬ್ರಾಹ್ಮಣ ಸಮಾಜ ಸುಸಂಸ್ಕೃತ ಸಮಾಜ. ಆ ಬ್ರಾಹ್ಮಣ ಸಮಾಜದ ಬಗ್ಗೆ ನನಗೆ ಗೌರವ ಇದೆ. ನಮ್ಮ ಕುಟುಂಬ ಬ್ರಾಹ್ಮಣ ಸಮಾಜ ಮತ್ತು ಶೃಂಗೇರಿ ಮಠದ ಬಗ್ಗೆ ಗೌರವ ಇಟ್ಟುಕೊಂಡು ನಡೆದುಕೊಂಡು ಬಂದಿದೆ ಎಂದು ಮಾಜಿ ಮುಖ್ಯಮಂತ್ರಿ ಅವರು ಪ್ರಶ್ನೆಯೊಂದಕ್ಕೆ ಉತ್ತರ ನೀಡಿದರು.
ಪ್ರಲ್ಹಾದ್ ಜೋಶಿ ವಿರುದ್ಧ ಕುಮಾರಸ್ವಾಮಿ ತೀವ್ರ ವಾಗ್ದಾಳಿ : ಒಳ್ಳೆಯ ಬಿತ್ತನೆಯ ಬೆಲೆಯಲ್ಲಿ ಪಾರ್ಥೇನಿಯಂ ಬೆಳೆದಂತೆ ಆಗಿದೆ ಬಿಜೆಪಿಯ ಪರಿಸ್ಥಿತಿ. ಪ್ರಲ್ಹಾದ್ ಜೋಶಿ ಅಂತಹ ಪಾರ್ಥೇನಿಯಂ ಹಿಂದೆ ನಿತೀಶ್ ಕುಮಾರ್ ಅವರ ಡಿಎನ್ಎ ಬಗ್ಗೆ ಪ್ರಧಾನಿ ಮೋದಿ ಸೇರಿ ಬಿಜೆಪಿಯವರು ಟೀಕೆ ಮಾಡಿಲ್ಲವೇ? ನಾನು ಮಾತನಾಡಿದರೆ ಮಾತ್ರ ಇವರು ಅದಕ್ಕೆ ವಿವಾದದ ಸ್ವರೂಪ ಕೊಡುತ್ತಿದ್ದಾರೆ. ಇವರ ಉದ್ದೇಶ ಎಂಥದ್ದು ಎಂಬುದನ್ನು ಇದರಿಂದ ಅರಿಯಬಹುದು ಎಂದು ಬಿಜೆಪಿ ಮತ್ತು ಪ್ರಹ್ಲಾದ್ ಜೋಶಿ ವಿರುದ್ಧ ಕುಮಾರಸ್ವಾಮಿ ತೀವ್ರ ವಾಗ್ದಾಳಿ ನಡೆಸಿದರು.