ಬೆಂಗಳೂರು: ನಾನು ಸ್ಪೀಕರ್ ಸ್ಥಾನದಲ್ಲಿ ನೀಡಿದ ತೀರ್ಪಿನ ವಿಚಾರದಲ್ಲಿ ತಪ್ಪಿಲ್ಲ, ಕ್ಷಮೆ ಕೋರುವ ಅಗತ್ಯವಿಲ್ಲ ಎಂದು ಮಾಜಿ ಸ್ಪೀಕರ್ ರಮೇಶ್ ಕುಮಾರ್ ತಿಳಿಸಿದ್ದಾರೆ.
ವಿಧಾನಸಭೆಯಲ್ಲಿ ಮಾತನಾಡಿ, ನಾನು ಒಂದು ಪಕ್ಷದಿಂದ ಬಂದಿರುವಾಗ ಒಂದಿಷ್ಟು ಅದರ ಪ್ರಭಾವ ಇದ್ದೇ ಇರುತ್ತದೆ. ಸುಪ್ರೀಂ ಕೋರ್ಟ್ ನೀಡಿದ ತೀರ್ಪಲ್ಲಿ ನನ್ನ ತೀರ್ಪಿನ ಹೆಚ್ಚಿನ ಅಂಶಕ್ಕೆ ಬೆಂಬಲ ಸಿಕ್ಕಿದೆ. ಕೆಲವಕ್ಕೆ ಭಿನ್ನ ವಿವರಣೆ ಸಿಕ್ಕಿದೆ. ಶಹಬ್ಬಾಷ್ ಎಂದಿರುವ ಹಿಂದೆ ಅದೇ ವಿಚಾರ ಇರಬಹುದು. ಪೂರ್ವಾಶ್ರಮದ ನೆನಪು ಕೆಲ ಬಾರಿ ಬರುತ್ತದೆ. ಸಭಾಧ್ಯಕ್ಷನಾಗಿ ನಾನು ನನ್ನ ಜವಾಬ್ದಾರಿಯನ್ನು ನಿರ್ವಹಿಸಿ ಎದ್ದುಹೋಗಿದ್ದೇನೆ. ಸಮಾಜದ ತೀರ್ಪಿಗೆ ಬಿಟ್ಟು ಹೊರಟು ಹೋಗಿದ್ದೆ. ನನಗೆ ಏನು ಸರಿ ಅನ್ನಿಸಿತು ಆ ತೀರ್ಪು ನೀಡಿದ್ದೇನೆ. ಪಕ್ಷದ ಯಾವೊಬ್ಬ ನಾಯಕರ ಮಾತಿಗೂ ಬಗ್ಗಿಲ್ಲ ಎಂದರು.
ನಂತರ ಮಾತನಾಡಿ, ಆತ್ಮಸಾಕ್ಷಿಯಾಗಿ ಹೇಳ್ತೇನೆ, ಸುಳ್ಳು ಹೇಳುವ ಅನಿವಾರ್ಯ ನನಗಿಲ್ಲ. ಸುಧಾಕರ್ ಹೇಳುತ್ತಿರುವ ಅವಹೇಳನಕಾರಿ ಮಾತನ್ನು ನಾನು ಆಡಿಲ್ಲ ಎಂದ ಅವರು, ನಿನ್ನೆ ನನ್ನ ಬಗ್ಗೆ ಒಬ್ಬರು ಆರೋಪಿಸುತ್ತಿದ್ರು, ಹೌದು, ನಾನು ಕೊಲೆ ಮಾಡಿಸಿದ್ದೇನೆ, ಸಾಕಷ್ಟು ಹಣ ಇದೆ, ವಿದೇಶದಲ್ಲಿ ಹಣ ಇಟ್ಟಿದ್ದೇನೆ. ಇಲ್ಲಿನ ಬ್ಯಾಂಕ್ ಮೇಲೆ ವಿಶ್ವಾಸ ಇಲ್ಲ ಎಂದು ವ್ಯಂಗ್ಯವಾಡಿದರು.