ಬೆಂಗಳೂರು: "ದೀಪಾವಳಿ ಸಂದರ್ಭದಲ್ಲಿ ನಮ್ಮ ಮನೆಯಲ್ಲಿ ನಡೆದ ಅಚಾತುರ್ಯದ ಬಗ್ಗೆ ನಾನು ವಿಷಾದ ವ್ಯಕ್ತಪಡಿಸುತ್ತೇನೆ. ಈಗಾಗಲೇ ನನಗೆ ಕರೆಂಟ್ ಕಳ್ಳ ಎನ್ನುವ ಲೇಬಲ್ ಅನ್ನು ಸಿಎಂ, ಡಿಸಿಎಂ ಹಾಗೂ ಅವರ ಪಟಾಲಂ ಸೇರಿ ಇಟ್ಟಿದ್ದಾರೆ. ನನ್ನನ್ನು ಕರೆಂಟ್ ಕಳ್ಳ ಎನ್ನುವ ಇವರ ಆರೋಪಗಳಿಗೆಲ್ಲ ನಾನು ಹೆದರಲ್ಲ. ನಿಮ್ಮಷ್ಟು ಕಳ್ಳತನ ನಾನು ಮಾಡಿಲ್ಲ. ಬೆಸ್ಕಾಂ ನೀಡಿರುವ ಬಿಲ್ ಹಾಗೂ ದಂಡ ಕಟ್ಟಿದ್ದೇನೆ. ಇನ್ನು ಮುಂದೆ ಕರೆಂಟ್ ಕಳ್ಳ ಎನ್ನುವುದನ್ನು ನಿಲ್ಲಿಸಬೇಕು" ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.
ಜೆ.ಪಿ.ಭವನದಲ್ಲಿರುವ ಜೆಡಿಎಸ್ ಕಚೇರಿಯಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, "ದೀಪಾವಳಿ ಸಮಯದಲ್ಲಿ ನಮ್ಮ ಮನೆಯಲ್ಲಿ ಅಚಾತುರ್ಯ ಆಗಿದೆ. ಅದಕ್ಕೆ ನಾನು ವಿಷಾದ ವ್ಯಕ್ತಪಡಿಸುತ್ತೇನೆ. ಲೈಟಿಂಗ್ ಹಾಕಿದ್ದಕ್ಕೆ ಹೆಚ್ಚು ವಿದ್ಯುತ್ ಖರ್ಚಾಗಲ್ಲ. ಲೈಟಿಂಗ್ ಹಾಕಿದ್ದಕ್ಕೆ 1 ಕಿಲೋ ವ್ಯಾಟ್ಗಿಂತಲೂ ಕಡಿಮೆ ವಿದ್ಯುತ್ ಉಪಯೋಗ ಆಗಲಿದೆ. ಆದರೆ ಇವರು 2.5 ಕಿಲೋ ವ್ಯಾಟ್ಗೆ ಲೆಕ್ಕ ತೆಗೆದುಕೊಂಡು, 7 ದಿನಗಳಿಗೆ 71 ಯುನಿಟ್ ಆಗಲಿದೆ ಎಂದು ಬಿಲ್ ಕೊಟ್ಟಿದ್ದಾರೆ. 71 ಯೂನಿಟ್ಗೆ ಮೂರು ಪಟ್ಟು, 68,526 ರೂಪಾಯಿ ದಂಡ ವಿಧಿಸಿದ್ದಾರೆ. ಆ ಬಿಲ್ನಲ್ಲಿ ಅವರ ಲೆಕ್ಕಾಚಾರದಲ್ಲಿ 2.5 ಕಿಲೋ ವ್ಯಾಟ್ ವಿದ್ಯುತ್ ಉಪಯೋಗ ಆಗಿದೆ ಅಂತ ಹಾಕಿದ್ದಾರೆ. ಈ ಬಿಲ್ ಅನ್ನು ಮರು ಪರಿಶೀಲನೆ ಮಾಡಬೇಕು. ನಮ್ಮ ಮನೆಯಲ್ಲಿ 33 ಕಿಲೋ ವ್ಯಾಟ್ ಪರ್ಮಿಷನ್ ತೆಗೆದುಕೊಂಡಿದ್ದೇನೆ. ನಾನು ನಿತ್ಯ ಉಪಯೋಗ ಮಾಡುವ ಕರೆಂಟ್ ಇದು. ಈ ಬಗ್ಗೆ ಮರುಪರಿಶೀಲನೆ ಆಗಬೇಕು." ಎಂದು ಒತ್ತಾಯಿಸಿದರು.
"ನಾನು ಮಹಜರು ಕಾಪಿ ಕೇಳಿದ್ದೆ. ನೀವು ಕೊಟ್ಟಿರುವ ಬಿಲ್ ಕೂಡ ಸರಿ ಇಲ್ಲ ಎಂದು ಪ್ರತಿಭಟನೆ ಕೂಡ ಮಾಡಿದ್ದೇನೆ. ಅವರು ಹಾಕಬೇಕಿದ್ದ ಬಿಲ್ 2,526 ರೂಪಾಯಿ ಆಗಬೇಕಿತ್ತು. ಆದರೆ ಅವರು 66 ಸಾವಿರ ರೂ ಬಿಲ್ ಕೊಟ್ಟಿದ್ದಾರೆ. ಮಾಜಿ ಸಿಎಂ ಆಗಿ ನನ್ನ ಪರಿಸ್ಥಿತಿಯೇ ಹೀಗೆ. ಇನ್ನು ಜನಸಾಮಾನ್ಯರ ಪರಿಸ್ಥಿತಿ ಹೇಗಿರಬಹುದು? ಪ್ರತಿ ವರ್ಷ ಮಾಡುವ ಕನಕಪುರ ಉತ್ಸವಕ್ಕೆ ಎಲ್ಲಿಂದ ಕರೆಂಟ್ ಬಳಕೆ ಆಗುತ್ತದೆ? ಕಾಂಗ್ರೆಸ್ನವರು ಪಾದಯಾತ್ರೆ ಮಾಡಿದಾಗ ಎಲ್ಲಿಂದ ಕರೆಂಟ್ ತೆಗೆದುಕೊಂಡಿದ್ದರು. ಕನಕಪುರ ಉತ್ಸವಕ್ಕೆ ಇಡಿ ಊರಿಗೇ ಜನರೇಟರ್ ಹಾಕ್ತಾರಾ" ಎಂದು ಪ್ರಶ್ನಿಸಿದ್ದಾರೆ.
ಯತೀಂದ್ರ ಸಿದ್ದರಾಮಯ್ಯ ಆಡಿಯೋ ವಿಚಾರ:"ಕಾಲ್ನಲ್ಲಿಮಾತನಾಡಿದ್ದುಹಣದ ವ್ಯವಹಾರ ಅಥವಾ ವರ್ಗಾವಣೆಯ ಬಗ್ಗೆ ಅಲ್ಲ ಎಂದು ನಾನು ಒಪ್ಪಿಕೊಳ್ಳುತ್ತೇನೆ ಎಂದು ಹೆಚ್.ಡಿ.ಕುಮಾರಸ್ವಾಮಿ ವ್ಯಂಗ್ಯವಾಡಿದರು. ಎಂಎಲ್ಎ ಅಲ್ಲದಿದ್ದರೂ ಜನರ ಸೇವೆ ಮಾಡುತ್ತಿದ್ದಾರಂತೆ, ಅದಕ್ಕೆ ನಾನು ಅಭಿನಂದಿಸುತ್ತೇನೆ" ಎಂದು ಹೇಳಿದರು.
"ಕುಮಾರಸ್ವಾಮಿ ಹತಾಶೆ, ಮಾನಸಿಕ ಸ್ಥಿಮಿತ ಕಳೆದುಕೊಂಡವರಂತೆ ವರ್ತಿಸುತ್ತಿದ್ದಾರೆ. ವಿದ್ಯುತ್ ಕಳ್ಳತನವನ್ನೂ ಮಾಡಿದ್ದಾರೆ ಎಂದು ಕಾಂಗ್ರೆಸ್ ಎಕ್ಸ್ನಲ್ಲಿ ಪೋಸ್ಟ್ ಮಾಡಿದೆ. ಪೆನ್ಡ್ರೈವ್ ನಾಟಕ ಠುಸ್ ಎನ್ನುತ್ತಾರೆ. ಅಂದು ಎಷ್ಟು ಜನ ಮಂತ್ರಿಗಳಿಗೆ ಕಾಲ್ ಮಾಡಿದ್ರಿ? ದಯವಿಟ್ಟು ಬಿಟ್ ಬಿಡಿ, ನಿಮ್ಮ ಋಣದಲ್ಲಿ ಇದ್ದೇವೆ ಎಂದಿದ್ರು. ಆದರೆ ಕೇವಲ ಪೆನ್ಡ್ರೈವ್ ತೋರಿಸಿದ್ದಕ್ಕೇ ಎಷ್ಟು ಜನ ಮಂತ್ರಿಗಳು ನಿದ್ದೆ ಬಿಟ್ರಿ?" ಎಂದು ವ್ಯಂಗ್ಯವಾಡಿದರು.